Advertisement

Karnataka poll: ಇನ್ನು ಪ್ರಚಾರ ಪ್ರವರ: ಕೊನೆಗೊಂಡ ನಾಮಪತ್ರ ಸಲ್ಲಿಕೆ…ಇಂದು ಪರಿಶೀಲನೆ

01:22 AM Apr 21, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರು ವಾರ ಉಮೇದುವಾರಿಕೆಯ ಭರಾಟೆ ಬಲವಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ಸಂಸದ ಡಿ.ಕೆ. ಸುರೇಶ್‌ ಸಹಿತ ಪ್ರಮುಖ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತ್ಯಗೊಂಡಿದ್ದು, ಶುಕ್ರವಾರ ಪರಿ ಶೀಲನೆ ನಡೆಯಲಿದೆ. ಉಮೇದುವಾರಿಕೆ ವಾಪಸ್‌ ಪಡೆಯಲು ಸೋಮವಾರ ಕೊನೆಯ ದಿನವಾಗಿದೆ.

Advertisement

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅಭ್ಯರ್ಥಿ ಯಾಗಿ ಕಣಕ್ಕಿಳಿದಿರುವ, ಕಂದಾಯ ಸಚಿವ ಆರ್‌. ಅಶೋಕ್‌ ಬಿಜೆಪಿಯಿಂದ ಸ್ಪರ್ಧಿಸಿರುವ ಕನಕಪುರ ದಿಂದ ಡಿಕೆಶಿ ಸಹೋದರ, ಸಂಸದ ಡಿ.ಕೆ. ಸುರೇಶ್‌ ಕೂಡ ಗುರುವಾರ ನಾಮಪತ್ರ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ. ಇದು ರಾಜಕೀಯ ವಲಯದಲ್ಲಿ ಹಲವು ಬಗೆಯ ವ್ಯಾಖ್ಯಾನಗಳಿಗೆ ಅವಕಾಶ ಕಲ್ಪಿಸಿದೆ.

ಕೊನೆಯ ದಿನವೂ ಪಕ್ಷಾಂತರ
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವೂ ಪಕ್ಷತ್ಯಾಗ ನಡೆದಿದ್ದು, ಮಂಗಳೂರು ಉತ್ತರದಿಂದ ಕಾಂಗ್ರೆಸ್‌ ಟಿಕೆಟ್‌ ವಂಚಿತ ಮೊದಿನ್‌ ಬಾವಾ ಜೆಡಿಎಸ್‌ ಸೇರಿ ನಾಮಪತ್ರ ಸಲ್ಲಿಸಿದ್ದಾರೆ.
ಅದೇ ರೀತಿ ಬಿಜೆಪಿ ಟಿಕೆಟ್‌ ವಂಚಿತ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌, ಮಾಜಿ ಸಚಿವ ಸೊಗಡು ಶಿವಣ್ಣ, ಕಾಂಗ್ರೆಸ್‌ ಟಿಕೆಟ್‌ ವಂಚಿತ ಅರಕಲಗೂಡಿನ ಕೃಷ್ಣೇ ಗೌಡ, ಮಂಡ್ಯದ ಜೆಡಿಎಸ್‌ ಟಿಕೆಟ್‌ ವಂಚಿತ ಹಾಲಿ ಶಾಸಕ ಎಂ. ಶ್ರೀನಿವಾಸ್‌ ಬಂಡಾಯಗಾರರಾಗಿ ಕಣಕ್ಕಿಳಿದಿದ್ದಾರೆ.

