ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಇಬ್ಬರೂ ಹೊಸಬರು. ದಶಕಗಳಿಂದ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಮೊಗವೀರ ಸಮುದಾಯಕ್ಕೆ ಅವಕಾಶ ನೀಡುತ್ತಿದೆ. ಈ ಚುನಾವಣೆಯಲ್ಲೂ ಅದೇ ಸಂಪ್ರದಾಯ ಮುಂದುವರಿಸಿದೆ. ಬಿಜೆಪಿ ಇಲ್ಲಿ ಬ್ರಾಹ್ಮಣ, ಬಂಟ ಸಮುದಾಯಕ್ಕೆ ಹಿಂದೆ ಟಿಕೆಟ್ ನೀಡಿದ್ದು, ಈ ಬಾರಿ ಮೊಗವೀರ ಸಮುದಾಯಕ್ಕೆ ಮಣೆ ಹಾಕಿದೆ. ಒಂದೇ ಸಮುದಾಯದ ಇಬ್ಬರು ಅಭ್ಯರ್ಥಿಗಳ ಮಧ್ಯೆ ಸೆಣಸಾಟ ಇದೇ ಮೊದಲು.
Advertisement
ಬಿಜೆಪಿ ಅಭ್ಯರ್ಥಿಗೆ ಹಾಲಿ ಶಾಸಕರ ಬಲದ ಜತೆಗೆ ಕಳೆದ ಐದು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳೇ ಶ್ರೀರಕ್ಷೆ. ಕಾಂಗ್ರೆಸ್ ಅಭ್ಯರ್ಥಿ ಪಕ್ಷದ ಗ್ಯಾರಂಟಿ ಕಾರ್ಡ್ ಜತೆಗೆ ಬಿಜೆಪಿ ಸರಕಾರದ ಭ್ರಷ್ಟಾಚಾರ, ಕಮಿಷನ್ ಆರೋಪ, ವಿವಿಧ ನೇಮಕಾತಿ ಹಗರಣಗಳೇ ಮತ ಗಳಿಸಲು ಆಧಾರ. ನಗರಸಭೆ ಸದಸ್ಯರಾಗಿದ್ದದ್ದು, ಸಹಕಾರಿ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವುದು ಯಶ್‌ಪಾಲ್ ಅವರಿಗೆ ಅನುಕೂಲಕರ ಅಂಶಗಳಾಗಬಹುದು. ಇನ್ನು ಪ್ರಸಾದ್‌ರಾಜ್ ಕಾಂಚನ್ ಅವರು ಕಾಂಗ್ರೆಸ್ ಕುಟುಂಬದಿಂದಲೇ ಬಂದವರು. ಅವರ ತಾಯಿ ಸರಳಾ ಕಾಂಚನ್ ಅವರು ಬ್ರಹ್ಮಾವರ ಕ್ಷೇತ್ರವಿದ್ದಾಗ ಅಲ್ಲಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಜತೆಗೆ ಉದ್ಯಮಿ ಯಾಗಿಯೂ ಪರಿಚಿತರು. ಜೆಡಿಎಸ್‌ನಿಂದ ದಕ್ಷತ್ ಶೆಟ್ಟಿ ಕಣದಲ್ಲಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆಯಿದ್ದರೂ ಎರಡೂ ಪಕ್ಷದಿಂದಲೂ ಮೊಗವೀರ ಸಮುದಾಯದವರೇ ಸ್ಪರ್ಧಿಗಳು. ಮೊಗವೀರ ಮತ್ತು ಬಿಲ್ಲವರ ಮತಗಳು ಹೆಚ್ಚಿವೆ. ಬಂಟ, ಅಲ್ಪಸಂಖ್ಯಾಕರ ಹಾಗೂ ಬ್ರಾಹ್ಮಣ ಮತದಾರರೂ ಇದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತದಾರರು ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಅಧಿಕವಿದ್ದಾರೆ. ಮೊಗವೀರ ಹಾಗೂ ಬಿಲ್ಲವ ಸಮುದಾಯದ ಮತಗಳನ್ನು ಹೆಚ್ಚು ಯಾರು ಪಡೆಯಲಿದ್ದಾರೋ ಅವರಿಗೆ ಜಯಲಕ್ಷ್ಮೀ ಒಲಿಯಬಹುದು. ಎರಡು ಪಕ್ಷದಿಂದಲೂ ಬಿರುಸಿನ ಪ್ರಚಾರ ನಡೆಯುತ್ತಿದೆ. ರಾಜ್ಯ ನಾಯಕರೂ ಪ್ರಚಾರ ನಡೆಸಿದ್ದಾರೆ. ಇಬ್ಬರಿಗೂ ಇದು ಸ್ವಕ್ಷೇತ್ರವಾದ್ದರಿಂದ, ಮತದಾರರು ಯಾರ ಕಡೆ ಒಲವು ತೋರುವರೋ ಕಾದು ನೋಡಬೇಕಿದೆ. ಚರ್ಚೆಯ ವಿಷಯ
ಇಬ್ಬರೂ ಹೊಸಬರಾದ ಕಾರಣ ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಹೊಂದಿಲ್ಲ. ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಒಟ್ಟಿಗೆ ಇರುವುದು ಬಿಜೆಪಿ ಗೆ ಪ್ಲಸ್. ಕಾಂಗ್ರೆಸ್ ನಾಯಕಿ ಸರಳಾ ಕಾಂಚನ್ ಅವರು ಬ್ರಹ್ಮಾವರ ಭಾಗದಲ್ಲಿ ತಮ್ಮದೇ ಪ್ರಭಾವ ಹೊಂದಿರುವುದು ಕಾಂಗ್ರೆಸ್ ಅಭ್ಯರ್ಥಿಗೆ ಸಹಕಾರಿಯಾಗಬಹುದು. ಎರಡೂ ಪಕ್ಷಗಳು ತಮ್ಮದೇ ಸಾಂಪ್ರದಾಯಿಕ ಮತಗಳನ್ನು ಹೊಂದಿವೆ. ಬಿಜೆಪಿ ಅಭಿವೃದ್ಧಿ, ಹಿಂದುತ್ವ ಎನ್ನುತಿದ್ದರೆ, ಕಾಂಗ್ರೆಸ್ ವಿದ್ಯಾವಂತ ಅಭ್ಯರ್ಥಿ, ಸರಕಾರ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಪ್ರಚಾರದಲ್ಲಿ ನಿರತವಾಗಿದೆ.
Related Articles
- ಯಶ್‌ಪಾಲ್ ಎ. ಸುವರ್ಣ (ಬಿಜೆಪಿ)
- ಪ್ರಸಾದ್ ರಾಜ್ ಕಾಂಚನ್(ಕಾಂಗ್ರೆಸ್)
- ದಕ್ಷತ್ ಶೆಟ್ಟಿ (ಜೆಡಿಎಸ್)
- ಪ್ರಭಾಕರ ಪೂಜಾರಿ (ಎಎಪಿ)
- ನಿತಿನ್ ವಿ. ಪೂಜಾರಿ (ಉತ್ತಮ ಪ್ರಜಾಕೀಯ ಪಕ್ಷ)
- ರಾಮದಾಸ ಭಟ್ (ಕರ್ನಾಟಕ ರಾಷ್ಟ್ರ ಸಮಿತಿ)
- ಶೇಖರ್ ಹಾವಂಜೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ)
Advertisement
ಲೆಕ್ಕಾಚಾರ ಏನು?ಕಳೆದ ಬಾರಿ ಆಡಳಿತ ವಿರೋಧಿ ಅಲೆ, ಹಿಂದುತ್ವ, ಮೋದಿ ಭೇಟಿ ಬಿಜೆಪಿಗೆ ವರದಾನವಾಗಿತ್ತು. ಈ ಬಾರಿ ಆಡಳಿತ ವಿರೋಧಿ ಅಲೆಯ ಕಾವು ತಡೆಯಲು ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಿದೆ. ಅದು ಫಲ ಕೊಡು ತ್ತದೋ ಕಾದು ನೋಡಬೇಕಿದೆ. – ರಾಜು ಖಾರ್ವಿ ಕೊಡೇರಿ