Advertisement

ಕಲ್ಯಾಣದ ಅಭಯ; ಕಲ್ಯಾಣ ಕರ್ನಾಟಕಕ್ಕೆ ಇಂದು ಮೋದಿ ಆಗಮನ

11:25 PM Jan 18, 2023 | Team Udayavani |

ಕಲಬುರಗಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಹಾಗೂ ಕಲ್ಯಾಣ ಕರ್ನಾಟಕದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಬಿಜೆಪಿ ಪಾಲಿಗೆ ಲಂಬಾಣಿ ಮತಬ್ಯಾಂಕ್‌ ಗಟ್ಟಿಗೊಳಿಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ.

Advertisement

ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತನೆ ಜತೆಗೆ ಗಿನ್ನೆಸ್‌ ದಾಖಲೆ ಎನ್ನಲಾದ ಏಕಕಾಲಕ್ಕೆ 51 ಸಾವಿರ ಮಂದಿ ಫ‌ಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಿದ್ದಾರೆ. ರಾಜ್ಯದಲ್ಲಿರುವ ಸರಿಸುಮಾರು 22 ಲಕ್ಷ ಮಂದಿ ಲಂಬಾಣಿಗರ ಪೈಕಿ ಶೇ.90 ಮಂದಿ ಕಲ್ಯಾಣ ಕರ್ನಾಟಕದಲ್ಲೇ ನೆಲೆಸಿದ್ದಾರೆ. ಈ ಭಾಗದ 42 ಕ್ಷೇತ್ರಗಳಲ್ಲಿ ಗಮನಾರ್ಹ ಮತಬ್ಯಾಂಕ್‌ ಹೊಂದಿದ್ದಾರೆ.

ಕಳೆದ ವಾರವಷ್ಟೇ ಕಿತ್ತೂರು ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿಗೆ ಆಗಮಿಸಿ ಭರ್ಜರಿ 8 ಕಿಮೀ ರೋಡ್‌ ಶೋ ಹಾಗೂ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಿ ಹವಾ ಸೃಷ್ಟಿಸಿದ್ದ ಮೋದಿ, ಆದಾಗಿ ಎಂಟು ದಿನಗಳಲ್ಲೇ ಕಲ್ಯಾಣ ಕರ್ನಾಟಕದ ಕೇಂದ್ರ ಭಾಗ ಕಲಬುರಗಿಗೆ ಭೇಟಿ ನೀಡುತ್ತಿರುವುದು ರಾಜಕೀಯವಾಗಿಯೂ ಗಮನ ಸೆಳೆಯುತ್ತಿದೆ. ಕರ್ನಾಟಕದಲ್ಲಿ ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ಮತಬೇಟೆಯ ತಾಲೀಮು ಎನ್ನಲಾಗುತ್ತಿದೆ.

ಮೊದಲು ಯಾದಗಿರಿಗೆ:
ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಮೋದಿ, ಮೊದಲು ಯಾದಗಿರಿ ಜಿಲ್ಲೆಯ ಕೊಡೇಕಲ್‌ ತೆರಳಲಿದ್ದಾರೆ. ನಾರಾಯಣಪುರ ಎಡದಂಡೆ ನಾಲೆ ನವೀಕರಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಚೆನ್ನೈ-ಸೂರತ್‌ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಹಕ್ಕುಪತ್ರ ವಿತರಣೆ
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡಕ್ಕೆ ಆಗಮಿಸಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿದ 51 ಸಾವಿರ ಹಕ್ಕುಪತ್ರಗಳನ್ನು ವಿತರಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು ಮೂರು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಲಂಬಾಣಿ ಮಹಿಳೆಯರು ತಮ್ಮ ಸಾಂಸ್ಕೃತಿಕ-ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಜತೆ ರಾಜ್ಯಪಾಲ ಥಾವರ್‌ಚಂದ್‌ ಗೆಹೊÉàತ್‌, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಂದಾಯ ಸಚಿವ ಆರ್‌.ಅಶೋಕ್‌ ಸೇರಿದಂತೆ 18 ಮಂದಿ ಗಣ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದೇ ವೇಳೆ ಮೋದಿಗೆ 12ನೇ ಶತಮಾನದ “ಅನುಭವ ಮಂಟಪ’ದ ತೈಲ ವರ್ಣದ ಕಲಾಕೃತಿ ನೀಡಿ ಗೌರವಿಸಲಾಗುತ್ತಿದೆ.

