Advertisement

ಅವರೊಳಗೆ ಇವರು ಇವರೊಳಗೆ ಅವರು ಅವರು ಇವರೊಳಗೆ ಮೂರನೆಯವರೋ?

10:17 PM May 05, 2023 | Team Udayavani |

ಪುತ್ತೂರು: ನೆತ್ತಿ ಸುಡುವ ಬಿಸಿಲು, ಚುನಾವಣೆಯ ಕಾವು ಇವೆರಡರಿಂದ ಬಿಸಿಯೇರಿ ಬಳಲಿ ಬೆಂಡಾಗಿದ್ದ ಪುತ್ತೂರು ಕ್ಷೇತ್ರದಲ್ಲೀಗ ಹದವಾದ ಮಳೆ ಸುರಿದಿದೆ. ಅದು ಯಾರಿಗೆ ತಂಪನ್ನೀಯಲಿದೆ ಎಂದು ಈಗಲೇ ಹೇಳಲಾಗದು.

Advertisement

ಪುತ್ತೂರು ಕ್ಷೇತ್ರದಲ್ಲಿನ ತ್ರಿಕೋನ ಸ್ಪರ್ಧೆಯ ಹಣಾಹಣಿ ರಾಜ್ಯದ ಕಣ್ಣನ್ನೇ ಆಗಲಿಸಿದೆ. ತೀವ್ರ ಪೈಪೋಟಿಯ ಈ ಕ್ಷೇತ್ರದಲ್ಲಿ ಗೆಲುವು ಸಣ್ಣ ಅಂತರದಲ್ಲೇ ಎಂಬುದು ಬಹುತೇಕ ಖಚಿತವಾದಂತಿದೆ. ಬಿಜೆಪಿಯಿಂದ ಆಶಾ ತಿಮ್ಮಪ್ಪಗೌಡ ಸ್ಪರ್ಧಿಸಿದ್ದರೆ, ಅಶೋಕ್‌ ಕುಮಾರ್‌ ರೈ ಕಾಂಗ್ರೆಸ್‌ ಅಭ್ಯರ್ಥಿ. ಹಿಂದೂ ಮುಖಂಡ ಅರುಣ್‌ಕುಮಾರ್‌ ಪುತ್ತಿಲ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಇದಲ್ಲದೇ ಜೆಡಿಎಸ್‌ನ ದಿವ್ಯಪ್ರಭಾ ಗೌಡ ಚಿಲ್ತಡ್ಕ ಸಹ ಪೈಪೋಟಿ ನೀಡುವ ಲೆಕ್ಕಾಚಾರದಲ್ಲಿದ್ದಾರೆ.

ಬಿಜೆಪಿ ಪಾಲಿಗೆ ಪುತ್ತೂರು ಹಿಂದುತ್ವದ ಪ್ರಯೋಗ ಶಾಲೆ. ಇದೇ ಕೋಟೆ ಯಲ್ಲೀಗ ಅಸಲಿ ಹಿಂದುತ್ವ ಯಾರದ್ದು ಎನ್ನುವುದೇ ಚುನಾ ವಣೆಯ ವಿಷಯ. ಇದಕ್ಕೆ ಕಾರಣ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರ ಸ್ಪರ್ಧೆ. ಇಬ್ಬರ ವಿಷಯವೂ ಒಂದೇ. ಹೀಗಾಗಿ ಮತದಾರ ಯಾರದ್ದು ಅಸಲಿ ಹಿಂದುತ್ವ ಎಂದು ತೀರ್ಪು ನೀಡುತ್ತಾನೋ ಎಂಬುದೇ ಕುತೂಹಲ.

