Advertisement

ಕಾಂಗ್ರೆಸ್‌ನ ಮಿಂಚಿನ ಓಟಕ್ಕೆ ಬಿಜೆಪಿಯದ್ದು ರೆಡ್‌ ಸಿಗ್ನಲ್‌ ?

10:20 PM May 05, 2023 | Team Udayavani |

ಮಂಗಳೂರು: ಕಡಲ ಮಡಿಲನ್ನು ಬೆಸೆದುಕೊಂಡಿರುವ ಕ್ಷೇತ್ರ ಮಂಗಳೂರು ವಿಧಾನಸಭಾ ಕ್ಷೇತ್ರ. ಇಲ್ಲಿಯೂ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ. ಮಧ್ಯೆ ಅಲ್ಲಲ್ಲಿ ತೊಡರುಗಾಲು ಹಾಕಲು ಎಸ್‌ಡಿಪಿಐ ಇದ್ದಂತಿದೆ. ಆದರೆ ತ್ರಿಕೋನ ಸ್ಪರ್ಧೆಯ ಸಾಧ್ಯತೆ ತೀರಾ ಕಡಿಮೆ.

Advertisement

5ನೇ ಬಾರಿ ಗೆಲ್ಲುವ ಹುರುಪಿನಲ್ಲಿರುವ ಕಾಂಗ್ರೆಸ್‌ನ ಶಾಸಕ ಯು.ಟಿ. ಖಾದರ್‌ಗೆ ಜಿ.ಪಂ. ಮಾಜಿ ಉಪಾಧ್ಯಕ್ಷ ಬಿಜೆಪಿಯ ಸತೀಶ್‌ ಕುಂಪಲ ಪ್ರತಿಸ್ಪರ್ಧಿ.

2008 ರ ವಿಧಾನಸಭಾ ಕ್ಷೇತ್ರ ಪುನರ್‌ ವಿಂಗಡನೆಯವರೆಗೆ ಇದು ಉಳ್ಳಾಲ ಕ್ಷೇತ್ರವಾಗಿತ್ತು. ಈಗ ಮಂಗಳೂರು, ಬಂಟ್ವಾಳದ ಒಂದಿಷ್ಟು ಭೌಗೋಳಿಕ ಪ್ರದೇಶಗಳು ಸೇರ್ಪಡೆಯಾಗಿ ಕೆಲ ಭಾಗ ಪ್ರದೇಶಗಳನ್ನು ಮಂಗಳೂರು ದಕ್ಷಿಣಕ್ಕೆ ಕೊಟ್ಟು ಮಂಗಳೂರು ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್‌ನಿಂದ ಸತತ 4 ಬಾರಿ ಗೆಲುವು ಕಂಡವರು ಖಾದರ್‌. ಸುದೀರ್ಘ‌ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಬೆನ್ನಿಗಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ.

ಕಾಂಗ್ರೆಸ್‌ನ ಗೆಲುವಿನ ಓಟಕ್ಕೆ ಈ ಬಾರಿ  ತಡೆಯೊಡ್ಡಲೇ ಬೇಕೆಂದು ಬಿಜೆಪಿ ಟೊಂಕಕಟ್ಟಿ ಪ್ರಚಾರ ನಿರತವಾಗಿದೆ. ಜಿ.ಪಂ. ಉಪಾಧ್ಯಕ್ಷರಾಗಿ, ಸಂಘಟಕನಾಗಿ ಗುರುತಿಸಿಕೊಂಡಿರುವ ಸತೀಶ್‌ ಕುಂಪಲ ಹೊಸ ಹುಮ್ಮಸ್ಸಿನಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯ ಸರಕಾರದ ಸಾಧನೆ, ಕೇಂದ್ರ ಸರಕಾರದ ಯೋಜನೆಗಳು ಹಾಗೂ ಪಕ್ಷದ ಸಂಘಟನೆಯ ಬಲವನ್ನು ಇವರು ನಂಬಿಕೊಂಡಿದ್ದಾರೆ. ಇದರೊಂದಿಗೆ ಗ್ರಾ.ಪಂ. ಮಟ್ಟದಲ್ಲಿ ಅಸ್ತಿತ್ವ ಕಂಡುಕೊಂಡಿರುವ ಎಸ್‌ಡಿಪಿಐ ಸಹ ಪ್ರಚಾರ ನಿರತವಾಗಿದೆ. ಅದರ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ. ಇವರ ಮತ ಗಳಿಕೆ ತನ್ನ ಓಟಕ್ಕೆ ತೊಡಕಾಗಬಹುದೆಂಬ ಆತಂಕ ಕಾಂಗ್ರೆಸ್‌ನದ್ದು.

ಅಪಸ್ವರ ಮರೆಸಿದ ಒಗ್ಗಟ್ಟು!
ಬಿಜೆಪಿ ಟಿಕೆಟ್‌ಗಾಗಿ ಕೆಲವರು ಈ ಬಾರಿ ಆಕಾಂಕ್ಷಿಗಳಿದ್ದರು. ಸಂತೋಷ್‌ ಕುಮಾರ್‌ ರೈ, ಸತೀಶ್‌ ಕುಂಪಲ, ರವೀಂದ್ರ ಶೆಟ್ಟಿ, ಚಂದ್ರಹಾಸ್‌ ಉಳ್ಳಾಲ್‌ ಸಹಿತ ಹಲವರ ಹೆಸರಿತ್ತು. ಯಾರಿಗೆ ಟಿಕೆಟ್‌ ನೀಡಿದರೂ ಅಸಮಾಧಾನ ಉಂಟಾಗಬಹುದು ಎಂಬ ಪರಿಸ್ಥಿತಿ ಇತ್ತು. ಆದರೆ, “ಬಿಲ್ಲವ’ ನೆಲೆಯಿಂದ ಸತೀಶ್‌ ಕುಂಪಲ ಅವರಿಗೆ ಅವಕಾಶ ಸಿಕ್ಕಿತು. ಈಗ ಎಲ್ಲ ಆಪಸ್ವರವೂ ನಿವಾರಣೆಯಾಗಿದ್ದು ಒಗ್ಗಟ್ಟು ಪ್ರದರ್ಶನವಾಗಿದೆ. ಇದು ಬಿಜೆಪಿಗೆ ಲಾಭ.