Advertisement

1700 ತಾಂಡಾಗಳು
ರಾಜ್ಯದಲ್ಲಿ ಪ್ರಸ್ತುತ 1700 ಲಂಬಾಣಿ ತಾಂಡಾಗಳಿವೆ. ಈಗ 800 ತಾಂಡಾಗಳು ಕಂದಾಯ ಗ್ರಾಮಗಳಾಗಿ ಬದಲಾಗಲಿದ್ದು, ಈ ತಾಂಡಾಗಳ ಜನರಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ. ಇದಲ್ಲದೆ ಇನ್ನೊಂದು ತಿಂಗಳಲ್ಲಿ ಬಹುತೇಕ 1500 ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಲಿವೆ. ಸುಮಾರು ಒಂಬತ್ತು ಲಕ್ಷ ಫಲಾನುಭವಿಗಳು ಇದರ ನೇರ ಪ್ರಯೋಜನ ಪಡೆಯಲಿದ್ದಾರೆ.

ಮಾಸಾಂತ್ಯಕ್ಕೆ ಬರಲಿದ್ದಾರೆ ಅಮಿತ್‌ ಶಾ
ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಗಲಗೊಳಿಸಿ ಎಂದು ರಾಜ್ಯ ನಾಯಕರಿಗೆ ಟಾರ್ಗೆಟ್‌ ಕೊಟ್ಟು ಹೋಗಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಈ ಮಾಸಾಂತ್ಯಕ್ಕೆ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಕೇಸರಿ ಪಡೆಯಲ್ಲಿ ರಣೋತ್ಸಾಹ ಮೂಡಿಸಲಿದ್ದಾರೆ.

ಎಲ್ಲಿ ಪಕ್ಷದ ಶಕ್ತಿ ಬಲವಾಗಿಲ್ಲವೋ ಅಂಥ ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಸೃಷ್ಟಿಸಬೇಕೆಂಬ ಉದ್ದೇಶ ಅಮಿತ್‌ ಶಾ ಅವರ ಈ ಪ್ರವಾಸದಲ್ಲಿ ಅಡಗಿದೆ. ಹೀಗಾಗಿ ಬೆಂಗಳೂರು ನಗರ ಅಥವಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಷೇತ್ರಗಳಲ್ಲಿ ಅವರು ಈ ಬಾರಿ ರೋಡ್‌ ಶೋ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಜ.28 ಅಥವಾ 29ರಂದು ಅಮಿತ್‌ ಶಾ ರಾಜ್ಯಕ್ಕೆ ಆಗಮಿಸಬಹುದು ಎಂದು ಪ್ರವಾಸದ ಸಂಭಾವ್ಯ ದಿನಾಂಕವನ್ನು ಈಗಾಗಲೇ ಬಿಜೆಪಿ ರಾಜ್ಯ ಘಟಕಕ್ಕೆ ನೀಡಲಾಗಿದೆ. ಆದರೆ ಈ ಕಾರ್ಯಕ್ರಮದ ಸ್ವರೂಪ ತುಸು ರಹಸ್ಯವಾಗಿಯೇ ಇರಲಿದೆ. ಬಿಜೆಪಿ ಮೂಲಗಳ ಪ್ರಕಾರ ಬೆಂಗಳೂರಿನ ಸರ್ವಜ್ಞ ನಗರ ಅಥವಾ ಪುಲಕೇಶಿನಗರದಲ್ಲಿ ರೋಡ್‌ ಶೋ ನಡೆಸುವ ಸಾಧ್ಯತೆ ಇದೆ.

ತಾಂಡಾಗಳನ್ನು ಕಂದಾಯ ಗ್ರಾಮವಾಗಿಸಿದ ಹಕ್ಕುಪತ್ರಗಳನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಮಾಡಿಕೊಡಲಾಗುವುದು. ಪ್ರಮುಖವಾಗಿ ನೋಂದಣಿ ಶುಲ್ಕವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಈ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಗಿನ್ನಿಸ್‌ ದಾಖಲೆಗೆ ಸೇರಲಿದೆ.
– ಆರ್‌.ಅಶೋಕ್‌, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next