52 ಹೊಸ ಮುಖಗಳ ಜತೆಗೆ ಮೊದಲ ಹಂತದಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದ ರಾಜ್ಯದ ಆಡಳಿತ ಪಕ್ಷಕ್ಕೆ ಪ್ರತಿಭಟನೆ, ಬಂಡಾಯ ಎದುರಾಗಿದೆ. ಶೆಟ್ಟರ್, ಅಂಗಾರ, ಸವದಿ ಸೇರಿದಂತೆ ಪ್ರಮುಖರು ಕಠಿನ ನಿರ್ಧಾರ ಕೈಗೊಂಡಿರುವುದು ಕಸಿವಿಸಿ ತಂದಿದೆ. ಹಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಈ ನಡುವೆ ಬುಧವಾರ ತಡರಾತ್ರಿ ಮತ್ತೆ 23 ಕ್ಷೇತ್ರಗಳ ಪಟ್ಟಿ ಬಿಡುಗಡೆಗೊಂಡಿದ್ದು, 7 ಶಾಸಕರಿಗೆ ಇಲ್ಲೂ ಟಿಕೆಟ್ ಕೈತಪ್ಪಿದೆ.
ಬೆಂಗಳೂರು: ಸಾಕಷ್ಟು ಲೆಕ್ಕಾಚಾರಗಳ ಬಳಿಕ ಪ್ರಕಟಗೊಂಡ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸುಮಾರು 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಂಡಾಯ ಹಾಗೂ ಬೇಸರವನ್ನು ಸೃಷ್ಟಿಸಿದ್ದು, ಟಿಕೆಟ್ ಸಿಗದೆ ನಿರಾಸೆಗೊಂಡವರು ಪಕ್ಷಾಂತರ ಹಾಗೂ ಬಂಡಾಯ ಸ್ಪರ್ಧೆಗೆ ನಿರ್ಧರಿಸಿರುವುದು ಪಕ್ಷಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಟಿಕೆಟ್ ವಂಚಿತರು ಪಕ್ಷ ಹಾಗೂ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಬಿಜೆಪಿ ನಾಯಕರಲ್ಲಿ ತಳಮಳ ಸೃಷ್ಟಿಸಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಬುಧವಾರ ರಾತ್ರಿ ಮತ್ತೆ 23 ಕ್ಷೇತ್ರಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಬೈಂದೂರಿಗೆ ಗುರುರಾಜ್ ಗಂಟಿಹೊಳೆ ಅವರಿಗೆ ಟಿಕೆಟ್ ನೀಡಲಾಗಿದೆ. ಸುಕುಮಾರ ಶೆಟ್ಟಿ ಸಹಿತ 7 ಮಂದಿ ಶಾಸಕರನ್ನು ಕೈಬಿಡಲಾಗಿದೆ. ಜಗದೀಶ್ ಶೆಟ್ಟರ್, ಎಸ್.ಎ. ರಾಮದಾಸ್ ಅವರ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಟಿಕೆಟ್ ಕೈ ತಪ್ಪಿಸಿದ ರೀತಿಯ ಬಗ್ಗೆ ಉಡುಪಿ ಶಾಸಕ ಕೆ. ರಘುಪತಿ ಭಟ್, ಸಚಿವ ಎಸ್. ಅಂಗಾರ ಬಹಿರಂಗವಾಗಿ ಬೇಸರ ವ್ಯಕ್ತ ಪಡಿಸಿ ದ್ದಾರೆ. ಕೆಲವರು ಕಾಂಗ್ರೆಸ್ ಅಥವಾ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ. ಬಂಡಾಯ ಶಮನದ ಜವಾಬ್ದಾರಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹೆಗಲಿಗೆ ವರಿಷ್ಠರು ಹಾಕಿದ್ದಾರೆ.
ಆಕ್ರೋಶ, ಹಲವೆಡೆ ನಡೆ ನಿಗೂಢ
ಬೈಲಹೊಂಗಲದಲ್ಲಿ ಮಾಜಿ ಸಿಎಂ ಬಿಎಸ್‌ವೈ ಅತ್ಯಾಪ್ತ, ಡಾ| ವಿಶ್ವನಾಥ ಪಾಟೀಲ್, ಟಿಕೆಟ್ ಕೈ ತಪ್ಪಿದಕ್ಕಾಗಿ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಕುಂದಗೋಳದಲ್ಲಿ ಚಿಕ್ಕನಗೌಡ, ಚಿಕ್ಕಪೇಟೆ ಎನ್.ಆರ್. ರಮೇಶ್, ಚಾಮರಾಜಪೇಟೆಯಲ್ಲಿ ಸುನಿಲ್ ವೆಂಕಟೇಶ್, ಬ್ಯಾಟರಾಯನಪುರದಲ್ಲಿ ಎ. ರವಿ ಹಾಗೂ ಮುನೀಂದ್ರ ಕುಮಾರ್, ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಬಂಡಾಯದ ಬಾವುಟ ಎತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಮೂಲ ಬಿಜೆಪಿಗರ ಬದಲಿಗೆ ಹೊಸ ಮುಖಗಳಿಗೆ ಮಣೆ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಫೈಟರ್ ರವಿ, ನಂಜುಂಡೇಗೌಡ, ಚಂದಗಾಲು ಶಿವಣ್ಣ, ಲಕ್ಷ್ಮಿ ಅಶ್ವಿನ್ ಗೌಡಗೆ ಟಿಕೆಟ್ ನೀಡಿಲ್ಲ. ಇವರೆಲ್ಲರ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.