Advertisement
ರಾಜ್ಯ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಮುಖ ಆಕರ್ಷಣೆಯಾದ್ದರಿಂದ, ಇನ್ನೂ 20 ಬಾರಿ ಮೋದಿ ರಾಜ್ಯಕ್ಕೆ ಬರಲಿದ್ದು ಚುನಾವಣ ರ‍್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
Related Articles
Advertisement
ಬಿಜೆಪಿಯೊಳಗೆ ಬಣಗಳ ಕಿತ್ತಾಟ, ಸರಕಾರದ ವಿರುದ್ಧ ಆಡಳಿತವಿರೋಧಿ ಅಲೆ ಮತ್ತಿತರ ಬೆಳವಣಿಗೆಗಳು ಹೊಗೆಯಾಡುತ್ತಿರುವ ಕಾರಣ, ಸದ್ಯಕ್ಕೆ ರಾಜ್ಯ ಬಿಜೆಪಿಗೆ “ಮೋದಿ ಮ್ಯಾಜಿಕ್ ಬಿಟ್ಟರೆ ಬೇರೆ ದಾರಿಯಿಲ್ಲ’ ಎಂಬಂತಾಗಿದೆ. ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದರೆ, ಮೋದಿಯೇ ಅನಿವಾರ್ಯ ಎಂಬ ಚಿಂತನೆಯೊಂದಿಗೆ ಬಿಜೆಪಿ ರಾಜ್ಯ ಘಟಕ ಪ್ರಚಾರದ ಕಾರ್ಯತಂತ್ರ ರೂಪಿಸಿದೆ.
6 ಭಾಗಗಳಾಗಿ ವರ್ಗೀಕರಣಪ್ರಚಾರದ ದೃಷ್ಟಿಯಿಂದ ರಾಜ್ಯವನ್ನು ಒಟ್ಟು 6 ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಇಂಥ ಪ್ರತೀ ವಿಭಾಗದಲ್ಲೂ ತಲಾ 3 ಕಡೆ ಮೋದಿ ರ‍್ಯಾಲಿ ಆಯೋಜಿಸುವುದು ಬಿಜೆಪಿಯ ಯೋಜನೆ. ಈ ಪೈಕಿ, ಕೆಲವು ಪ್ರದೇಶಗಳಲ್ಲಿ, ಉದಾಹರಣೆಗೆ 40 ಕ್ಷೇತ್ರಗಳಿರುವಂಥ ಹೈದರಾಬಾದ್-ಕರ್ನಾಟಕದಂಥ ಪ್ರದೇಶಗಳಲ್ಲಿ ಪ್ರಧಾನಿ ಮೋದಿಯವರಿಂದ ಹೆಚ್ಚಿನ ಸಂಖ್ಯೆಯ ಪ್ರಚಾರ ರ‍್ಯಾಲಿಗಳನ್ನು ನಡೆಸುವ ಲೆಕ್ಕಾಚಾರವನ್ನೂ ಪಕ್ಷ ಹಾಕಿಕೊಂಡಿದೆ. ಕಲ್ಯಾಣ ಕರ್ನಾಟಕದವರೇ ಆದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಎಐಸಿಸಿ ಅಧ್ಯಕ್ಷ ಹುದ್ದೆಗೇರಿರುವ ಕಾರಣ, ಅವರಿಗೂ ಈ ಪ್ರದೇಶ ಪ್ರತಿಷ್ಠೆಯ ಕಣವಾಗಿದೆ. ಈ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸೀಟುಗಳನ್ನು ಗೆಲ್ಲಿಸಿಕೊಡುವ ಹೊಣೆಗಾರಿಕೆಯೂ ಅವರಿಗಿದೆ. ಕಳೆದ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಚುನಾವಣೆಗೆ ಮುಹೂರ್ತ ನಿಗದಿಯಾಗುವ ಮುನ್ನವೇ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿ, ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸವನ್ನು ನೆರವೇರಿಸಿದ್ದಾರೆ. ಅಲ್ಲದೇ ಹುಬ್ಬಳ್ಳಿ, ಮಂಡ್ಯ ಸೇರಿದಂತೆ ಒಟ್ಟು 7 ಕಡೆ ರ‍್ಯಾಲಿ, ರೋಡ್‌ಶೋಗಳನ್ನೂ ನಡೆಸುವ ಮೂಲಕ ರಾಜ್ಯದ ಜನರನ್ನು ತಮ್ಮ ಪಕ್ಷದತ್ತ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ. ರಾಜ್ಯಕ್ಕೆ ಭೇಟಿ ನೀಡಿದಾಗ, ಪ್ರತೀ ಬಾರಿಯೂ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ರ‍್ಯಾಲಿ, ರೋಡ್ ಶೋ ನಡೆದಲ್ಲೆಲ್ಲ ಜನಸಾಗರ ಹರಿದುಬಂದಿದೆ. ಇದು ಬಿಜೆಪಿಗೆ ಪ್ಲಸ್ ಪಾಯಿಂಗ್ ಆಗಿ ಪರಿಣಮಿಸಿದ್ದು, ಮತದಾನದ ದಿನದವರೆಗೂ ಇದನ್ನು ಮುಂದುವರಿಸಿಕೊಂಡು ಹೋಗುವುದು ರಾಜ್ಯ ನಾಯಕರ ಲೆಕ್ಕಾಚಾರವಾಗಿದೆ. ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿರುವ ಕಾರಣ ಮುಂದಿನ ದಿನಗಳಲ್ಲಿ ಪ್ರಚಾರ ಮತ್ತಷ್ಟು ಕಾವೇರಲಿದ್ದು, ಪ್ರಧಾನಿ ಮೋದಿ ಮಾತ್ರವಲ್ಲದೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು, ಕೇಂದ್ರ ಸಚಿವರು ಕೂಡ ರಾಜ್ಯದಲ್ಲಿ ಠಿಕಾಣಿ ಹೂಡುವ ಸಾಧ್ಯತೆಯಿದೆ. ಮೋದಿ ಹವಾ
* ಮುಂದಿನ 37 ದಿನಗಳಲ್ಲಿ 20ಕ್ಕೂ ಹೆಚ್ಚು ರ‍್ಯಾಲಿ
* ಮೇ 6-8ರ ನಡುವೆ ಕಾಂಗ್ರೆಸ್-ಜೆಡಿಎಸ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಪ್ರಚಾರ
* ಪ್ರಚಾರಕ್ಕಾಗಿ ರಾಜ್ಯವನ್ನು 6 ವಿಭಾಗಗಳಾಗಿ ವರ್ಗೀಕರಣ
* ಪ್ರತೀ ವಿಭಾಗದಲ್ಲೂ ಮೋದಿಯವರಿಂದ ತಲಾ 3 ರ‍್ಯಾಲಿ 30 ಕಾರ್ಯಕ್ರಮಗಳಲ್ಲಿ ಭಾಗಿ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕದಲ್ಲಿ ಹತ್ತು ದಿನಗಳಲ್ಲಿ ರ‍್ಯಾಲಿ, ರೋಡ್ ಶೋ, ಬಹಿರಂಗ ಸಮಾವೇಶ ಎಲ್ಲವೂ ಸೇರಿ 30 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಆದರೆ, ನಿರ್ದಿಷ್ಟ ದಿನಾಂಕ ಹಾಗೂ ಕಾರ್ಯಕ್ರಮದ ಸ್ಥಳ ಇನ್ನೂ ನಿಗದಿಯಾಗಿಲ್ಲ. ಕೇಂದ್ರ ನಾಯಕರ ಜತೆ ರಾಜ್ಯ ನಾಯಕರು ಸಂಪರ್ಕದಲ್ಲಿದ್ದು ರೂಪು-ರೇಷೆ ಸಿದ್ಧಪಡಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.