Advertisement

karnataka polls 2023;ಅವಹೇಳನಕ್ಕೂ ಪ್ರಚಾರಕ್ಕೂ ಸಾಮಾಜಿಕ ಜಾಲತಾಣವೇ ಬಳಕೆ

03:42 PM Apr 08, 2023 | Team Udayavani |

ಬೆಳ್ತಂಗಡಿ: ರಾಜಕೀಯ ನಾಯಕರ ಪರ ಪಕ್ಷಗಳ ಕಾರ್ಯಕರ್ತರು ಮನೆ ಮನೆ ಭೇಟಿ ಮಾಡಿ ಮತಪ್ರಚಾರದಲ್ಲಿ ತೊಡಗಿರುವ ಮಧ್ಯಯೇ ಮತ್ತೊಂದೆಡೆ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ ಮೂಲಕ ನಾಯಕರ, ಕಾರ್ಯಕರ್ತರ ತೇಜೋವಧೆಯೂ ನಡೆಯುತ್ತಿದೆ.

Advertisement

ಅಭಿವೃದ್ಧಿ ಪರ ಚಿಂತನೆಗಳೊಂದಿಗೆ ಸಮಾಜಕ್ಕೆ ಋಣಾತ್ಮಕ ಸಂದೇಶ ಸಾರುವುದು ಒಂದೆಡೆಯಾದರೆ, ನಕಲಿ ಖಾತೆಗಳನ್ನು ಹುಟ್ಟುಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ನಾಯಕರ ವರ್ಚಸ್ಸು ಕುಂದಿಸಲು ಮಾನಹಾನಿಕರ ಪೋಸ್ಟ್‌ ಹಾಕಿ ಕೀಳುಮಟ್ಟದ ಪ್ರಚಾರದಲ್ಲಿಯೂ ತೊಡಗಿರುವುದು ಕಂಡುಬರುತ್ತಿದೆ. ಹಿಂದೆಲ್ಲ ಆಡಳಿತ ಪಕ್ಷಗಳು ಮನೆ ಮನೆ ಭೇಟಿ, ಸಾಮಾಜಿಕ ಸಭೆಗಳಲ್ಲಿ ತಮ್ಮ ಕಾರ್ಯವೈಖರಿ ಹಾಗೂ ಮುಂದಿನ ಭರವಸೆಗಳನ್ನು ಮುಂದಿಟ್ಟು ಪ್ರಚಾರ ಮಾಡಿದರೆ ವಿಪಕ್ಷಗಳು ಆಡಳಿತ ಪಕ್ಷದ ವೈಫ‌ಲ್ಯವನ್ನು ಮುಂದಿಟ್ಟು ತಮ್ಮ ಭವಿಷ್ಯದ ಭರವಸೆ ಘೋಷಿಸಿ ಪ್ರಚಾರದಲ್ಲಿ ತೊಡಗುತಿದ್ದವು. ಅದೊಂದು ಸಭ್ಯ ರಾಜಕೀಯವೂ ಆಗಿತ್ತು.

ಆದರೆ ಇಂದು ಕಾಲ ಬದಲಾಗಿದೆ. ಸಾಮಾಜಿಕ ಜಾಲ ತಾಣಗಳ ಇತಿಮಿತಿ ಇಲ್ಲದೆ ವಾಕ್‌ ಸ್ವಾತಂತ್ರ್ಯದ ಹೆಸರಲ್ಲಿ ತೇಜೋವಧೆಗೆ ಕಾರಣವಾಗುತ್ತಿದೆ. ಪಕ್ಷದ ಸಿದ್ಧಾಂತ, ರಾಜಕೀಯ ಏಳಿಗೆಗೆ ಕಾರಣವಾದ ತಳಹದಿ ಬಗೆಗಿನ ಜ್ಞಾನವಿಲ್ಲದ ಕೆಲವರು ಪ್ರಚಾರದ ತೆವಲಿನಲ್ಲಿ ಕೀಳು ಮಟ್ಟದ ವ್ಯವಸ್ಥೆಗೆ ಇಳಿಯುತ್ತಿದ್ದಾರೆ. ಈ ಕುರಿತು ತಿಳಿ ಹೇಳಬೇಕಾದ ಹಿರಿಯರು ಮೂಖರಾಗಿದ್ದಾರೆ. ಕಾರಣ ಹಿರಿಯರ ಮಾತು ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾಂಸಾರಿಕ ವಿಚಾರಗಳು, ವೈಯಕ್ತಿಕ ವಿಚಾರಗಳನ್ನು ಟೀಕೆಯ ಅಸ್ತÅಗಳನ್ನಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹರಿಬಿಡಲಾಗುತ್ತಿದೆ.

