Advertisement
ಬುಧವಾರವೂ ಸ್ಕ್ರೀನಿಂಗ್ ಕಮಿಟಿ ಹಾಗೂ ಕೇಂದ್ರ ಚುನಾವಣ ಸಮಿತಿ ಸಭೆಗಳು ನಡೆದರೂ ಬಾಕಿ ಉಳಿದಿರುವ 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಜಾತಿ ಹಾಗೂ ಗೆಲ್ಲುವ ಅರ್ಹತೆಗಳನ್ನು ಮಾನದಂಡವಾಗಿಟ್ಟು ಅಭ್ಯರ್ಥಿಗಳ ಅಯ್ಕೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಿಲ್ಲ ಎಂಬುದರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ಗಾಂಧಿ ಅವರು ತಕರಾರು ತೆಗೆದಿರುವುದರಿಂದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಪರಿಷ್ಕರಣೆಗೆ ಒಳಪಟ್ಟಿದೆ.
ಮಂಗಳವಾರ ಎರಡು ಸುತ್ತಿನ ಸಭೆ ನಡೆದರೂ ಕೇವಲ 35 ಕ್ಷೇತ್ರಗಳಿಗಷ್ಟೇ ಪಟ್ಟಿ ಸಿದ್ಧಪಡಿಸಲಾಗಿತ್ತು. ಉಳಿದ 65 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಬುಧವಾರ ಇಡೀ ದಿನ ಹಲವು ಸುತ್ತಿನ ಸಭೆಗಳು ನಡೆದರೂ ಒಮ್ಮತ ಮೂಡಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿರುವುದು ಸಹ ಪಟ್ಟಿ ಪರಿಷ್ಕರಣೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುಜೇìವಾಲ ಅವರ ಸೂಚನೆ ಮೇರೆಗೆ ಸ್ಕ್ರೀನಿಂಗ್ ಕಮಿಟಿ ಮತ್ತೊಮ್ಮೆ ಸಭೆ ಸೇರಿ ಪರಿಷ್ಕೃತ ಪಟ್ಟಿ ಸಿದ್ಧಪಡಿಸಿದ ಬಳಿಕ ಚುನಾವಣ ಸಮಿತಿ ಸಭೆಯ ಮುಂದಿಡಲಾಗಿದೆ. ಅಲ್ಲಿಯೂ ಪರಿಷ್ಕೃತ ಪಟ್ಟಿಗೆ ವರಿಷ್ಠರು ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಗುರುವಾರ ಮತ್ತೊಮ್ಮೆ ಸಭೆ ಸೇರಲು ನಿರ್ಧರಿಸಲಾಗಿದೆ. ಈ ಮಧ್ಯೆ ರಾಹುಲ್‌ಗಾಂಧಿ ಅವರು ಝಾರ್ಖಂಡ್‌ನ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿದ್ದರಿಂದ ಚುನಾವಣ ಸಮಿತಿಯ ಸಭೆಯನ್ನು ಮೊಟಕುಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
Related Articles
ಮಾಜಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರು ರೈತ ಸಂಘದಿಂದ ಸ್ಪರ್ಧಿಸಲಿರುವ ಮೇಲುಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಈ ಕ್ಷೇತ್ರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಲು ತೀರ್ಮಾನಿಸಿರುವುದರಿಂದ ಈಗ ಕೇವಲ 99 ಕ್ಷೇತ್ರಗಳಿಗಷ್ಟೇ 2ನೇ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಲಿದೆ.
Advertisement
ಕಾದು ನೋಡುವ ತಂತ್ರದಲ್ಲಿ ಜೆಡಿಎಸ್ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ 2ನೇ ಪಟ್ಟಿ ಬಿಡುಗಡೆಗೆ ಜಾಣ ನಡೆ ಅನುಸರಿಸುತ್ತಿದ್ದಾರೆ. ಬಿಜೆಪಿಯ ಮೊದಲ ಪಟ್ಟಿ, ಕಾಂಗ್ರೆಸ್‌ನ 2ನೇ ಪಟ್ಟಿ ಬಿಡುಗಡೆಯಾದ ಬಳಿಕವೇ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಈ ಎರಡೂ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಳು ಮುಂದುವರಿಯುತ್ತಿರುವುದರಿಂದ ಜೆಡಿಎಸ್‌ನ ತಂತ್ರವೂ ಮುಂದೂಡಲ್ಪಡುತ್ತಿದೆ. ಮಂಗಳವಾರ ಇಲ್ಲವೇ ಬುಧವಾರ ಕಾಂಗ್ರೆಸ್‌ನ 2ನೇ ಪಟ್ಟಿ ಬಿಡುಗಡೆ ನಿರೀಕ್ಷೆಯಲ್ಲಿದ್ದ ಕುಮಾರಸ್ವಾಮಿ ಅವರು ಗುರುವಾರ ತಮ್ಮ ಪಕ್ಷದ 2ನೇ ಪಟ್ಟಿ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದರು. ಜತೆಗೆ ಹಾಸನ ಕ್ಷೇತ್ರದ ಅಭ್ಯರ್ಥಿಯ ಹೆಸರು ಕೂಡ ಆ ಪಟ್ಟಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಈಗ ಪಟ್ಟಿ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಹಲವು ಸಭೆಗಳನ್ನು ಮಾಡಲಾಗಿದ್ದು, ಗುರುವಾರ ಬೆಳಗ್ಗೆ 11 ಗಂಟೆಯೊಳಗೆ 2ನೇ ಪಟ್ಟಿ ಬಿಡುಗಡೆ ಆಗಲಿದೆ. ಸೋಲಿನ ಭೀತಿಯಲ್ಲಿರುವ ಆಡಳಿತಾರೂಢ ಬಿಜೆಪಿ ಒಬ್ಬ ಅಭ್ಯರ್ಥಿಯ ಹೆಸರನ್ನೂ ಬಿಡುಗಡೆ ಮಾಡಿಲ್ಲ. ಅವರ ಪಾಠ ನಮಗೆ ಅಗತ್ಯವಿಲ್ಲ.
-ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯ ಕಾಂಗ್ರೆಸ್ ಉಸ್ತುವಾರಿ