Advertisement

ಯಾವುದು ಯಾರ ಕೈ ಹಿಡಿಯುತ್ತದೆಯೋ ಕಾದು ನೋಡುವ ಕುತೂಹಲ

10:23 PM May 05, 2023 | Team Udayavani |

ಬೆಳ್ತಂಗಡಿ: ಈ ಕ್ಷೇತ್ರದಲ್ಲಿ ಯುವ ಮುಖಗಳದ್ದೇ ನೇರ ಹಣಾಹಣಿ. ಒಬ್ಬರು ಒಂದು ಅವಧಿಯ ಅನುಭವಿ. ಮತ್ತೂಬ್ಬರದ್ದು ವಿಧಾನಸಭಾ ಚುನಾವಣೆಗೆ ಈಗ ರಂಗಪ್ರವೇಶ. ಆದರೆ ಇಬ್ಬರದ್ದೂ ಯುವ ನಾಯಕತ್ವವೇ. ಇದೇ ಈ ಕ್ಷೇತ್ರದ ಪ್ರಮುಖ ವಿಶೇಷ ಅಂಶ.

Advertisement

ಈ ಕ್ಷೇತ್ರದ ಇತಿಹಾಸ ಕೊಂಚ ವಿಶಿಷ್ಟವಾದುದು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ತಂದೆ ರತ್ನ ವರ್ಮ ಹೆಗ್ಗಡೆ ಅವರು ಪ್ರತಿನಿಧಿಸಿದ ಕ್ಷೇತ್ರವಿದು (1957). ಕಾನೂನು ಪರಿಣಿತರಾದ ವೈಕುಂಠ ಬಾಳಿಗರು ಇಲ್ಲಿಂದ ಚುನಾಯಿತರಾಗಿದ್ದರು. 1957ರಿಂದ 2018ರವರೆಗಿನ 14 ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್‌ ಗೆದ್ದಿದ್ದರೆ, 5 ಬಾರಿ ಬಿಜೆಪಿ
ಗೆದ್ದಿದೆ. ಒಮ್ಮೆ ಜನತಾದಳವೂ ಅಸ್ತಿತ್ವ ಪ್ರದರ್ಶಿಸಿದೆ. ಇತ್ತೀಚಿನ ಅಂದರೆ 1999 ರ ಅನಂತರದ ಗೆಲುವಿನ ಟ್ರೆಂಡ್‌ ಗಮನಿಸುವುದಾದರೆ 1999, 2004ರಲ್ಲಿ ಬಿಜೆಪಿ ಗೆದ್ದರೆ, 2008, 2013 ರಲ್ಲಿ ಕ್ಷೇತ್ರ ಕಾಂಗ್ರೆಸ್‌ ಪಾಲಾಯಿತು. 2018 ರಲ್ಲಿ ಮತ್ತೆ ಬಿಜೆಪಿ ಗೆದ್ದಿದೆ. 2023 ಕ್ಕೆ ಸೆಣಸಾಟ ಚಾಲ್ತಿಯಲ್ಲಿದೆ.

ಇಲ್ಲಿ ಈ ಬಾರಿ ಬಿಜೆಪಿಯ ಶಾಸಕ ಹರೀಶ್‌ ಪೂಂಜ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಗೊಂದಲ ಎದುರಿಸಿದ್ದ ಕಾಂಗ್ರೆಸ್‌ ಅಂತಿಮವಾಗಿ ಹೊಸಮುಖ ರಕ್ಷಿತ್‌ ಶಿವರಾಂ ಅವರಿಗೆ ಅವಕಾಶ ನೀಡಿದೆ.

ಆರಂಭದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೆ.ಗಂಗಾಧರ ಗೌಡ, ವಸಂತ ಬಂಗೇರರು ಹೊರಗಿನವರಿಗೆ ಟಿಕೆಟ್‌ ನೀಡಿದರೆ ಬೆಂಬ ಲಿಸುವುದಿಲ್ಲ ಎಂದಿದ್ದರು. ಈ ಪೈಕಿ ಬಂಗೇರರು ಮೃದು ಧೋರಣೆ ತೋರಿ, ಪಕ್ಷದ ನಾಯಕರ ಸೂಚನೆಯಂತೆ ರಕ್ಷಿತ್‌ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಅತ್ತ ಮಾಜಿ ಸಚಿವ ಕೆ.ಗಂಗಾಧರ ಗೌಡರನ್ನು ಸಮಾಧಾನ ಪಡಿಸಲು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಯಿತು. ಆದರೂ ಇನ್ನೂ ಪೂರ್ಣವಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ್ದಂತೆ ತೋರುತ್ತಿಲ್ಲ.