Advertisement

ಜೆಡಿಎಸ್‌ ಮತ ಕುತೂಹಲ!
ಜೆಡಿಎಸ್‌ ಅಭ್ಯರ್ಥಿಯ ನಾಮಪತ್ರ ದಿಢೀರ್‌ ವಾಪಸ್‌ ಪ್ರಕರಣ ಈ ಕ್ಷೇತ್ರದ “ರಾಜಕೀಯ ಚದುರಂಗ’ದಾಟವಾಗಿ ಚರ್ಚೆಯಲ್ಲಿದೆ. ಅಲ್ತಾಫ್‌ ಕುಂಪಲ ಅವರು ನಾಮಪತ್ರ ಸಲ್ಲಿಸಿದ್ದರೂ, ಕೊನೆಯ ಹಂತದಲ್ಲಿ ಅವರು ಪಕ್ಷದ ಮುಖಂಡರ ಗಮನಕ್ಕೆ ತಾರದೆ ವಾಪಸ್‌ ಪಡೆದರು. ಅವರ ಮತಗಳು ಯಾರ ಪಾಲಾಗುತ್ತದೆ ಎಂಬ ಕುತೂಹಲವಿದೆ.

ಚುನಾವಣಾ ಪ್ರಚಾರ ಅಬ್ಬರದಲ್ಲಿರಲಿಲ್ಲ. ಖಾದರ್‌ ಅವರೇ ಪ್ರಚಾರದ ನೇತೃತ್ವದ ಲ್ಲಿದ್ದರೆ, ಬಿಜೆಪಿಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಸಹಿತ ಕೆಲವು ನಾಯಕರು ಪ್ರಚಾರದ ರಂಗು ಹೆಚ್ಚಿಸಿದ್ದರು. ಕ್ಷೇತ್ರದಲ್ಲಿನ ಅಭಿವೃದ್ಧಿ, ಕ್ರಿಯಾಶೀಲತೆ ಖಾದರ್‌ ಅವರ ಕೈ ಹಿಡಿಯಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದ್ದರೆ, ಹಿಂದುತ್ವ ಹಾಗೂ ಬದಲಾವಣೆಯ ಬಯಕೆ ಮತವಾಗಿ ಬದಲಾದೀತೆಂಬ ಆಶಾಭಾವ ಬಿಜೆಪಿಯದ್ದು. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ಶಬ್ದ ಮಾಡುತ್ತಿದ್ದರೆ, ಮೋದಿ ಫ್ಯಾಕ್ಟರ್‌ ಸಹ ಕೊಂಚ ಚಾಲ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಮತದಾರರು ಹಳಬರಿಗೇ ಮತ್ತೂಂದು ಅವಕಾಶ ಕೊಡುವರೋ, ಹೊಸಬರನ್ನು ಆರಿಸಿಕೊಳ್ಳುವರೋ ಕಾದು ನೋಡಬೇಕಿದೆ.

ಕಣದಲ್ಲಿರುವ ಅಭ್ಯರ್ಥಿಗಳು 5
-  ಯು.ಟಿ.ಖಾದರ್‌ ಫ‌ರೀದ್‌ (ಕಾಂಗ್ರೆಸ್‌)
- ಸತೀಶ್‌ ಕುಂಪಲ (ಬಿಜೆಪಿ)
- ಮೊಹಮ್ಮದ್‌ ಆಶ್ರಫ್ (ಎಎಪಿ)
-  ರಿಯಾಝ್ ಫ‌ರಂಗಿಪೇಟೆ (ಎಸ್‌ಡಿಪಿಐ)
-  ದೀಪಕ್‌ ರಾಜೇಶ್‌ ಕುವೆಲ್ಲೊ (ಪಕ್ಷೇತರ)

ಲೆಕ್ಕಾಚಾರ ಏನು?
ಈ ಕ್ಷೇತ್ರದಲ್ಲಿನ ಆಸಕ್ತಿಕರ ಅಂಶಗಳೆಂದರೆ ಹಳಬರಿಗೆ ತಾನು ಮಾಡಿದ ಸಾಧನೆ ಬೆನ್ನಿಗಿದೆ. ಹೊಸಬರಿಗೆ ನೂರಾರು ಕನಸುಗಳಿವೆ. ಅದಕ್ಕೆ ಶಕ್ತಿ ತುಂಬಲು ಸರಕಾರಗಳಿವೆ. ಜನರಿಗೆ ಬದಲಾವಣೆ ಬೇಕೆಂದರೆ ಆಯ್ಕೆ ಬೇರೆಯಾಗುತ್ತದೆ. ಅದರ ಅಗತ್ಯವಿಲ್ಲ ಎನ್ನಿಸಿದರೆ ಸೋಲು ಗೆಲುವಿನ ಅಂತರದಲ್ಲಿ ಕೊಂಚ ಏರುಪೇರಾಗಬಹುದಷ್ಟೆ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next