ಬೆಂಗಳೂರು: ತಕ್ಷಣವೇ ರಾಜ್ಯಾದ್ಯಂತ ವೈದ್ಯರು ಸೇವೆಗೆ ಹಾಜರಾಗಬೇಕೆಂದು ಹೈಕೋರ್ಟ್ ವಿಭಾಗೀಯ ಪೀಠ ಖಾಸಗಿ ವೈದ್ಯರಿಗೆ ಖಡಕ್ ಆದೇಶ ನೀಡಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಖಾಸಗಿ ವೈದ್ಯರ ಜತೆ ನಡೆಸಿದ ಸಭೆ ಯಶಸ್ವಿಯಾಗಿದೆ. ಇದರೊಂದಿಗೆ ಮುಷ್ಕರ ವಾಪಸ್ ಪಡೆಯಲು ಖಾಸಗಿ ವೈದ್ಯರು ನಿರ್ಧರಿಸುವ ಮೂಲಕ ರಾಜ್ಯ ಸರ್ಕಾರ ಮತ್ತು ಖಾಸಗಿ ವೈದ್ಯರ ನಡುವಿನ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಂತಾಗಿದೆ.
ಭಾರತೀಯ ವೈದ್ಯ ಸಂಘದ ಕರ್ನಾಟಕ ಘಟಕ ಮತ್ತು ವಿವಿಧ ವೈದ್ಯಕೀಯ ಸಂಘಟನೆಗಳು ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿರೋಧಿಸಿ ನ.13ರಿಂದ ಬೆಳಗಾವಿಯಲ್ಲಿ ಮುಷ್ಕರ ನಡೆಸುತ್ತಿದ್ದು, ಪ್ರತಿಭಟನೆ ಶುರುವಾದ ದಿನದಿಂದ ಇಲ್ಲಿವರೆಗೆ ಖಾಸಗಿ ಆಸ್ಪತ್ರೆಗಳ ಒಪಿಡಿ ವಿಭಾಗದ ಸೇವೆ ಸಿಗದ ಪರಿಣಾಮ ಹಲವು ಸಾವು ಸಂಭವಿಸಿತ್ತು.
ಖಾಸಗಿ ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವೈದ್ಯರ ಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವಿಧೇಯಕಕ್ಕೆ ಕೆಲವು ಬದಲಾವಣೆ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಕೊನೆಗೂ ವೈದ್ಯರ ಸಂಘದ ಪದಾಧಿಕಾರಿಗಳು ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಜಾರಿಗೆ ಒಪ್ಪಿಗೆ ಸೂಚಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಹೈಕೋರ್ಟ್ ಚಾಟಿ:
ಏತನ್ಮಧ್ಯೆ ಖಾಸಗಿ ವೈದ್ಯರ ಮುಷ್ಕರ ವಿರೋಧಿಸಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ವೈದ್ಯರ ಮುಷ್ಕರದ ಬಗ್ಗೆ ಕಿಡಿಕಾರಿದ್ದು, ನಿಮಗೆ ಮಾನವೀಯತೆ ಇಲ್ಲವೇ? ನೀವು ವೈದ್ಯರೋ ಅಥವಾ ಮನುಷ್ಯತ್ವ ಮರೆತವರೋ ಎಂದು ಚಾಟಿ ಬೀಸಿತ್ತು. ನಿಮಗೆ ಕಾಯ್ದೆ ಬಗ್ಗೆ ಅಸಮಾಧಾನ ಇದ್ದಿದ್ದರೆ ಕೋರ್ಟ್ ನಲ್ಲಿ ಪ್ರಶ್ನಿಸಿ, ಅದನ್ನು ಬಿಟ್ಟು ನೀವು(ವೈದ್ಯರು) ಬೀದಿಗೆ ಇಳಿದದ್ದು ಯಾಕೆ ಎಂದು ಪ್ರಶ್ನಿಸಿತು. ಕೂಡಲೇ ಮುಷ್ಕರ ವಾಪಸ್ ಪಡೆದು ಸೇವೆಗೆ ತೆರಳುವಂತೆ ಹೈಕೋರ್ಟ್ ಖಡಕ್ ಆದೇಶ ನೀಡಿತ್ತು.