ಚಾಮರಾಜನಗರ/ಕೊಳ್ಳೇಗಾಲ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ ನೀಡಲಾಗುವ ರಾಜ್ಯ ಸರ್ಕಾರದ, 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಿಂದ ಜಿಲ್ಲೆಯ ಪ್ರಮುಖ ಸಾಹಿತಿ, ಕವಿ, ಮಹಾದೇವ ಶಂಕನಪುರ ಆಯ್ಕೆಯಾಗಿದ್ದಾರೆ.
ಮಹಾದೇವ ಅವರು ಕೊಳ್ಳೇಗಾಲ ಪಕ್ಕದ ಶಂಕನಪುರ ಗ್ರಾಮದವರು. ನಿವೃತ್ತ ಸಹಾಯಕ ಪ್ರಾಧ್ಯಾಪಕರು. ವಿಶೇಷವಾಗಿ ಜಾನಪದ ಆಧಾರಿತ ಕೃತಿಗಳ ಲೇಖಕರು. ಮಾರಿಹಬ್ಬಗಳು, ಮಂಟೇಸ್ವಾಮಿ ಮೂವ್‌ಮೆಂಟ್, ಚಿಕ್ಕಲ್ಲೂರು ಜಾತ್ರೆ, ಚಾಮರಾಜನಗರ ಜಿಲ್ಲೆಯ ಜನಪದ ಕಲಾವಿದರ ಪರಿಚಯ, ನಾಲಿಗೆ ಮೇಲಿನ ಚರಿತೆ ಲೇಖನಗಳ ಸಂಗ್ರಹ, ಉರಿಗದ್ದಿಗೆ ಮೇಲೆ ಬೋಳು ಜಂಗಮನ ತಂಬೂರಿ ಪದ, ಮಲೆಯ ಮಾದಯ್ಯನ ಸಾಂಸ್ಕೃತಿಕ ಜಾತ್ರೆ, ಮಂಟೇಸ್ವಾಮಿ ಮೌಖಿಕ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಮಾರಿಹಬ್ಬಗಳೂ ಕೃತಿಗೆ 2002 ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2002 ಮೈಸೂರು ವಿಶ್ವವಿದ್ಯಾಲಯದ ತೀನಂಶ್ರೀ, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ ಪ್ರಶಸ್ತಿ, ಮಂಟೇಸ್ವಾಮಿ ಪ್ರತಿಷ್ಠಾನ, ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಗಳು ದೊರೆತಿವೆ. ಕವಿಯಾಗಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಮಹಾದೇವ ಅವರ ಅನೇಕ ಕವಿತೆಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿ, ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ.
ಕೊಳ್ಳೇಗಾಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಈಶಾನ್ಯ ಭಾರತ ರಾಜ್ಯಗಳ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಪ್ರಶಸ್ತಿ ಬಂದಿದ್ದು ಸಂತಸ ತಂದರೂ, ನಮ್ಮ ಜಿಲ್ಲೆಯ ರಾಯಭಾರಿ ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆಯ ಸನ್ನಿವೇಶದಲ್ಲಿ ಆ ಸಂಭ್ರಮವನ್ನು ಆಸ್ವಾದಿಸಲಾಗುತ್ತಿಲ್ಲ ಎಂದು ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕವಿ ಮಹಾದೇವ ಶಂಕನಪುರ ಪ್ರತಿಕ್ರಿಯಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಉದಯವಾಣಿ ಅವರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿಸಿದಾಗ, ಖ್ಯಾತ ನಟ ಪುನೀತ್ ರಾಜ್‌ಕುಮಾರ್ ನಿಧನರಾಗಿದ್ದಾರೆ. ಕನ್ನಡ ನಾಡು ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಿದೆ. ಅವರು ನಮ್ಮ ಜಿಲ್ಲೆಯವರು, ನಮ್ಮ ಮಣ್ಣಿನ ಮಕ್ಕಳು. ಇಂಥ ಸೂತಕದ ಛಾಯೆಯ ಸಂದರ್ಭದಲ್ಲಿ ಪ್ರಶಸ್ತ್ತಿ ಘೋಷಣೆಯಾಗಿದೆ. ಇದು ವೈಯಕ್ತಿಕವಾಗಿ ಒಂದು ಕಡೆ ಸಂತೋಷವಾದರೂ, ಸಾರ್ವಜನಿಕವಾಗಿ ಸಂಭ್ರಮಿಸಲು ಆಗುತ್ತಿಲ್ಲ. ನಮ್ಮ ಮನೆಯ ಬಂಧುವನ್ನು ಕಳೆದುಕೊಂಡಂತಾಗಿದೆ. ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಕನ್ನಡ ಭಾಷೆ ಸಂಸ್ಕೃತಿಯ ಅಸ್ಮಿತೆಯಾಗಿದ್ದರು. ಈ ಘಳಿಗೆ ಪ್ರಶಸ್ತಿ ಸಂಭ್ರಮ ಆಸ್ವಾದಿಸಲಾಗುತ್ತಿಲ್ಲ ಎಂದರು.
ಪ್ರಶಸ್ತಿ ಬಂದಿದ್ದು, ಇಲ್ಲಿಯವರೆಗೆ ಮಾಡಿದ ಸಾಹಿತ್ಯದ ಕೆಲ ಗುರುತಿಸಿ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಮೊದಲು ನಾವೇ ಅರ್ಜಿ ಹಾಕಬೇಕಿತ್ತು. ಆದರೆ ಈ ಬಾರಿ ವಿನೂತನ ರೀತಿಯಲ್ಲಿ ಜನರು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿಗೆ ನನ್ನನ್ನು ನಾಮಕರಣ ಮಾಡಿದ, ಹಿತೈಷಿಗಳು, ನನ್ನ ವಿದ್ಯಾರ್ಥಿಗಳು, ಸಾರ್ವಜನಿಕರೆಲ್ಲರಿಗೂ ಕೃತಜ್ಞತೆಗಳು ಎಂದರು.
ಈ ಪ್ರಶಸ್ತಿಯನ್ನು ಜಿಲ್ಲೆಯ ಮಹಾಕಾವ್ಯಗಳನ್ನು ಕಟ್ಟಿ ಬೆಳೆಸಿದ ಜನಪದ ಗಾಯಕರಿಗೆ ಅರ್ಪಿಸುತ್ತೇನೆ.. ಮಲೆ ಮಹದೇಶ್ವರ, ಮಂಟೆಸ್ವಾಮಿ, ಬಿಳಿಗಿರಿರಂಗಯ್ಯ, ಮುಡುಕುತೊರೆ ಮಲ್ಲಯ್ಯ ಈ ಮಹಾಕಾವ್ಯಗಳನ್ನು ಕಟ್ಟಿದವರು ನನ್ನ ಸಾಹಿತ್ಯದ ಮೂಲ ಬೇರುಗಳು. ಸಂಸ್ಕೃತಿಯ ನಿರ್ಮಾತೃಗಳು. ನನಗೆ ಸಂದಿರುವ ಈ ಪ್ರಶಸ್ತಿಯನ್ನು ಮೌಖಿಕ ಪರಂಪರೆಯ ವಕ್ತಾರರಿಗೆ ಅರ್ಪಿಸುತ್ತೇನೆ ಎಂದು ಮಹಾದೇವ ವಿನೀತರಾಗಿ ನುಡಿದರು.