Advertisement

Karnataka: ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ 558 ಕೋಟಿ ರೂ.: ಕೃಷ್ಣ ಬೈರೇಗೌಡ

09:12 PM Jul 21, 2023 | Team Udayavani |

ವಿಧಾನಸಭೆ: ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್‌ ಕೃಷಿ ಬೆಳೆ ಬಿತ್ತನೆ ಗುರಿಯಿತ್ತು. ಈವರೆಗೆ 36.27 ಲಕ್ಷ ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. 64,188 ಹೆಕ್ಟೇರ್‌ ತೋಟಗಾರಿಕಾ ಬೆಳೆ ಬಿತ್ತನೆಯಾಗಿದ್ದು, ನಿರೀಕ್ಷಿತ ಗುರಿಗಿಂತ ಶೇ.23ರಷ್ಟು ಮಾತ್ರ ಬಿತ್ತನೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Advertisement

ವಿಧಾನಸಭೆಯಲ್ಲಿ ಮುಂಗಾರು ಕೊರತೆ ಸಂಬಂಧ ಚರ್ಚೆಯಲ್ಲಿ ಮಾತನಾಡಿ, ಕಳೆದ ಬಾರಿ ಇದೇ ವೇಳೆಗೆ 73,218 ಹೆಕ್ಟೇರ್‌ ತೋಟಗಾರಿಕಾ ಬೆಳೆ ಬಿತ್ತನೆಯಾಗಿತ್ತು. ರಾಜ್ಯದಲ್ಲಿ 1.15 ಕೋಟಿ ದನಕರುಗಳು ಹಾಗೂ 1.55 ಕೋಟಿ ಕುರಿ, ಮೇಕೆಗಳಿದ್ದು, 1.55 ಕೋಟಿ ಟನ್‌ ಮೇವು ಲಭ್ಯವಿದೆ. 29 ವಾರಗಳ ಬಳಕೆಗೆ ಸಾಕಾಗುತ್ತದೆ. 13 ವಾರಗಳಿಗಿಂತ ಕಡಿಮೆ ಮೇವು ಹೊಂದಿರುವ ಯಾವುದೇ ಜಿಲ್ಲೆ ಇಲ್ಲ. ಮೇವು ಕೊರತೆ ಆಗದಂತೆ ರೈತರಿಗೆ ಮೇವಿನ ಬೀಜ ವಿತರಿಸಿ, ಮೇವು ಬೆಳೆಯಲು ಪ್ರೋತ್ಸಾಹಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಪಿ.ಡಿ. ಖಾತೆಯಲ್ಲಿ 558.38 ಕೋಟಿ ರೂ. ಅನುದಾನ ಲಭ್ಯವಿದ್ದು, ಅನುದಾನದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೇಲ್ಮನೆಯಲ್ಲೂ ಸಿಎಂ ಭರವಸೆ
ವಿಧಾನ ಪರಿಷತ್ತು: ರಾಜ್ಯದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಕುಡಿಯುವ ನೀರಿಗೆ ಹಣಕಾಸಿನ ಕೊರತೆ ಇಲ್ಲ. ಎಷ್ಟೇ ಖರ್ಚಾದರೂ ಕೊಳವೆಬಾವಿ, ಟ್ಯಾಂಕರ್‌ಗಳಿಂದ ಜನರಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲಾಗುವುದು. ಯಾವುದೇ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಮರಿತಿಬ್ಬೇಗೌಡ, ರಾಜ್ಯದಲ್ಲಿ ಮಳೆ ಕೊರತೆ ಇದೆ. ಬರದಛಾಯೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗಮನಸೆಳೆದರು. ಆಗ ಮುಖ್ಯಮಂತ್ರಿ ಈ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next