ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಸಿಕ್ಕಿದ ನಾಲ್ಕು ದಿನಗಳ ನಂತರ ಮುಖ್ಯಮಂತ್ರಿ -ಉಪಮುಖ್ಯಮಂತ್ರಿ ಹುದ್ದೆಗಳ ಬಿಕ್ಕಟ್ಟು ಬಗೆಹರಿದಿದೆ. ದೆಹಲಿಯಲ್ಲಿ ಹಲವು ಸುತ್ತುಗಳ ಮಾತುಕತೆಯ ನಂತರ ಕಡೆಗೂ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯಾಗಿದೆ. ಎಲ್ಲವೂ ಸುಖಾಂತ್ಯಗೊಂಡಿದೆ ಎಂದೇ ಕಾಂಗ್ರೆಸ್ ನಾಯಕರು ಬಣ್ಣಿಸುತ್ತಿದ್ದಾರೆ. ಹೀಗಾಗಿ, ಸಹಜವಾಗಿಯೇ ರಾಜ್ಯದ ಜನತೆಯ ನಿರೀಕ್ಷೆಗಳಿಗೆ ಸ್ಪಂದಿಸುವ ಹೊಣೆಗಾರಿಕೆ ಮತ್ತು ಜವಾಬ್ದಾರಿ ಪಕ್ಷದ ಮೇಲಿದೆ.
ರಾಜ್ಯದ ಮತದಾರರು ಕಾಂಗ್ರೆಸ್ ಬಗ್ಗೆ ಹೆಚ್ಚು ನಂಬಿಕೆ ತೋರಿಸಿ 135 ಸ್ಥಾನ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆ, ಪ್ರಣಾಳಿಕೆಯ ಘೋಷಣೆಗಳು, ಗ್ಯಾರಂಟಿ ಕಾರ್ಡ್ ಅನುಷ್ಟಾನ ಇವೆಲ್ಲವೂ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದೆ. ಇದೀಗ ಅವುಗಳ ಆನುಷ್ಟಾನ ಸವಾಲು ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿ ಸಹಿತ ಇಡೀ ಮಂತ್ರಿ ಮಂಡಲಕ್ಕಿದೆ. ಹೀಗಾಗಿ, ಪ್ರತಿ ಹಂತದಲ್ಲೂ ಎಚ್ಚರಿಕೆ ಹಾಗೂ ಜಾಗರೂಕತೆ ವಹಿಸುವ ಮೂಲಕ ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಒತ್ತು ನೀಡಿ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುವಂತೆ ಮಾಡಬೇಕಾಗಿದೆ. ಗ್ಯಾರಂಟಿ ಯೋಜನೆಗಳು ಯಾರ್ಯಾರಿಗೆ ಯಾವ್ಯಾವ ವರ್ಗಕ್ಕೆ ಸಿಗಲಿದೆ ಎಂಬ ಸ್ಪಷ್ಟತೆ ಸಹ ಸಿಗಬೇಕಾಗಿದೆ.
ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಾದ ಹಣಕಾಸು ಹೊಂದಿಸುವುದರ ಜತೆಗೆ ಮೂಲಸೌಕರ್ಯ ಅಭಿವೃದ್ಧಿ, ಶಾಶ್ವತ ಯೋಜನೆಗಳ ಜಾರಿ, ಎಲ್ಲ ಸಮುದಾಯದ ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಬೇಕಾಗಿದೆ. ಇದಕ್ಕೆ ಬೇಕಾದ ಸಂಪನ್ಮೂಲ ಹೊಂದಿಸಿಕೊಳ್ಳುವುದು ಸುಲಭದ ಮಾತಲ್ಲ. ಜನಸಾಮಾನ್ಯರ ಮೇಲೆ ತೆರಿಗೆಯ ಹೊರೆ ಹಾಕದೆ ಹೊಸ ಕಾರ್ಯಕ್ರಮಗಳನ್ನೂ ಜಾರಿಗೊಳಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ನೂತನ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿ ಜತೆಗೂಡಿ ಕೆಲಸ ಮಾಡಬೇಕು. ಭರ್ಜರಿ ಬಹುಮತ ಬಂದಿರುವುದರಿಂದ ಸಚಿವ ಸಂಪುಟ ರಚನೆಯೂ ದೊಡ್ಡ ಸವಾಲು. ಅದನ್ನೂ ಸಮರ್ಥವಾಗಿ ನಿಭಾಯಿಸಿ ಆಡಳಿತ ಯಂತ್ರ ಚುರುಕುಕೊಳಿಸಿ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಈ ಸರ್ಕಾರದಿಂದ ರಾಜ್ಯದ ಜನತೆಗೆ ಭ್ರಷ್ಟಾಚಾರ ರಹಿತ ದಕ್ಷ ಹಾಗೂ ಸ್ವತ್ಛ ಆಡಳಿತದ ನಿರೀಕ್ಷೆಯಲ್ಲಿದ್ದಾರೆ.
Related Articles
ಉದ್ಯೋಗ ಸೃಷ್ಟಿ, ಸರ್ಕಾರಿ ಹುದ್ದೆಗಳ ನೇಮಕಾತಿ, ಕೃಷಿ, ಗ್ರಾಮೀಣಾಭಿವೃದ್ಧಿಗೆ ಒತ್ತು, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಆದ್ಯತೆ, ಶಿಕ್ಷಣ, ಆರೋಗ್ಯ, ವಸತಿಗೆ ಪ್ರಾಮುಖ್ಯತೆ ನೀಡುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ತೊಡಬೇಕಾಗಿದೆ.
2013 ರಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಆಡಳಿತ ನಡೆಸಿ ನಂತರ ಎದುರಾದ 2018 ರ ಚುನಾವಣೆಯಲ್ಲಿ ಬಹುಮತ ಬಾರದೆ ಸಮ್ಮಿಶ್ರ ಸರ್ಕಾರ ರಚನೆಗೊಂಡು ಅದು ಒಂದೂವರೆ ವರ್ಷದಲ್ಲಿ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಬ್ಬರು ಮುಖ್ಯಮಂತ್ರಿಗಳ ನೇಮಕಗೊಂಡರು. ಈ ನಡುವೆ ಕೆಲವು ವಿವಾದ, ಆರೋಪ, ಅಡೆ-ತಡೆಗಳಿಂದ ರಾಜ್ಯದ ಅಭಿವೃದ್ಧಿ ಮೇಲೂ ಪರಿಣಾಮ ಬಿದ್ದಿದೆ. ಹೀಗಾಗಿ, ಅದೆಲ್ಲವನ್ನೂ ಸರಿಪಡಿಸಿ ಮತ್ತೆ ಆಡಳಿತ ಯಂತ್ರ ಸರಿದಾರಿಗೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಮುನ್ನಡೆಯಬೇಕಾಗಿದೆ. ರಾಜ್ಯದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಬೇಕಾಗಿದೆ. ಎಲ್ಲಿಯೂ ನಾಯಕತ್ವದ ಪೈಪೋಟಿ, ಬಣ ರಾಜಕಾರಣ ಆಡಳಿತ ಯಂತ್ರದ ಮೇಲೆ ಕರಿಛಾಯೆ ಬೀರದಂತೆ ನೋಡಿಕೊಳ್ಳಬೇಕಿರುವುದು ಕಾಂಗ್ರೆಸ್ ಮೇಲಿನ ದೊಡ್ಡ ಜವಾಬ್ದಾರಿ.