ಮೈಸೂರು: ಗುಜರಾತ್ ನ ಅಹಮದಾಬಾದ್ ನಗರದಲ್ಲಿ ಸ್ಯಾಂಟ್ರೋ ರವಿಯನ್ನು ಮೈಸೂರು ನಗರ ಪೊಲೀಸರು ಗುಜರಾತ್ ಪೊಲೀಸರ ಸಹಕಾರದೊಂದಿಗೆ ಶುಕ್ರವಾರ ಬಂಧಿಸಿದ್ದು, ಆತನ ನಿಜ ಸ್ವರೂಪ ಬಯಲಾಗಿದ್ದು, ಇನ್ನಷ್ಟು ಮಾಹಿತಿಗಳು ತನಿಖೆಯಿಂದ ಹೊರ ಬೀಳುವ ಸಾಧ್ಯತೆಗಳಿವೆ.
ಬಂಧನದ ಬಳಿಕ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಸ್ಯಾಂಟ್ರೋ ರವಿಯ ಕುರಿತಾದ ಹಲವು ಮಾಹಿತಿ ಬಿಚ್ಚಿಟ್ಟಿದ್ದಾರೆ. ತಲೆಗೆ ವಿಗ್ ಹಾಕಿ ಕೊಳ್ಳುತ್ತಿದ್ದ ಸ್ಯಾಂಟ್ರೋ ರವಿ ತಲೆಮರೆಸಿಕೊಳ್ಳಲು ಅದನ್ನು ಕಳಚಿದ್ದ, ಶೇವ್ ಮಾಡಿಕೊಂಡಿದ್ದ. ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದಿಂದ ಗುಜರಾತ್ ಪ್ರವೇಶ ಮಾಡಿದ್ದ. ಈ ಕುರಿತು ಸುಳಿವು ಪಡೆದ ಮೈಸೂರು ಪೊಲೀಸರು ಗುಜರಾತ್ ಪೊಲೀಸರ ನೆರವು ಪಡೆದು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಯಾಂಟ್ರೋ ರವಿ ತಲೆಮರೆಸಿಕೊಳ್ಳಲು ದಿನಕ್ಕೊಂದು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ. ಎಲ್ಲಿಯೂ ಯಾವುದೇ ಅನುಮಾನ ಬರದಂತೆ ನೋಡಿಕೊಳ್ಳುತ್ತಿದ್ದ. ತನ್ನ ಕಾರಿನ ಜಾಡು ಹಿಡಿದು ಬಂಧಿಸುವ ಸಾಧ್ಯತೆ ಅರಿತಿದ್ದ ಕಾರಣ ಕಾರನ್ನೂ ಬದಲಿಸುತ್ತಿದ್ದ. ಇಷ್ಟೇ ಅಲ್ಲ ಪ್ರತಿ ದಿನ ಒಂದೊಂದು ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಗುಜರಾತ್ ಕೋರ್ಟ್‌ಗೆ ಸ್ಯಾಂಟ್ರೋ ರವಿಯನ್ನು ಹಾಜರು ಪಡಿಸಲಾಗುತ್ತದೆ. ಕೋರ್ಟ್‌ನಿಂದ ಟ್ರಾನ್ಸಿಸ್ಟ್ ಆರ್ಡರ್ ಪಡೆದ ಬಳಿಕ ಬೆಂಗಳೂರಿಗೆ ಕರೆ ತರಲಾಗುತ್ತದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಒಟ್ಟಾರೆಯಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸರ ನೆರವಿನಿಂದ ಸ್ಯಾಂಟ್ರೋರವಿಯನ್ನು ಬಂಧಿಸಲಾಗಿದೆ. ಆತನನ್ನು ಬಂಧಿಸಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಲಾಗಿದೆ. ಸ್ಯಾಂಟ್ರೋ ರವಿ ಜೊತೆಗೆ ಕರ್ನಾಟಕದ ಸತೀಶ್ ಮತ್ತು ಗುಜರಾತ್ ನ ರಾಮ್ ಜೀ ಎಂಬುವರನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.