Advertisement

ಕರೆ ನಿರೀಕ್ಷೆಯಲ್ಲಿ ಆಕಾಂಕ್ಷಿಗಳು : ದಿಲ್ಲಿ ವೀಕ್ಷಕರ ನಿರೀಕ್ಷೆ ; ಮುಖ್ಯಮಂತ್ರಿ ನಿಶ್ಚಿಂತ

12:25 AM Jul 24, 2021 | Team Udayavani |

ಬೆಂಗಳೂರು: ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಸುದ್ದಿಯ ನಡುವೆ ಆಕಾಂಕ್ಷಿಗಳು ವರಿಷ್ಠರಿಂದ ಬರಲಿರುವ “ಅದೃಷ್ಟದ ಕರೆ’ಗಾಗಿ ಕಾದುಕುಳಿತಿದ್ದಾರೆ.

Advertisement

“ಮುಂದಿನ ಮುಖ್ಯಮಂತ್ರಿ’ ಆಯ್ಕೆ ಬಗ್ಗೆ ನಿರ್ಧರಿಸಲು ಕೇಂದ್ರದಿಂದ ವೀಕ್ಷಕರು ಆಗಮಿಸಲಿದ್ದಾರೆ ಎನ್ನಲಾಗಿದೆ. ಆದರೆ ಇವೆಲ್ಲದರ ನಡುವೆ ಯಡಿಯೂರಪ್ಪ ನಿರಾಳವಾಗಿದ್ದು, ಆಡಳಿತಾತ್ಮಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಜು. 26ರ ಬಳಿಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಪರೋಕ್ಷ ಸುಳಿವು ನೀಡಿದ್ದ ಯಡಿಯೂರಪ್ಪ, ಶುಕ್ರವಾರ ಸರಕಾರಿ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿ, “ಮುಂದೆ ಬೆಂಗಳೂರಿಗೆ ಇನ್ನಷ್ಟು ಅನುದಾನ ನೀಡುತ್ತೇನೆ’ ಎಂದಿದ್ದು, ತಮ್ಮ ನಿರ್ಗಮನ ನಿರೀಕ್ಷೆಯಲ್ಲಿ ಇರುವವರಿಗೆ ಆಘಾತ ನೀಡಿದ್ದಾರೆ.

ನಾಯಕರಿಂದ ಶಾ ಭೇಟಿ
ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅರವಿಂದ ಬೆಲ್ಲದ ಮತ್ತೆ ದಿಲ್ಲಿಗೆ ತೆರಳಿದ್ದು, ಅಮಿತ್‌ ಶಾ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ. ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದವರಿಗೆ ಸಿಎಂ ಸ್ಥಾನ ನೀಡಬೇಕೆಂಬ ಬೇಡಿಕೆ ಇದ್ದು, ಈ ಭೇಟಿ ಬಿಜೆಪಿ ರಾಜ್ಯ ನಾಯಕರ ಹುಬ್ಬೇರುವಂತೆ ಮಾಡಿದೆ.

ಈ ನಡುವೆ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಸಚಿವ ಮುರುಗೇಶ್‌ ನಿರಾಣಿ ಅವರ ನಿವಾಸಕ್ಕೆ ವಿವಿಧ ಮಠಾಧೀಶರು ಆಗಮಿಸಿ ಆಶೀರ್ವದಿಸಿದ್ದಾರೆ. ಈ ಮಧ್ಯೆ ಅಮಿತ್‌ ಶಾ ಅವರು ಗುರುವಾರ ತಡರಾತ್ರಿ ಕರೆ ಮಾಡಿ, ಯಾವುದೇ ಸಮಯದಲ್ಲಿ ದಿಲ್ಲಿಗೆ ಬರಲು ಸಿದ್ಧರಾಗಿರಿ ಎಂಬ ಸಂದೇಶ ನೀಡಿದ್ದಾರೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next