Advertisement

ಪಿಎಸ್‌ಐ ನೇಮಕಾತಿ ಹಗರಣ: ಇಂದು ಟಾಪರ್‌ ವಿಚಾರಣೆ;ನೀರಾವರಿ ಇಲಾಖೆ ಎಂಜಿನಿಯರ್‌ ಕಿಂಗ್‌ಪಿನ್‌?

12:50 AM Apr 20, 2022 | Team Udayavani |

ಬೆಂಗಳೂರು/ಕಲಬುರಗಿ: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಪಿಎಸ್‌ಐ ನೇಮಕಾತಿ ಹಗರಣವು ಈಗ ಪರೀಕ್ಷೆಯ ಟಾಪರ್‌ಗಳ ಕೊರಳಿಗೆ ಸುತ್ತಿಕೊಳ್ಳಲಾರಂಭಿಸಿದೆ.

Advertisement

ಸಿಐಡಿ ಪೊಲೀಸರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಟಾಪ್‌ 50 ಅಭ್ಯರ್ಥಿಗಳಿಗೆ ನೋಟಿಸ್‌ ಜಾರಿ ಮಾಡಿ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಸಿಐಡಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. 545 ಅಭ್ಯರ್ಥಿಗಳ ಪೈಕಿ 50 ಮಂದಿಗೆ ನೋಟಿಸ್‌ ಜಾರಿಯಾಗಿದ್ದು, ಬುಧವಾರ ಈ ಅಭ್ಯರ್ಥಿಗಳು ಬೆಂಗಳೂರಿನ ಸಿಐಡಿ ಪೊಲೀಸ್‌ ಕಚೇರಿಯಲ್ಲಿ ಪರೀಕ್ಷೆ ಬರೆದ ಒಎಂಆರ್‌ ಕಾರ್ಬನ್‌ ಪ್ರತಿಯೊಂದಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಬೆಳಗ್ಗೆ 10ಕ್ಕೆ ಸಿಐಡಿ ಡಿವೈಎಸ್‌ಪಿ ಪಿ. ನರಸಿಂಹ ಮೂರ್ತಿ ಅವರ ಸಮಕ್ಷಮ ವಿಚಾರಣೆ ನಡೆಯಲಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಿಎಸ್‌ಐ ನೇಮಕಾತಿಯಲ್ಲಿ ಅವ್ಯವಹಾರ ಆರೋಪ ಕೇಳಿಬಂದು, ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸರಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ದಾಳಿ ನಡೆಸಿರುವ ಪೊಲೀಸರು ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 2021ರ ಅ. 3ರಂದು ರಾಜ್ಯದ ಸುಮಾರು 92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 54,104 ಅಭ್ಯರ್ಥಿ ಗಳು ಪರೀಕ್ಷೆಗೆ ಹಾಜರಾಗಿದ್ದರು.

ಕಾಂಗ್ರೆಸ್‌ ಮುತ್ತಿಗೆ ಎಚ್ಚರಿಕೆ
ಮಂಗಳವಾರ ಬಂಧಿತ ಮೂವರು ಅಭ್ಯರ್ಥಿಗಳು ಮತ್ತು ಮೂವರು ಮೇಲ್ವಿಚಾರಕರ ಹೇಳಿಕೆಗಳನ್ನು ಸಿಐಡಿ ಅಧಿಕಾರಿಗಳು ದಿನವಿಡೀ ಅಧಿಕೃತವಾಗಿ ದಾಖಲಿಸಿಕೊಂಡಿದ್ದಾರೆ. ಎ. 21ರಂದು ಸಿಎಂ ಬಸವರಾಜ ಬೊಮ್ಮಾಯಿ ಕಲಬುರಗಿಗೆ ಎರಡು ದಿನಗಳ ಕಾಲ ಆಗಮಿಸಲಿದ್ದಾರೆ. ಅಷ್ಟರೊಳಗೆ ಹಾಗರಗಿ ಬಂಧನವಾಗಬೇಕೆಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಎರಡು ದಿನದೊಳಗೆ ದಿವ್ಯಾ ಹಾಗರಗಿ ಬಂಧನವಾಗದಿದ್ದರೆ ಸಿಎಂಗೆ ಮುತ್ತಿಗೆ ಹಾಕುವುದಾಗಿ ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ.

Advertisement

ದಿವ್ಯಾ ಪತ್ತೆಗೆ ತೀವ್ರ ಶೋಧ
ಹಗರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನಕ್ಕೆ ಸಿಐಡಿ ತಂಡಗಳು ವಿವಿಧ ಸ್ಥಳಗಳಿಗೆ ತೆರಳಿವೆ. ಹಾಗರಗಿ ಒಡೆತನದ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಕಾಶೀನಾಥ ಕೂಡ ನಾಪತ್ತೆಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಮೂಲಗಳ ಪ್ರಕಾರ ನೀರಾವರಿ ಇಲಾಖೆ ಎಂಜಿನಿಯರ್‌ ಇದರ ಹಿಂದಿನ ಕಿಂಗ್‌ಪಿನ್‌ ಎನ್ನಲಾಗಿದೆ. ಈತನೂ 5 ದಿನ ಗಳಿಂದ ನಾಪತ್ತೆ ಯಾಗಿದ್ದಾನೆ. ಈತ ಅಭ್ಯರ್ಥಿಗಳನ್ನು ಸಂಪರ್ಕಿಸಿ ವ್ಯವಹಾರ ಕುದುರಿಸಿದ್ದಲ್ಲದೆ ಉತ್ತರಗಳನ್ನೂ ಪೂರೈಸಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next