ಮದ್ದೂರಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತ ಗುರು ಚರಣ್‌ ಗುರುವಾರ ಎಚ್‌.ಡಿ. ಕುಮಾರ ಸ್ವಾಮಿ ಸಮ್ಮುಖ ದಲ್ಲಿ ಜೆಡಿಎಸ್‌ ಸೇರಿದರು. ಅದೇ ರೀತಿ ಬಿಜೆಪಿ ಟಿಕೆಟ್‌ ವಂಚಿತ ಮಾಜಿ ಸಚಿವ ಬಿ. ಸೋಮ ಶೇಖರ್‌, ಮೂಡಾ ಮಾಜಿ ಅಧ್ಯಕ್ಷ ಬಸವೇಗೌಡ ಸಿದ್ದರಾಮಯ್ಯ, ಕಾಂಗ್ರೆಸ್‌ಗೆ ಸೇರಿದರು. ಬುಧವಾರ ರಾತ್ರಿ ಬಿಡುಗಡೆಯಾದ ಕಾಂಗ್ರೆಸ್‌ನ ಅಂತಿಮ ಪಟ್ಟಿಯಲ್ಲಿ ಮುಳಬಾಗಿಲು ಕ್ಷೇತ್ರದ ಟಿಕೆಟ್‌ ಪಡೆದಿದ್ದ ಡಾ| ಮುದ್ದುಗಂಗಯ್ಯ ಅವರ ಬದಲಿಗೆ ಆದಿನಾರಾಯಣ ಎಂಬವರಿಗೆ ಟಿಕೆಟ್‌ ನೀಡಿದ್ದು, ಅವರೂ ನಾಮಪತ್ರ ಸಲ್ಲಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆಯಿಂದ ಹಿಂದೆ ಸರಿದ ಕೋಲಾರ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ಗೊಂದಲ ಗುರುವಾರ ಮಧ್ಯಾಹ್ನದ ವರೆಗೂ ಮುಂದುವರಿದು ಅಂತಿಮವಾಗಿ ಕೊತ್ತೂರು ಮಂಜುನಾಥ್‌ ನಾಮಪತ್ರ ಸಲ್ಲಿಸಿದರು. ಬಿಜೆಪಿಯ ವಿಧಾನಪರಿಷತ್‌ ಸದಸ್ಯತ್ವಕ್ಕೆ ರಾಜೀ ನಾಮೆ ನೀಡಿ ಜೆಡಿಎಸ್‌ ಸೇರಿದ್ದ ಆಯನೂರು ಮಂಜುನಾಥ್‌ ಶಿವಮೊಗ್ಗದಿಂದ, ಬಿಜೆಪಿ ಟಿಕೆಟ್‌ ವಂಚಿತ ಎನ್‌.ಆರ್‌. ಸಂತೋಷ್‌ ಅರಸೀಕೆರೆ ಯಿಂದ, ಶಿವಮೊಗ್ಗದ ಬಿಜೆಪಿಯ ಅಚ್ಚರಿ ಅಭ್ಯರ್ಥಿ ಚೆನ್ನಬಸಪ್ಪ, ಮೇಲುಕೋಟೆಯಲ್ಲಿ ರೈತ ಸಂಘದ ದರ್ಶನ್‌ ಪುಟ್ಟಣ್ಣಯ್ಯ, ಬಳ್ಳಾರಿಯಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಅನಿಲ್‌ ಲಾಡ್‌ ಗುರುವಾರ ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವರಾದ ಯು.ಟಿ. ಖಾದರ್‌, ರಮಾ ನಾಥ ರೈ, ಯಶ್‌ಪಾಲ್‌ ಸುವರ್ಣ, ಇನಾಯತ್‌ ಅಲಿ, ಗುರುರಾಜ್‌ ಗಂಟಿಹೊಳೆ ಕೊನೆಯ ದಿನ ನಾಮಪತ್ರ ಸಲ್ಲಿಸಿದವರಲ್ಲಿ ಸೇರಿದ್ದಾರೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಹಲವು ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾದರು.

ಶಕ್ತಿಪ್ರದರ್ಶನ
ಮಂಡ್ಯ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ತುಮಕೂರು, ಕೋಲಾರ, ಬೀದರ್‌, ರಾಮನಗರ, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಾಮಪತ್ರ ಸಲ್ಲಿಕೆ ಒಂದು ರೀತಿಯ ಶಕ್ತಿ ಪ್ರದರ್ಶನದಂತಾಗಿ ಸಾವಿರಾರು ಬೆಂಬಲಿಗರೊಂದಿಗೆ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದು ಸಾಮಾನ್ಯವಾಗಿತ್ತು. ಈ ನಡುವೆ, ಬೆಂಗಳೂರಿನ ಮಾಜಿ ಮೇಯರ್‌ ಹಾಗೂ ಗೋವಿಂದರಾಜ ನಗರ ಟಿಕೆಟ್‌ ಆಕಾಂಕ್ಷಿ ಶಾಂತಕುಮಾರಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next