ಹೆಚ್ಚಿನ ಕಡೆ ನೂರಾರು ನಕಲಿ ಖಾತೆ ಸೃಷ್ಟಿಸಿ ಪಕ್ಷಗಳ ಮಧ್ಯೆ, ಕಾರ್ಯಕರ್ತರ ಮಧ್ಯೆ ವಾಗ್ವಾದಕ್ಕೆ ಕಾರಣವಾಗುತ್ತಿದೆ. ಇದು ಚುನಾವಣೆ ಮಾತ್ರವಲ್ಲದೆ ಸಮಾಜದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಒಬ್ಬರ ಮೇಲೆ ಒಬ್ಬರು ಆರೋಪಗೈಯುತ್ತಾ ತೀರಾ ವೈಯಕ್ತಿಕ ವಿಚಾರಗಳು ಚರ್ಚೆಯ ವಿಷಯವಾಗುತ್ತಿದೆ.
ತಮ್ಮ ನಾಯಕರ ಅಪಪ್ರಚಾರವನ್ನು ಸಹಿಸದ ಯುವ ಕಾರ್ಯಕರ್ತರ ಮಧ್ಯೆಯೇ ಸೇಡಿನ ರಾಜಕಾರಣವನ್ನು ಹುಟ್ಟು ಹಾಕುವಂತೆ ಮಾಡುತ್ತಿದೆ. ಇದು ಅಭಿವೃದ್ಧಿ ಪರ ರಾಜಕೀಯಕ್ಕೆ ಮಾರಕವಾಗಿದೆ ಎಂಬುದು ಹಿರಿಯ ಕಾರ್ಯಕರ್ತರ ಅಭಿಪ್ರಾಯ. ಇದುವರೆಗೆ ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾಧಿಕಾರಿಗಳೂ ನಿಗಾ ಇಟ್ಟಂತಿಲ್ಲ. ಯಾವುದೇ ಪ್ರಕರಣ ದಾಖಲಾಗುತ್ತಿಲ್ಲ. ಒಂದೊಮ್ಮೆ ಪ್ರಕರಣ ದಾಖಲಾದರೆ ಇಂತಹ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವವರಿಗೂ ಪಾಠವಾಗಲಿದೆ. ಸಭ್ಯ ರಾಜಕಾರಣಕ್ಕೆ ವೇದಿಕೆಯಾಗಲಿದೆ.

ಪರಿಶೀಲಿಸಿ ಕ್ರಮ
ಮಾನಹಾನಿಕರ ಪೋಸ್ಟ್‌ ಹಾಕಿರುವ ಕುರಿತಂತೆ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಧಿಕಾರಿಗಳು ಕೂಡ ನಿಗಾ ಇಟ್ಟಿರುತ್ತಾರೆ. ಗಮನಕ್ಕೆ ಬಂದ ಸಂದರ್ಭದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಪ್ರಕರಣ ಕಂಡಲ್ಲಿ ದೂರು ನೀಡಬೇಕು
-ಯೋಗೇಶ್‌ ಎಚ್‌.ಆರ್‌., ಚುನಾವಣಾಧಿಕಾರಿ ಬೆಳ್ತಂಗಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next