ಪೂಂಜ ಅವರಿಗೆ ತಮ್ಮ ಅವಧಿಯಲ್ಲಿ ನಡೆಸಿದ ಅಭಿವೃದ್ಧಿ ಕೆಲಸಗಳೇ ಆಶ್ರಯ. ಅದರೊಂದಿಗೆ ಹಿಂದುತ್ವ, ಮೋದಿ ಫ್ಯಾಕ್ಟರ್‌ ಕೈ ಹಿಡಿಯಬೇಕು. ಇದರೊಂದಿಗೆ ಆಡಳಿತ ವಿರೋಧಿ ಅಲೆ, ವಿಪಕ್ಷಗಳ ಶà.40 ಕಮಿಷನ್‌ ಆರೋಪ, ಮರಳು ಮಾಫಿಯಾದತ್ತ ಮೃದು ಧೋರಣೆಯ ಆರೋಪ ಇತ್ಯಾದಿಗೆ ಕಣದಲ್ಲಿ ಉತ್ತರಿಸಬೇಕಾದ ಸವಾಲು ಪೂಂಜರದ್ದು. ಇತ್ತ ರಕ್ಷಿತ್‌ ಶಿವರಾಂ ಬೆಸ್ಟ್‌ ಫೌಂಡೇಶನ್‌ ಮೂಲಕ ಎರಡು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ಜತೆಗೆ ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲೂ ತೊಡಗಿಕೊಂಡು ಒಂದಷ್ಟು ಯಶಸ್ವಿಯಾಗಿದ್ದಾರೆ. ಇವು ಧನಾತ್ಮಕ ಅಂಶಗಳು. ಆದರೆ ಹಿರಿಯರನ್ನು ದೂರವಿರಿಸಿದ್ದು, ಪಕ್ಷದ ಸಿದ್ಧಾಂತವೇ ತಿಳಿಯದ ಯುವ ಜನರನ್ನು ಹತ್ತಿರವಿರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರತಿಸ್ಪರ್ಧಿಗಳನ್ನು ಹಣಿಯಲು ನಕಲಿ ಖಾತೆ ಬಳಸಿದ ಆರೋಪ ಎಲ್ಲವೂ ವ್ಯಾಪಕ ಚರ್ಚೆಗೀಡಾಗಿವೆ.

Advertisement

ಬಿಲ್ಲವ ಸಮುದಾಯದ ರಕ್ಷಿತ್‌ ಶಿವರಾಂಗೆ ಜಾತಿವಾರು ಲೆಕ್ಕವೇ ಟ್ರಂಪ್‌ ಕಾರ್ಡ್‌. ಸಮುದಾಯದ ಮತಗಳನ್ನು ಗಟ್ಟಿಗೊಳಿಸಿಕೊಳ್ಳುವ ಕೆಲಸ ಭರದಿಂದ ನಡೆದಿದೆ. ಇದು ಸ್ಪರ್ಧೆಯ ತೀವ್ರತೆಯನ್ನು ಹೆಚ್ಚಿಸತೊಡಗಿದೆ. ಗ್ರಾ.ಪಂ ಮಟ್ಟದಲ್ಲಿ ಹೊಂದಿರುವ ತನ್ನ ಪ್ರಾಬಲ್ಯವನ್ನು ಮತವನ್ನಾಗಿ ಪರಿವರ್ತಿಸುವತ್ತ ಬಿಜೆಪಿ ಕಾರ್ಯೋನ್ಮುಖವಾಗಿದೆ.

ಎರಡು ಪಕ್ಷಗಳಲ್ಲೂ ಗುಂಪುಗಾರಿಕೆ, ಅಸಮಾಧಾನವಿದೆ. ಪರಸ್ಪರ ಪಕ್ಷಾಂತರವೂ ನಡೆದಿದೆ. ಕೆಲವರು ತಟಸ್ಥ ನೀತಿ ಆಯ್ದುಕೊಂಡಿದ್ದಾರೆ. ಇವೆಲ್ಲವೂ ಫ‌ಲಿತಾಂಶದ ಮೇಲೆ ಯಾವ ತೆರನಾದ ಪರಿಣಾಮ ಬೀರುತ್ತದೆಂಬ ಕುತೂಹಲ ಹಾಗೆಯೇ ಉಳಿದಿ‌ದೆ. ಒಟ್ಟಿನಲ್ಲಿ ಇಬ್ಬರ ಮಧ್ಯೆ ನೇರ ಹಣಾಹಣಿ. ಉಳಿದ ಅಭ್ಯರ್ಥಿಗಳ ಗಳಿಕೆ ಗಮನಾರ್ಹವಲ್ಲದ್ದು.

ಕಣದಲ್ಲಿರುವ ಅಭ್ಯರ್ಥಿಗಳು 8
-  ಹರೀಶ್‌ ಪೂಂಜಾ (ಬಿಜೆಪಿ)
-  ರಕ್ಷಿತ್‌ ಶಿವರಾಂ (ಕಾಂಗ್ರೆಸ್‌)
-  ಅಶ್ರಫ್ ಆಲಿಕುಂಞ (ಜೆಡಿಎಸ್‌)
-  ಆದಿತ್ಯ ನಾರಾಯಣ (ಸರ್ವೋದಯ ಪಕ್ಷ)
-  ಜನಾರ್ದನ ಬಂಗೇರ (ಎಎಪಿ)
-  ಅಕ್ಷರ್‌ ಬೆಳ್ತಂಗಡಿ (ಎಸ್‌ಡಿಪಿಐ)
-  ಶೈಲೇಶ್‌ ಆರ್‌.ಜೆ. (ತುಳುವರೆ ಪಕ್ಷ)
-  ಮಹೇಶ್‌ (ಪಕ್ಷೇತರ)

ಲೆಕ್ಕಾಚಾರ ಏನು?
ಇಬ್ಬರೂ ಯುವಕರ ಬೆನ್ನ ಹಿಂದೆ ಪಕ್ಷಗಳ ಕೆಲವು ಹಿರಿಯರು, ಸ್ಟಾರ್‌ ಪ್ರಚಾರಕರು ನಿಂತಿದ್ದಾರೆ. ಆದರೆ ಗೆಲುವನ್ನು ನಿರ್ಧರಿಸುವ ಅಂಶಗಳಲ್ಲಿ ಅಭಿವೃದ್ಧಿಯೇ ಪ್ರಮುಖ. ಭಾವನಾತ್ಮಕ ಸಂಗತಿಗಳು ಗೆಲುವಿನ ಅಂತರವನ್ನು ಹೆಚ್ಚಿಸ ಬಲ್ಲವೇ ಹೊರತು ಗೆಲುವು ತರುವ ಸಾಧ್ಯತೆ ಕಡಿಮೆ.

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next