Advertisement
ಕರ್ನಾಟಕವು ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೆಮ್ಮೆಯ ಜತೆಗೆ “ಸೈಬರ್ ಅಪರಾಧ’ಗಳಲ್ಲಿಯೂ ಮೊದಲ ಸ್ಥಾನದಲ್ಲಿದೆ! ಸೈಬರ್ ಬಳಕೆ ಹೆಚ್ಚಿದಂತೆ ಸೈಬರ್ ಅಪರಾಧಗಳೂ ಏರಿಕೆಯಾಗುತ್ತಿವೆ. ಯುಪಿಐ ಬಳಕೆ ವ್ಯಾಪಕವಾಗುತ್ತಿದ್ದಂತೆ ಆನ್‌ಲೈನ್ ವಂಚನೆಗಳೂ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ದೇಶದಲ್ಲೇ ಮೊದಲ ಬಾರಿಗೆ “ಕರ್ನಾಟಕ ಸೈಬರ್ ಭದ್ರತಾ ನೀತಿ- 2024′ ಜಾರಿಗೆ ತಂದು ಮಹತ್ವದ ಹೆಜ್ಜೆಯನ್ನಿರಿಸಿದೆ. ಈ ನೀತಿಯು ಸೈಬರ್ ಅಪ ರಾಧಗಳ ನಿಯಂತ್ರಣ, ಸೈಬರ್ ಸುರಕ್ಷತೆಯಲ್ಲಿನ ಉದ್ಯೋಗವಕಾಶ ಸೃಷ್ಟಿ, ಸರಕಾರದ ಡಿಜಿಟಲ್ ಆಸ್ತಿ, ಮೂಲ ಸೌಕರ್ಯಗಳ ರಕ್ಷಣೆ ಗುರಿ ಹೊಂದಿದೆ. ಜಾಗೃತಿ, ಶಿಕ್ಷಣ, ಕೌಶಲ ಅಭಿವೃದ್ಧಿ, ಈ ಕ್ಷೇತ್ರದಲ್ಲಿನ ಸ್ಟಾರ್ಟ್‌ಅಪ್‌ಗ್ಳಿಗೆ ಉತ್ತೇಜನ, ಸಾಮರ್ಥ್ಯ ವೃದ್ಧಿಗೆ ಸಹಭಾಗಿತ್ವದ ಅಂಶಗಳನ್ನು ಈ ನೀತಿಯು ಹೊಂದಿದೆ. ರಾಜ್ಯದಲ್ಲಿ ಸರಕಾರ ಮತ್ತು ಜನರಿಗೆ “ಸುರಕ್ಷಿತ ಸೈಬರ್ ಪರಿಸರ ವ್ಯವಸ್ಥೆ’ ರೂಪಿಸಿವುದು ನೀತಿಯ ಗುರಿಯಾಗಿದೆ.
ಹೊಸ ನೀತಿಯು 2 ಭಾಗದಲ್ಲಿದ್ದು, ಮೊದಲ ಭಾಗ ಸಾರ್ವಜನಿಕ, ಶೈಕ್ಷಣಿಕ, ಉದ್ಯಮ, ನವೋದ್ಯಮ, ರಾಜ್ಯದ ಐಟಿ ಸ್ವತ್ತುಗಳು ಮತ್ತು ಸರಕಾರ ಸೇರಿ ಸಮಾಜದ ಎಲ್ಲ ವಿಭಾಗಗಳಲ್ಲಿ ಸೈಬರ್ ಭದ್ರತಾ ಪರಿಸರ ವ್ಯವಸ್ಥೆಯ ಮೇಲೆ ಕೇಂದ್ರೀಕರಿಸಲಿದೆ. 2ನೇ ಭಾಗದಲ್ಲಿ ಸರಕಾರದ ವಿವಿಧ ಇಲಾಖೆಗಳಲ್ಲಿ ಐಟಿ ಅನುಷ್ಠಾನವನ್ನು ಹೊಂದಿದೆ. ನೀತಿ ಅನುಷ್ಠಾನಕ್ಕೆ 103 ಕೋಟಿ ರೂ. ವೆಚ್ಚ!
