ಬೆಂಗಳೂರು: ಕರ್ನಾಟಕ ಕೈಗಾರಿಕಾ ನೀತಿ ಉತ್ಪಾದನಾ ಕೇಂದ್ರಿತವಾಗಿದ್ದು, ಜಾಗತಿಕ ಮಟ್ಟದ ಕಂಪನಿಗಳು ಇದರ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ “6ನೇ ಚೀನಾ-ಭಾರತ ವಾಣಿಜ್ಯ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿ, 2014-19ರ ಕರ್ನಾಟಕ ಕೈಗಾರಿಕಾ ನೀತಿಯು ಉತ್ಪಾದನಾ ಕೇಂದ್ರಿತವಾಗಿದೆ. ಇಲ್ಲಿ ಬಂಡವಾಳ ಹೂಡುವ ಕಂಪನಿಗಳ ಯೋಜನೆಗಳು ಶೀಘ್ರ ಅನುಷ್ಠಾನಗೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಉನ್ನತ ತಂತ್ರಜ್ಞಾನ ತಾಣದ ಗುರಿ: ಇಂದು ಇಡೀ ವಿಶ್ವ ಭಾರತದ ಕಡೆಗೆ ನೋಡುತ್ತಿದ್ದು, ಎಲ್ಲರನ್ನೂ ಕರ್ನಾಟಕ ತನ್ನತ್ತ ಸೆಳೆಯುತ್ತಿದೆ. ಬಂಡವಾಳ ಹೂಡಿಕೆಗೆ ಪ್ರಾಶಸ್ತ್ಯ ಸ್ಥಳವಾಗಿದ್ದು, ಇಲ್ಲಿನ ಜ್ಞಾನಾಧಾರಿತ ಕೇಂದ್ರಗಳು, ಕೌಶಲ್ಯ, ಯುವಶಕ್ತಿ ಜಾಗತಿಕ ಮಟ್ಟದ ಕಂಪನಿಗಳನ್ನು ಸೆಳೆಯುತ್ತಿದೆ. ಆ ಹಿನ್ನೆಲೆಯಲ್ಲಿ ರಾಜ್ಯವನ್ನು ಉನ್ನತ ತಂತ್ರಜ್ಞಾನದ ತಾಣವನ್ನಾಗಿರುವುದು ಸರ್ಕಾರ ಗುರಿಯಾಗಿದೆ ಎಂದರು.
ಭಾರತ ಹಾಗೂ ಚೀನಾದ ದ್ವಿಪಕ್ಷೀಯ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ವೃದ್ಧಿಸುತ್ತಿರುವುದು ಎರಡೂ ದೇಶಗಳ ಪರಸ್ಪರ ಬೆಳವಣಿಗೆಗೆ ಸಹಕಾರಿಯಾಗಿದೆ. 2000ರಲ್ಲಿ 2.92 ಅಮೆರಿಕ ಬಿಲಿಯನ್ ಡಾಲರ್‌ನಷ್ಟಿದ್ದ ಭಾರತ-ಚೀನಾದ ದ್ವಿಪಕ್ಷೀಯ ವ್ಯಾಪಾರ ವಹಿವಾಟು 2015ರ ವೇಳೆ 70.4 ಬಿಲಿಯನ್ ಡಾಲರ್ ಮುಟ್ಟಿದೆ ಎಂದು ಮಾಹಿತಿ ನೀಡಿದರು.
ಶೇ.25ರಷ್ಟು ಕೊಡುಗೆ: ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಅಮೆರಿಕ, ಇಂಗ್ಲೆಂಡ್, ಜಪಾನ್‌ನಂತಹ ದೇಶಗಳು ಕರ್ನಾಟಕದಲ್ಲಿ ಹೆಚ್ಚಿನ ಬಂಡವಾಳ ಹೂಡುತ್ತಿದ್ದು, ಚೀನಾ ಸಹ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಗರಂ ಆದ ಸಿದ್ದರಾಮಯ್ಯ: ಐಟಿ ದಾಳಿ ವೇಳೆ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ಸೇರುವಂತೆ ಐಟಿ ಅಧಿಕಾರಿಗಳೇ ಹೇಳಿದ್ದರು ಎಂಬ ಹೇಳಿಕೆಗೆ ಐಟಿ ಇಲಾಖೆಯ ಮಹಾನಿರ್ದೇಶಕರ ಸ್ಪಷ್ಟನೆ ವಿಚಾರದ ಕುರಿತು ಪತ್ರಕರ್ತರ ಪ್ರಶ್ನೆಗೆ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಯಾರು ಸ್ಪಷ್ಟನೆ ಕೊಟ್ಟಿರೋದು? ನಾನು ಎಲ್ಲದಕ್ಕೂ ಪ್ರತಿಕ್ರಿಯೆ ನೀಡೋಕೆ ಆಗುತ್ತಾ? ಏನ್ರೀ ಕೇಳ್ತೀರಾ’ ಎಂದಿದ್ದಾರೆ.