ಕಾಂಗ್ರೆಸ್‌ಗೂ ಸಲೀಸಲ್ಲ
ಪಕ್ಷೇತರ ಹಾಗೂ ಬಿಜೆಪಿ ನಡುವಿನ ಕಿತ್ತಾಟದಲ್ಲಿ ಕಾಂಗ್ರೆಸ್‌ಗೆ ಲಾಭ ಅನ್ನುವ ಭಾವನೆ ಮೇಲ್ನೋಟಕ್ಕೆ ಎನಿಸಿದರೂ ಅದು ಪೂರ್ಣಸತ್ಯವಲ್ಲ. ಇದಕ್ಕೂ ಕಾರಣ ಪಕ್ಷೇತರ ಅಭ್ಯರ್ಥಿ. ಈಗ ಕಾಂಗ್ರೆಸ್‌ನಲ್ಲಿರುವ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಹಿಂದೆ ಬಿಜೆಪಿಯಲ್ಲಿದ್ದವರು. 2008 ರಲ್ಲಿ ಟಿಕೆಟ್‌ ಸಿಗದ್ದಕ್ಕೆ ಪಕ್ಷ ತೊರೆದು ಸ್ವಾಭಿಮಾನಿ ವೇದಿಕೆಯಿಂದ ಪಕ್ಷೇತರ ರಾಗಿ ಸ್ಪರ್ಧಿಸಿದ್ದರು. ಆಗ ಇವರಿಗೆ ಪರೋಕ್ಷವಾಗಿ ಬೆಂಬಲಿಸಿದ್ದು ಬಿಜೆಪಿ ಯಲ್ಲಿನ ಒಂದು ತಂಡ. ಅಲ್ಲದೇ, ಅಂದು ಶಕುಂತಲಾ ಜತೆ ಬಂದ ತಂಡ ಈಗ ಕಾಂಗ್ರೆಸ್‌ನಲ್ಲಿ ಇದೆ. ಈ ಬಾರಿ ಶಕುಂತಲಾ ಅವರಿಗೆ ಟಿಕೆಟ್‌ ಸಿಕ್ಕಿಲ್ಲ. ಹಾಗಾಗಿ ಈ ಎರಡೂ ಪಕ್ಷಗಳ ತಂಡಗಳು ಈ ಬಾರಿ ಪಕ್ಷೇತರ ಪರ ನಿಂತಿವೆ ಎನ್ನುವುದು ಕಣದಲ್ಲಿ ಹರಿದಾಡುತ್ತಿರುವ ಸುದ್ದಿ. ಒಂದಕ್ಕೆ ಹಿಂದುತ್ವ ಬೆಂಬ ಲದ ಮೂಲಕ ಸೈದ್ಧಾಂತಿಕ ಬದ್ಧತೆ ಕಾಯ್ದುಕೊಳ್ಳುವ ಪ್ರಯತ್ನ, ಇನ್ನೊಂದು ತಂಡಕ್ಕೆ ಅಂದಿನ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸುವ ಅವಕಾಶ. ಒಂದು ವೇಳೆ ಇದು ಸತ್ಯವಾದರೆ ನೇರ ಹೊಡೆತ ಕಾಂಗ್ರೆಸ್‌ಗೆ ಎನ್ನುವುದು ಸುಳ್ಳಲ್ಲ.

ಜೆಡಿಎಸ್‌ಗೂ ಕಾಂಗ್ರೆಸ್ಸೆ  ಎದುರಾಳಿ..!
ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾಕರ ಮತ ಕಾಂಗ್ರೆಸ್‌ ಪಾಲಿನ ಮತಬ್ಯಾಂಕ್‌. ಆದರೆ ಈ ಬಾರಿಯ ಅಭ್ಯರ್ಥಿ ಬಿಜೆಪಿ ಪಾಳಯದಿಂದ ಬಂದವರು ಎನ್ನುವ ಸಣ್ಣ ಅಸಮಾಧಾನ ಅಲ್ಪಸಂಖ್ಯಾಕರಲ್ಲಿದೆ. ಈ ಬೇಸರ ಎಸ್‌ಡಿಪಿಐ ಗೆ ವರವಾದರೆ ಕಾಂಗ್ರೆಸ್‌ಗೆ ಕಷ್ಟ ಎದುರಾಗಬಹುದು. ಇನ್ನೊಂದೆಡೆ ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದ ದಿವ್ಯಪ್ರಭಾ ಈಗ ಜೆಡಿಎಸ್‌ ಅಭ್ಯರ್ಥಿ. ಪುತ್ತೂರಿನಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲವಾದರೂ, ಇವರು ಪಡೆಯುವ ಮತಗಳೂ ಕಾಂಗ್ರೆಸ್‌ನ ಮತ ಬುಟ್ಟಿಯಿಂದಲೇ ಎಂಬುದು ಗಮನಿಸಬೇಕಾದದ್ದು. ಈ ಎರಡೂ ಸವಾಲುಗಳನ್ನು ನಿಭಾಯಿಸುವುದೇ ಕಾಂಗ್ರೆಸ್‌ನ ಫ‌ಲಿತಾಂಶವನ್ನೂ ನಿರ್ಧರಿಸಬಲ್ಲದು.

