ಹಾಸನ: ದೇಶಾದ್ಯಂತ ಸೋಮವಾರದಿಂದ ಹೊಸ 3 ಕ್ರಿಮಿನಲ್ ಕಾನೂನುಗಳು ಜಾರಿಯಾಗಿದ್ದು, ಹೊಸ ಕ್ರಿಮಿನಲ್ ಕಾನೂನಿನಡಿ ಹಾಸನದಲ್ಲಿ ರಾಜ್ಯದಲ್ಲೇ ಮೊದಲ ಪ್ರಕರಣ ಬೆಳಗ್ಗೆ 9 ಗಂಟೆಗೆ ದಾಖಲಾಗಿದೆ.
ಹಾಸನ-ಹಳೆಬೀಡು ರಸ್ತೆ ಸೀಗೆ ಗ್ರಾಮದ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಕಾರು ಪಲ್ಟಿಯಾಗಿ ಮಹಿಳೆ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)ಯಡಿ ರಾಜ್ಯದಲ್ಲಿ ದಾಖಲಾದ ಪ್ರಥಮ ಪ್ರಕರಣ ಎಂದು ಪರಿಗಣಿಸಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 173 ಅಡಿ, ಬಿಎನ್‌ಎಸ್ 2023(ಯು/ಎಸ್-281,106) (106 ಮಾನವ ದೇಹವನ್ನು ಬಾಧಿಸುವ ಅಪರಾಧಗಳು, ಜೀವದ ಮೇಲೆ ಪರಿಣಾಮ ಬೀರುವ ಅಪರಾಧಗಳು) (281 ಸಾರ್ವಜನಿಕ ಆರೋಗ್ಯ, ಸುರಕ್ಷೆ, ಮನವರಿಕೆ, ಸಭ್ಯತೆ ಮತ್ತು ನೈತಿಕತೆಯ ಮೇಲೆ ಪರಿಣಾಮ ಬೀರುವ ಅಪರಾಧಗಳು) ದಾಖಲಾಗಿದೆ.
ಅಲ್ಲದೆ ಪೊಲೀಸ್ ಅಧಿಕಾರಿಯು ತನಿಖೆಗೆ ಸ್ಥಳಕ್ಕೆ ಧಾವಿಸದಿದ್ದಲ್ಲಿ ಅಥವಾ ತನಿಖೆ ಮಾಡಲು ನಿರಾಕರಿಸಿದ್ದಲ್ಲಿ ಕಲಂ 157 ಸಿಆರ್‌ಪಿಸಿಯ ಕಲಂ (ಎ) ಅಥವಾ (ಬಿ)176 ಬಿಎನ್‌ಎಸ್‌ಎಸ್ ಯಡಿ ಕಾರಣ ದಾಖಲಿಸಬಹುದು ಎಂದು ಎಫ್ಐಆರ್‌ನಲ್ಲಿ ಹೇಳಲಾಗಿದೆ.
ಹಳೇಬೀಡಿನ ಯೋಗೀಶ್ ಅವರ ಪತ್ನಿ ಇಂದು (67) 5 ದಿನಗಳ ಹಿಂದೆ ಕಾಶಿ, ಅಯೋಧ್ಯೆಗೆ ಯಾತ್ರೆ ಹೋಗಿದ್ದರು. ರವಿವಾರ ರಾತ್ರಿ 1 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕರೆತರಲು ಯೋಗೀಶ್ ಅವರು ಚಾಲಕ ಸಾಗರ್ ಜತೆ ಕಾರಿನಲ್ಲಿ ಹೋಗಿದ್ದರು. ಮುಂಜಾನೆ ಹಾಸನದ ಹಳೇಬೀಡಿನತ್ತ ಹೋಗುತ್ತಿದ್ದ ಕಾರು ಚಾಲಕನ ಅಜಾಗರೂಕತೆಯಿಂದ ಬೆಳಗ್ಗೆ 6.15ಕ್ಕೆ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿತು.
ಯೋಗೀಶ್ ಮತ್ತು ಕಾರು ಚಾಲಕ ಸಾಗರ್‌ಗೆ ಸಣ್ಣಪುಟ್ಟ ಗಾಯಗಳಾದರೆ ತೀವ್ರವಾಗಿ ಗಾಯಗೊಂಡ ಇಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟರು. ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಪ್ರಕರಣ ದಾಖಲಾಗಿದೆ.