ಕರ್ನಾಟಕದಲ್ಲಿ ಕುಟುಂಬ ರಾಜಕಾರಣದ ಕಾರುಬಾರು ಜೋರಾಗಿಯೇ ಇದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ, ಮಾಜಿ ಸಿಎಂಗಳಾದ ಜೆ.ಎಚ್. ಪಟೇಲ್, ಧರಂಸಿಂಗ್, ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಕುಟುಂಬ- ಹೀಗೆ ಬಹುತೇಕ ಮುಖ್ಯಮಂತ್ರಿ ಅಥವಾ ಸಚಿವರಾದವರ ಮಕ್ಕಳು ಶಾಸಕರಾಗಿದ್ದಾರೆ ಅಥವಾ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿರುವ ನಿದರ್ಶನವಿದೆ. ಕರ್ನಾಟಕದ ಕರಾವಳಿ ಇದಕ್ಕೆ ಹೊರತಾದ ಭಿನ್ನ ರಾಜಕಾರಣವನ್ನು ಹೊಂದಿದೆ. ಇಲ್ಲಿ ಕುಟುಂಬ ರಾಜಕಾರಣ ಇಲ್ಲವೇ ಇಲ್ಲ ಎಂದೇನಿಲ್ಲ. ಹಾಗೆಂದು ಕುಟುಂಬ ರಾಜಕಾರಣವನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಂಡೂ ಇಲ್ಲ. ಸೈದ್ಧಾಂತಿಕ ರಾಜಕಾರಣದ ಬದ್ಧತೆ ಎದುರು ಕುಟುಂಬ ರಾಜಕಾರಣ ಗಟ್ಟಿಯಾಗಿ ನಿಂತಿಲ್ಲ.
ಉಡುಪಿ ಕ್ಷೇತ್ರದ ಶಾಸಕರಾಗಿದ್ದ ಮಲ್ಪೆ ಮಧ್ವರಾಜ್ ಅವರ ಪತ್ನಿ ಮನೋರಮಾ ಮಧ್ವರಾಜ್, ಪುತ್ರ ಪ್ರಮೋದ್ ಮಧ್ವರಾಜ್ ಶಾಸಕರಾಗಿ, ಸಚಿವರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳ್ಳಾಲ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ಮುತ್ಸದ್ಧಿ ಯು.ಟಿ. ಫರೀದ್ ಅನಂತರದಲ್ಲಿ ಅವರ ಮಗ ಯು.ಟಿ. ಖಾದರ್ ಶಾಸಕರಾಗಿ ಸಚಿವರಾಗಿದ್ದರು. ಈಗಲೂ ಶಾಸಕರಾಗಿ ಸೇವೆ ಸಲ್ಲಿಸುತ್ತಾರೆ. ಈ ಎರಡು ಕುಟುಂಬ ಹೊರತುಪಡಿಸಿ ಉಭಯ ಜಿಲ್ಲೆಯಲ್ಲಿ ಕುಟುಂಬದಿಂದ ತಂದೆ/ತಾಯಿ, ಮಕ್ಕಳು ಶಾಸಕರಾದ ನಿದರ್ಶನವಿಲ್ಲ.
ಇನ್ನು ದಾಯಾದಿಗಳು ಅಥವಾ ಸಂಬಂಧಿಕರು ಬೇರೆ ಬೇರೆ ಸಂದರ್ಭದಲ್ಲಿ ಚುನಾವಣೆ ಸ್ಪರ್ಧಿಸಿ, ಗೆದ್ದವರು- ಸೋತವರು ಇದ್ದಾರೆ. ವಸಂತ ಬಂಗೇರ, ಕೆ. ಪ್ರಭಾಕರ ಬಂಗೇರ ಬೇರೆ ಬೇರೆ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿದ್ದರು. ಬ್ರಹ್ಮಾವರ ಕ್ಷೇತ್ರವಿದ್ದ ಸಂದರ್ಭದಲ್ಲಿ ಜಗಜೀವನ್ ಶೆಟ್ಟಿ (ಜಗ ಶೆಟ್ರಾ ಎಂದೇ ಪ್ರಸಿದ್ಧಿ)ಶಾಸಕರಾಗಿದ್ದರು. ಅನಂತರ ಅವರ ಸಹೋದರ ಬಿ.ಬಿ. ಶೆಟ್ಟಿ ಶಾಸಕರಾದರು. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಸಂಬಂಧಿ ಸಂಜೀವ ಮಠಂದೂರು ಪುತ್ತೂರು ಶಾಸಕರಾಗಿದ್ದಾರೆ.