ಸೈಬರ್ ಭದ್ರತಾ ನೀತಿಯು ಮುಂದಿನ 5 ವರ್ಷಗಳಲ್ಲಿ ಜಾರಿಗೆ ಬರಲಿದ್ದು, ಇದಕ್ಕಾಗಿ ಸುಮಾರು 103.87 ಕೋಟಿ ರೂ. ಅನುದಾನದ ಬೇಕಿದೆ. ಈ ಮೊತ್ತವನ್ನು ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭರಿಸಲಿದೆ. ನೀತಿಯ ಅನುಷ್ಠಾನದಲ್ಲಿ 23.74 ಕೋಟಿ ರೂ. ಪ್ರೋತ್ಸಾಹ ಮತ್ತು ರಿಯಾಯಿತಿ ನೀಡಲಾಗುತ್ತದೆ.
Related Articles
ಬೆಂಗಳೂರು ಐಟಿ ರಾಜಧಾನಿಯಾಗಿದ್ದರೂ ಸೈಬರ್ ಭದ್ರತಾ ತಜ್ಞರ ತೀವ್ರ ಕೊರತೆಯಿದೆ. ಹಾಗಾಗಿ, ರಾಜ್ಯ ಸರಕಾರವೇ 40,000 ಜನರಿಗೆ ಸೈಬರ್ ಸುರಕ್ಷ ಕೌಶಲ ಮತ್ತು ಜಾಗೃತಿಗೆ ತರಬೇತಿ ನೀಡಲಿದೆ. ಈ ಸಂಬಂಧ ಸಿಸ್ಕೊ ಕಂಪೆನಿಯೊಂದಿಗೆ ತಿಳಿವಳಿಕಾ ಪತ್ರಕ್ಕೆ ಸಹಿ ಹಾಕಲಾಗಿದೆ. ಈ ಪೈಕಿ 20,000 ಮಹಿಳೆಯರಿರುವುದು ವಿಶೇಷವಾಗಿದೆ.
Advertisement
ಸೈಬರ್ ಸುರಕ್ಷಿತ ಪರಿಸರ ರೂಪಿಸುವ ಭದ್ರತಾ ನೀತಿಯಲ್ಲಿ ಏನೇನಿದೆ?
1ವಿದ್ಯಾರ್ಥಿಗಳಿಗೆ ಸೈಬರ್ ಸುರಕ್ಷೆ ಬಗ್ಗೆ ತರಬೇತಿಸೈಬರ್ ಭದ್ರತಾ ನೀತಿಯಡಿ ಕರ್ನಾಟಕ ಪದವಿಪೂರ್ವ, ಸ್ನಾತಕೋತ್ತರ ಇಂಟರ್ನಿಗಳಿಗೆ ಗರಿಷ್ಠ 3 ತಿಂಗಳವರೆಗೆ ತಿಂಗಳಿಗೆ 10ರಿಂದ 15 ಸಾವಿರ ಸ್ಟೈಫಂಡ್ ಒದಗಿಸಿ, ತರಬೇತಿ ನೀಡಬೇಕು. 5 ವರ್ಷದಲ್ಲಿ 600 ಪಿಯು ವಿದ್ಯಾರ್ಥಿಗಳಿಗೆ, 120 ಸ್ನಾತಕೋತ್ತರ ಇಂಟರ್ನಿಗಳಿಗೆ ಈ ಸೌಲಭ್ಯ ಸಿಗಲಿದೆ. 2ಸೈಬರ್ ಭದ್ರತೆ ಕುರಿತ ಸಂಶೋಧನೆಗೆ ನೆರವು
ರಾಜ್ಯದ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಸೈಬರ್ ಭದ್ರತಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮ ನಡೆಸಿದರೆ ಆ ಯೋಜನೆಯ ವೆಚ್ಚದ ಗರಿಷ್ಠ ಶೇ.50ರಷ್ಟು ಹೊಂದಾಣಿಕೆ ಅನುದಾನ ಅಥವಾ 50 ಲಕ್ಷ ರೂ. ಸರಕಾರ ಒದಗಿಸಲಿದೆ. ನವೋದ್ಯಮಗಳು ಸೈಬರ್ ಭದ್ರತೆಯ ಹೊಸ ವ್ಯವಸ್ಥೆ, ಕ್ರಮ ರೂಪಿಸಿದರೆ, ಅದನ್ನು ರಾಜ್ಯ ಸರಕಾರ ಮೊದಲಿಗೆ ಅಳವಡಿಸಿಕೊಳ್ಳಬೇಕು. 