Advertisement

ಪಕ್ಷೇತರ ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ಎಲ್ಲ ರೀತಿಯಲ್ಲಿ ಕಟ್ಟಿ ಹಾಕುವುದು ಬಿಜೆಪಿ ತಂತ್ರ. ಕಾರಣ, ಪುತ್ತಿಲ ಪಡೆಯುವ ಬಹುತೇಕ ಮತಗಳು ತನ್ನದೇ ಎಂಬ ಆತಂಕ ಬಿಜೆಪಿಯದ್ದು. ಮತ ವರ್ಗಾವಣೆ ತಡೆಯಲು ಆರ್‌ಎಸ್‌ಎಸ್‌ ಸ್ವತಃ ಕಣಕ್ಕಿಳಿದಿದೆ. ಆದರೆ ಎದುರಾಳಿಯನ್ನು ಸುಖಾಸುಮ್ಮನೆ ಟೀಕಿಸಿದಷ್ಟೂ ಸ್ಪರ್ಧೆಗೆ ತಾವಾಗಿಯೇ ಮಹತ್ವ ಕೊಟ್ಟಂತಾಗಿ, ಅನುಕಂಪವಾಗಿ ಪರಿವರ್ತನೆಯಾಗಲು ಅವಕಾಶ ಕೊಟ್ಟಂತೆ ಎಂಬ ಎಚ್ಚರ ಬಿಜೆಪಿಗೆ ಇದ್ದಂತಿಲ್ಲ. ಅದೇ ಮುಳು ವಾದರೂ ಅಚ್ಚರಿಯಿಲ್ಲ. ಕ್ಷೇತ್ರದಲ್ಲಿ ಮುಸ್ಲಿಂ, ಒಕ್ಕಲಿಗರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಬಂಟ, ಬಿಲ್ಲವ, ಎಸ್‌ಸಿ-ಎಸ್‌ಟಿ ಸಮುದಾಯ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಯಾರನ್ನೂ ನಿರ್ಲಕ್ಷಿéಸು ವಂತಿಲ್ಲ. ಸೋಲು-ಗೆಲುವಿನ ಅಂತರ ಕಡಿಮೆ ಇರುವ ಕಾರಣ ಪ್ರತೀ ಸಣ್ಣ ಸಮುದಾಯದ ಮತಗಳೂ ನಿರ್ಣಾಯಕವೇ.

ಕಣದಲ್ಲಿರುವ ಅಭ್ಯರ್ಥಿಗಳು 8
-  ಆಶಾ ತಿಮ್ಮಪ್ಪ ಗೌಡ (ಬಿಜೆಪಿ)
-  ಅಶೋಕ್‌ ಕುಮಾರ್‌ ರೈ (ಕಾಂಗ್ರೆಸ್‌)
-  ದಿವ್ಯ ಪ್ರಭಾ ಚಿಲ್ಲಡ್ಕ (ಜೆಡಿಎಸ್‌)
-  ಅರುಣ್‌ ಕುಮಾರ್‌ ಪುತ್ತಿಲ (ಪಕ್ಷೇತರ)
-  ಡಾ| ವಿಶು ಕುಮಾರ್‌ (ಎಎಪಿ)
-  ಶಾಫಿ ಬೆಳ್ಳಾರೆ (ಎಸ್‌ಡಿಪಿಐ )
-  ಸುಂದರ ಕೊಯಿಲ (ಪಕ್ಷೇತರ)
-  ಐವನ್‌ ಫೆರಾವೋ (ಕೆಆರ್‌ಎಸ್‌)

ಲೆಕ್ಕಾಚಾರ ಏನು?
ಬಹಳ ವಿಚಿತ್ರವಾದ ಪರಿಸ್ಥಿತಿ ಕಣದಲ್ಲಿದೆ. ಒಬ್ಬರ ಸೋಲು, ಮತ್ತೂಬ್ಬರ ಗೆಲುವು ಎನ್ನುವುದು ಸಾಮಾನ್ಯ ಹೇಳಿಕೆ. ಇಲ್ಲಿ ಒಬ್ಬರ ಗೆಲುವು ಹಲವರ ಸೋಲು, ಹಲವರ ಸೋಲು ಒಬ್ಬನ ಗೆಲುವು ಎನ್ನುವಂತಾಗಿದೆ. ಈ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆಯಲ್ಲಿರುವ ಏಕೈಕ ಕ್ಷೇತ್ರವಿದು. ಸಿದ್ಧಾಂತ ಸಿದ್ಧಾಂತ ಸಿದ್ಧಾಂತ.

Advertisement

Udayavani is now on Telegram. Click here to join our channel and stay updated with the latest news.

Next