ಕರಾವಳಿಯಲ್ಲಿ ಕುಟುಂಬ ರಾಜಕಾರಣಕ್ಕೂ ಮಿಗಿಲಾಗಿ ಸೈದ್ಧಾಂತಿಕ ರಾಜಕಾರಣ ಬೇರೂರಿದೆ. ಉಡುಪಿಯಿಂದ ಪ್ರತಿನಿಧಿಸಿ ಸಂಸದರಾದ ಟಿ.ಎ. ಪೈ, ಆಸ್ಕರ್ ಫೆರ್ನಾಂಡಿಸ್ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಡಾ| ಎಂ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿದ್ದರು. ಜನಾರ್ದನ ಪೂಜಾರಿ, ವಿ. ಧನಂಜಯ ಕುಮಾರ್ ಕೂಡ ಕೇಂದ್ರದ ಸಚಿವರಾಗಿದ್ದರು. ಮಾಜಿ ಸಚಿವ ದಿ| ಡಾ| ವಿ.ಎಸ್. ಆಚಾರ್ಯ, ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಸಹಿತವಾಗಿ ಸಚಿವ ಎಸ್. ಅಂಗಾರ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮೊದಲಾದವರು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಆದರೆ ಇವರ್ಯಾರೂ ತಮ್ಮ ಕುಟುಂಬದವರನ್ನು ರಾಜಕೀಯಕ್ಕೆ ತರಲಿಲ್ಲ. ಸದ್ಯ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ರಮಾನಾಥ ರೈ ಮೊದಲಾದವರು ಕೂಡ ತಮ್ಮ ಪಕ್ಷದ ನಿಲುವಿಗೆ ಬದ್ಧರಾಗಿ ಸೇವೆ ಸಲ್ಲಿಸುತ್ತಿದಾರೆ. ಹಲವರು ಜನಪ್ರತಿನಿಧಿಯಾಗಿ ತಮ್ಮ ಅಧಿಕಾರಾವಧಿ ಮುಗಿಯುತ್ತಿದ್ದಂತೆ ಪಕ್ಷ ಸೂಚಿಸಿದಂತೆ ಮುನ್ನಡೆಯುತ್ತಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸದ್ದು ದಿನೇ ದಿನೆ ಜೋರಾಗುತ್ತಿದೆ. ಹಲವು ಕ್ಷೇತ್ರಗಳಲ್ಲಿ ಹಿರಿಯ ಶಾಸಕರು ತಮ್ಮ ಕರುಳಬಳ್ಳಿ ಅಥವಾ ಕುಟುಂಬದ ಸದಸ್ಯರಿಗೆ ಟಿಕೆಟ್ ಗಿಟ್ಟಿಸಿಕೊಡಲು ಹವಣಿಸುತ್ತಿದ್ದಾರೆ. ಆದರೆ ಕರಾವಳಿಯ ಎರಡೂ ಜಿಲ್ಲೆಗಳ ಯಾವ ಕ್ಷೇತ್ರದಲ್ಲೂ ಈ ರೀತಿಯ ಸನ್ನಿವೇಶವಿಲ್ಲ. ಇಲ್ಲಿ ಕುಟುಂಬ ರಾಜಕಾರಣ ಎನ್ನುವುದು ಬಲು ದೂರದ ಮಾತು ಮತ್ತು ಇಲ್ಲಿನ ಬಹುತೇಕ ರಾಜಕಾರಣಿಗಳು ಕುಟುಂಬವನ್ನು ದೂರವಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಎರಡೂ ಪಕ್ಷಗಳಲ್ಲಿಯೂ ಸೈದ್ಧಾಂತಿಕ ನೆಲೆಗಟ್ಟಿನಲ್ಲಿಯೇ ನಾಯಕರು ಸಜ್ಜಾಗುತ್ತಿದ್ದಾರೆ ಮತ್ತು ಅದರಂತೆಯೇ ಮುನ್ನಡೆಯುತ್ತಿರುವುದು ವಿಶೇಷ.
– ರಾಜು ಖಾರ್ವಿ ಕೊಡೇರಿ