3ನೌಕರರು ಸರಕಾರಿ ಅಧಿಕೃತ ಇ-ಮೇಲ್ ಬಳಸಬೇಕು
ಸರಕಾರಿ ಅಧಿಕಾರಿಗಳಿಗೆ ಸೈಬರ್ ಭದ್ರತೆಯ ಅತ್ಯುತ್ತಮ ಕ್ರಮಗಳು, ಸೈಬರ್ ನೈರ್ಮಲ್ಯ ಮತ್ತು ಸೈಬರ್ ಅಪಾಯ ನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗುತ್ತದೆ. ಸರಕಾರಿ ಅಧಿಕಾರಿಗಳು ತಮ್ಮ ಅಧಿಕೃತ (ಸರಕಾರದ) ಇಮೇಲ್ ಐಡಿ ಮೂಲಕವೇ ವ್ಯವಹರಿಸಬೇಕು. ಪ್ರಮಾಣೀಕೃತ ಕಾರ್ಯಾಚರಣ ವಿಧಾನವನ್ನು(ಎಸ್‌ಒಪಿ) ರೂಪಿಸ ಬೇಕು. ಸಾಮಾಜಿಕ ಮಾಧ್ಯಮಗಳನ್ನು ನಿಯಮಗಳಿಗೆ ಒಳಪಟ್ಟು ಸರಕಾರದ ಸಿಬಂದಿ ಬಳಸಬೇಕು. 4ಪದವಿಯಲ್ಲಿ ಹೊಸ ಕೋರ್ಸ್ ಅಳವಡಿಕೆ
ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ವಿಶೇಷ ಕೋರ್ಸ್ ಪರಿಚಯಿಸಬೇಕು. ಉಪನ್ಯಾಸಕರಿಗೆ ಕೌಶಲವನ್ನು ಉನ್ನತೀಕರಿಸಲು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಬೇಕು. ಸೈಬರ್ ಭದ್ರತೆ ಬಗ್ಗೆಗಿನ ಮುಕ್ತ ಆನ್‌ಲೈನ್ ಕೋರ್ಸ್ ಆರಂಭಿಸಬೇಕು. 5ಪ್ರಾಯೋಗಿಕ ಕೌಶಲ ಹೆಚ್ಚಿಸಲು ಕ್ರಮ ಅಗತ್ಯ
ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಅತ್ಯಾಧುನಿಕ ವರ್ಚು ವಲ್ ಸೈಬರ್ ರೇಂಜ್ ಸ್ಥಾಪಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೌಶಲ ಕಲಿಸಬೇಕು, ವಿವಿಧ ಭಾಗಗಳಲ್ಲಿ ಪ್ರಾದೇಶಿಕ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿ ಕೌಶಲ ವೃದ್ಧಿ ಚಟುವಟಿಕೆಗಳನ್ನು ನಡೆಸಬೇಕು. 6ಜನಸಾಮಾನ್ಯರಲ್ಲಿ ಜಾಗೃತಿ
