Advertisement

ಜೆಡಿಎಸ್‌ ಎರಡನೇ ಪಟ್ಟಿ: ವಲಸಿಗರಿಗೆ ಮಣೆ

06:00 AM Apr 21, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿರುವ ಶಾಸಕ ಜಿ.ಎಚ್‌.ಶ್ರೀನಿವಾಸ್‌ ಹೊರತುಪಡಿಸಿ ಬಹುತೇಕ ವಲಸಿಗರಿಗೆ ಟಿಕೆಟ್‌ ನೀಡಲಾಗಿದೆ. ಜತೆಗೆ ಬಿಜೆಪಿ ತೊರೆದು ಜೆಡಿಎಸ್‌ ಸೇರಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಂದಿರುವವರಿಗೆ ಟಿಕೆಟ್‌ ಘೋಷಣೆಯಾಗಿದೆ.

Advertisement

ವಲಸಿಗರಿಗಾಗಿಯೇ ಎರಡನೇ ಅಭ್ಯರ್ಥಿ ಪಟ್ಟಿ ಬಿಡುಗಡೆ ವಿಳಂಬ ಮಾಡಿದ್ದ ಜೆಡಿಎಸ್‌ ಇದೀಗ 56 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಜಮಖಂಡಿ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಮಾಡಿದ್ದು, ತೌಫೀಕ್‌ ಬದಲು ಸದಾಶಿವಕುಮಾರ್‌ ಯು.ಟಿ.ಕಲಾಲ್‌ಗೆ ಟಿಕೆಟ್‌ ಘೋಷಣೆಯಾಗಿದೆ. ಇನ್ನೂ 22 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ.ಈ ಬಾರಿ ವಲಸಿಗರಿಗೆ ಟಿಕೆಟ್‌ ನೀಡುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್‌ ಬಂಡಾಯದ ಲಾಭ ಪಡೆಯಲು ಮುಂದಾಗಿದೆ. 

ಬಿಜೆಪಿ ಟಿಕೆಟ್‌ ಸಿಗದೇ ಜೆಡಿಎಸ್‌ ಸೇರಿರುವ ಪ್ರಕಾಶ್‌ ಖಂಡ್ರೆಗೆ ಭಾಲ್ಕಿ, ಮಂಗಳಾದೇವಿ ಬಿರಾದಾರ್‌ ಅವರಿಗೆ ಮುದ್ದೇಬಿಹಾಳ, ಎಂ. ರಾಮಚಂದ್ರ ಅವರಿಗೆ ರಾಜರಾಜೇಶ್ವರಿನಗರ, ಶ್ರೀಧರರೆಡ್ಡಿಗೆ ಶಾಂತಿನಗರ, ಹೇಮಚಂದ್ರ ಸಾಗರ್‌ಗೆ ಚಿಕ್ಕಪೇಟೆ, ಶ್ರೀಧರ ರೆಡ್ಡಿಗೆ ಶಾಂತಿನಗರ ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಲಾಗಿದೆ.

ಅದೇರೀತಿ ಕಾಂಗ್ರೆಸ್‌ ಟಿಕೆಟ್‌ ಸಿಗದೇ ಜೆಡಿಎಸ್‌ ಸೇರಿರುವ ನಟ ಶಶಿಕುಮಾರ್‌ಗೆ ಹೊಸದುರ್ಗ, ಪಿ.ರಮೇಶ್‌ಗೆ ಸಿ.ವಿ.ರಾಮನ್‌ನಗರ (ಎಸ್‌ಸಿ), ಅಲ್ತಾಫ್ ಖಾನ್‌ಗೆ ಚಾಮರಾಜಪೇಟೆ, ರವಿ ಪಾಟೀಲ್‌ಗೆ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಟಿಕೆಟ್‌ ಘೋಷಿಸಲಾಗಿದೆ. ಆದರೆ, ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಅಸಮಾಧಾನಗೊಂಡು ಜೆಡಿಎಸ್‌ ಸೇರಿರುವ ಹಾಲಿ ಶಾಸಕ ಜಿ.ಎಚ್‌.ಶ್ರೀನಿವಾಸ್‌ಗೆ ಇನ್ನೂ ನಿರಾಶೆಯಾಗಿದೆ. ಈ ಹಿಂದೆಯೇ ನಿರ್ಧಾರವಾಗಿದ್ದಂತೆ ಅಲ್ಲಿ ಶಿವಶಂಕರಪ್ಪ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ರಾಜಾಜಿನಗರ ಕ್ಷೇತ್ರದಲ್ಲಿ ಜೆಡರಹಳ್ಳಿ ಕೃಷ್ಣಪ್ಪ ಅವಕಾಶ ಗಿಟ್ಟಿಸಿದ್ದಾರೆ.

ಸಿಂಧ್ಯಾ ಉತ್ತರ ಕರ್ನಾಟಕಕ್ಕೆ ವಲಸೆ:
ಮಾಜಿ ಸಚಿವ ಹಾಗೂ ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಜಿ.ಆರ್‌.ಸಿಂಧ್ಯಾ ಈ ಬಾರಿ ಉತ್ತರ ಕರ್ನಾಟಕಕ್ಕೆ ವಲಸೆ ಹೋಗಿದ್ದು, ಬಸವ ಕಲ್ಯಾಣದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಬಸವ ಕಲ್ಯಾಣದಲ್ಲಿ ಮರಾಠ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ಚನ್ನಪಟ್ಟಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೆಸರೂ ಎರಡನೇ ಪಟ್ಟಿಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next