Advertisement

ಕಂಠೀರವದಲ್ಲಿ ಕನ್ನಡ ಡಿಂಡಿಮ…ಗಮನಸೆಳೆಯಲಿರುವ ನೃತ್ಯರೂಪಕ, ಚಿತ್ರಕಲಾ ಪ್ರದರ್ಶನ

09:58 AM Nov 01, 2019 | Sriram |

ಬೆಂಗಳೂರು: ನಾಡಹಬ್ಬ ಕನ್ನಡ ರಾಜ್ಯೋತ್ಸವಕ್ಕೆ ನಗರದ ಕಂಠೀರವ ಕ್ರೀಡಾಂಗಣ ಸಿಂಗಾರಗೊಂಡಿದ್ದು, ಶುಕ್ರವಾರ ಇಲ್ಲಿ ಕನ್ನಡ ಡಿಂಡಿಮ ಮೊಳಗಲಿದೆ.

Advertisement

ಸುಮಾರು 71 ಶಾಲೆಗಳ 7,200ಕ್ಕೂ ಹೆಚ್ಚು ಮಕ್ಕಳು, ಕಲಾ ಶಿಕ್ಷಕರು ನೃತ್ಯರೂಪಕ ಮತ್ತು ಚಿತ್ರಕಲಾ ಪ್ರದರ್ಶನದ ಮೂಲಕ ಕನ್ನಡಾಂಬೆಗೆ ನಮನ ಸಲ್ಲಿಸಲಿದ್ದಾರೆ. ವಿವಿಧ ಶಾಲೆಗಳ ಸಾವಿರಾರು ಶಿಕ್ಷಕರು, ಮಕ್ಕಳು, ಕನ್ನಡಾಭಿಮಾನಿಗಳು ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಸಂಬಂಧದ ಎಲ್ಲ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12.20ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. 7,200 ಮಕ್ಕಳಿಂದ ಎಂಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 12 ಶಾಲೆಗಳ ಮಕ್ಕಳ ತಂಡದಿಂದ ಪಥಸಂಚಲನ ನಡೆಯಲಿದೆ. ಇದಲ್ಲದೆ, ಚಿತ್ರಕಲಾ ಶಿಕ್ಷಕರಿಂದ ನಾಡಿನ ಖ್ಯಾತ ಕವಿಗಳ ಭಾವಚಿತ್ರಗಳ ಪ್ರದರ್ಶನ ಈ ಬಾರಿಯ ಪ್ರಮುಖ ಆಕರ್ಷಣೆ ಆಗಿರಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಎರಡು ಬಾರಿ ಪೂರ್ವಭಾವಿ ಸಭೆ ನಡೆಸಿ, ಮಕ್ಕಳಿಗೂ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಸಿಎಂ ಚಾಲನೆ
ಅಂದು ಬೆಳಿಗ್ಗೆ 9ಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಲಿದ್ದು, ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ, ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ, ಲಕ್ಷ್ಮಣ ಸವದಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ನಿರ್ಮಲಾ ಸೀತಾರಾಮನ್‌ ಮತ್ತಿತರರು ಉಪಸ್ಥಿತರಿರುವರು. ಅತಿಥಿಗಳು ಆಗಮಿಸುತ್ತಿದ್ದಂತೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ನಂತರ ರಾಷ್ಟ್ರಧ್ವಜಾರೋಹಣ ಹಾಗೂ ರಾಷ್ಟ್ರಗೀತೆ ಮೊಳಗಲಿದೆ. ತದನಂತರ ರಾಜ್ಯದ ಧ್ವಜಾರೋಹಣ ಹಾಗೂ ನಾಡಗೀತೆ ಮೊಳಗಲಿದೆ. ಇದಾದ ಬಳಿಕ ಮುಖ್ಯಮಂತ್ರಿಗಳು ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ವೀರ ಮದಕರಿ ನಾಯಕ, ಸುಗ್ಗಿಕಾಲ ಹಿಗ್ಗಿ ಬಂದಿತು, ಅರಳುವ ಪುಷ್ಪಗಳು, ಕಿತ್ತೂರು ರಾನಿ ಚೆನ್ನಮ್ಮ, ಎಳೆಯೋಣು ಬಾರ ಕನ್ನಡದ ತೇರ ನೃತ್ಯ ರೂಪಕಗಳನ್ನು ಮಕ್ಕಳು ಪ್ರದರ್ಶಿಸಲಿದ್ದಾರೆ. ಯೋಗಾಸನ ಹಾಗೂ ಕೊನೆಗೆ ಸಾಮೂಹಿಕ ಕವಾಯತು ಗಮನಸೆಳೆಯಲಿದೆ. ಮಕ್ಕಳಿಗೆ ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next