ಸರಕಾರದ ಎಲ್ಲ ಇಲಾಖೆಗಳು ಸೇರಿ ಪಂಚಾಯತ್ ಮಟ್ಟದಲ್ಲಿನ ಸಿಬಂದಿಗೆ ಸೈಬರ್ ಭದ್ರತೆ ಮತ್ತು ದತ್ತಾಂಶ ಖಾಸಗಿತನದ ರಕ್ಷಣೆಯ ಬಗ್ಗೆ ನಿಯಮಿತ ಅರಿವು ಮೂಡಿಸಬೇಕು. ಜನಸಾಮಾನ್ಯರಲ್ಲಿ ಸೈಬರ್ ಭದ್ರತೆ ಬಗ್ಗೆ ಜಾಗೃತಿ ಮೂಡಿಸಬೇಕು. ವಿಶೇಷವಾಗಿ ಮಹಿಳೆಯರು, ಯುವಕರು, ಮಕ್ಕಳು, ಹಿರಿಯ ನಾಗರಿಕರು, ಮೊದಲ ಬಾರಿಗೆ ಆನ್‌ಲೈನ್ ತಂತ್ರಜ್ಞಾನ ಬಳಸುವವರಿಗೆ ಜಾಗೃತಿ ಶಿಬಿರಗಳನ್ನು ನಡೆಸಬೇಕು. 7ಸೈಬರ್ ದೂರು ನೀಡುವ ಬಗ್ಗೆ ಅರಿವು ಮೂಡಿಸುವುದು
ಸೈಬರ್ ಅಪರಾಧ ನಡೆದಾಗ ಹೇಗೆ ದೂರು ನೀಡಬೇಕು ಎಂಬ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಹಾಗಾಗಿ 112 ಮತ್ತು 1930 ಸಂಖ್ಯೆಗಳಿಗೆ ಕರೆಮಾಡಿ ದೂರು ನೀಡುವುದನ್ನು ಜನಪ್ರಿಯಗೊಳಿಸಬೇಕು. ಪ್ರಸ್ತುತ ಜನರಲ್ಲಿ ಇರುವ ಸೈಬರ್ ಸುರಕ್ಷೆಯ ಅರಿವಿನ ಬಗ್ಗೆ ಸಮೀಕ್ಷೆ ನಡೆಸಬೇಕು. 8ದಿನದ 24 ಗಂಟೆ ಕೆಲಸ ಮಾಡುವ ಭದ್ರತಾ ಕೇಂದ್ರ
ಸರಕಾರದ ಪ್ರಮುಖವಾದ ಎಲ್ಲ ಐಟಿ ಮೂಲ ಸೌಕರ್ಯಗಳ ರಕ್ಷಣೆ, ಬಿಕ್ಕಟ್ಟು ಪರಿಹಾರ, ಐಟಿ ಸಮಸ್ಯೆ ನಿರ್ವಹಣೆಗೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಭದ್ರತಾ ಕಾರ್ಯಾಚರಣ ಕೇಂದ್ರ (ಎಸ್‌ಒಸಿ) ಸ್ಥಾಪಿಸಬೇಕು. ಯಾವುದೇ ಸೈಬರ್ ಬಿಕ್ಟಟ್ಟನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಸೈಬರ್ ಬಿಕ್ಟಟ್ಟ ನಿರ್ವಹಣ ಯೋಜನೆ ಸಿದ್ಧಪಡಿಸಿ ಜಾರಿಗೊಳಿಸಬೇಕು. ಜಾಲ ಭದ್ರತೆ, ದತ್ತಾಂಶ ಭದ್ರತೆ, ಆ್ಯಪ್ಲಿಕೇಶನ್ ಭದ್ರತೆ, ಬ್ಯಾಕಪ್‌ಗೆ ಒತ್ತು. ನಿಯಮಿತವಾಗಿ ಭದ್ರತಾ ಅಪಾಯದ ಮೌಲ್ಯಮಾಪನ ನಡೆಸಬೇಕು. ಬೆಂಗಳೂರು ಸೈಬರ್ ಪಾತಕದ ರಾಜಧಾನಿ!
2006-2020ರ ಅವಧಿಯಲ್ಲಿ ವಿಶ್ವದಲೇ 3ನೇ ಅತೀ ಹೆಚ್ಚು ಗುರುತರ ಸೈಬರ್ ದಾಳಿಗೆ ತುತ್ತಾಗಿರುವ ದೇಶ ಭಾರತ. ಅದರಂತೆ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕಳೆದ ವರ್ಷ 21,868 ಸೈಬರ್ ಪ್ರಕರಣ ವರದಿಯಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 17,623 ಪ್ರಕರಣಗಳಿವೆ! ಆನ್‌ಲೈನ್ ವಂಚನೆಯಿಂದ 465 ಕೋಟಿ ರೂ. ಕಳೆದುಕೊಂಡಿದ್ದಾರೆ. ಆದರೆ ವರದಿಯಾಗದ ಪ್ರಕರಣಗಳು ಮತ್ತು ಕಳಕೊಂಡ ಹಣದ ಪ್ರಮಾಣ ಇದಕ್ಕಿಂತ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿದೆ. ಅನೇಕರು ಸೈಬರ್ ವಂಚನೆಗೆ ಒಳಗಾದರೂ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೆರುವುದಿಲ್ಲ. ಯಾವ ಕೃತ್ಯಗಳು ಸೈಬರ್ ಅಪರಾಧ?
ನಕಲಿ ಖಾತೆಗಳ ವಂಚನೆ, ಮಾಹಿತಿ ಕಳವು, ಆನ್‌ಲೈನ್ ನಿಂದನೆ, ಡಿಜಿಟಲ್ ಅರೆಸ್ಟ್, ಆನ್‌ಲೈನ್ ಹಿಂಬಾಲಿಸುವಿಕೆ, Ransomware , ಮಕ್ಕಳ ಆಶ್ಲಿಲ ಚಿತ್ರ, ದೃಶ್ಯಗಳ ಸಂಗ್ರಹ, ಹಂಚಿಕೆ, ಹ್ಯಾಕಿಂಗ್. ಹಣದ ವಂಚನೆ, ವೈವಾಹಿಕ ಮೋಸ, ನಕಲಿ ಆಪ್‌ಗ್ಳ ಬಳಸಿ ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಇತ್ಯಾದಿ. ಸೈಬರ್ ಸುರಕ್ಷೆಗೆ ಜಾಗತಿಕ ಪ್ರಯತ್ನ
2007ರಲ್ಲೇ ಸೈಬರ್ ಭದ್ರತಾ ಕಾರ್ಯಸೂಚಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆದಿತ್ತು.
ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ದೂರ ಸಂವಹನ ಯುನಿಯನ್‌ನಿಂದ ಜಾಗತಿಕ ಸೈಬರ್ ಭದ್ರತಾ ಅಜೆಂಡಾ ಬಿಡುಗಡೆ.
ವಿಶ್ವಸಂಸ್ಥೆಯಿಂದ ಭಾರತ ಸೇರಿ ಜಿ-25 ರಾಷ್ಟ್ರಗಳನ್ನು ಒಳಗೊಂಡಿರುವ ಸರಕಾರಿ ಪರಿಣತರ ಗುಂಪು ರಚನೆ. ಈ ಗಂಪು ಈ ವರ್ಷದ ಅಂತ್ಯದಲ್ಲಿ ವರದಿ ಸಲ್ಲಿಸಲಿದೆ.
ಜಾಗತಿಕ ಕಂಪೆನಿಗಳ ಮಟ್ಟದಲ್ಲಿಯೂ ಸೈಬರ್ ಭದ್ರತಾ ತಂತ್ರಜ್ಞಾನದ ಒಪ್ಪಂದಗಳು.
ವಿವಿಧ ದೇಶಗಳು ಮಾತ್ರವಲ್ಲದೆ ಆಫ್ರಿಕಾ ಯುನಿಯನ್, ಯುರೋಪಿಯನ್ ಯುನಿಯನ್, ನ್ಯಾಟೋ ಸೇರಿ ಹಲವು ಒಕ್ಕೂಟಗಳಿಂದಲೂ ಭದ್ರತೆಗೆ ಆದ್ಯತೆ.
ಭಾರತ ಸೇರಿ ಏಷ್ಯಾ ಫೆಸಿಫಿಕ್ ದೇಶಗಳಿಂದ “ಏಷ್ಯಾ ಫೆಸಿಫಿಕ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್’ ರಚನೆಯಾಗಿದ್ದು, ಪರಸ್ಪರ ಪರಿಹಾರಗಳನ್ನು ಹಂಚಿಕೊಳ್ಳಲಾಗುತ್ತದೆ. ರಾಕೇಶ್ ಎನ್.ಎಸ್.