Advertisement

Karnataka; ಪಿಜಿಸಿಇಟಿ ಶುಲ್ಕ ನಿಗದಿ ಪಡಿಸಿದ ಸರ್ಕಾರ

08:27 PM Jan 09, 2024 | Team Udayavani |

ಬೆಂಗಳೂರು: 2023-24ನೇ ಸಾಲಿನ ಸ್ನಾತಕೋತ್ತರ ಪದವಿಗಳಾದ ಎಂಬಿಎ, ಎಂಸಿಎ, ಎಂಇ ಮತ್ತು ಎಂಟೆಕ್‌ಗಳ ಶುಲ್ಕವನ್ನು ಉನ್ನತ ಶಿಕ್ಷಣ ಇಲಾಖೆ ನಿಗದಿ ಪಡಿಸಿದೆ.

Advertisement

ಸರ್ಕಾರಿ, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಅನುದಾನಿತ ಕೋರ್ಸ್‌ಗಳ ಶುಲ್ಕದಲ್ಲಿ ಯಥಾ ಸ್ಥಿತಿ ಕಾಪಾಡಿಕೊಳ್ಳಲಾಗಿದೆ. ಆದರೆ ಖಾಸಗಿ ಅನುದಾನ ರಹಿತ ಕಾಲೇಜುಗಳ ಶುಲ್ಕದಲ್ಲಿ ಹತ್ತು ಸಾವಿರ ರೂ.ಗಳ ಏರಿಕೆ ದಾಖಲಾಗಿದೆ.

ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಎ, ಎಂಸಿಎ, ಎಂಇ ಮತ್ತು ಎಂಟೆಕ್‌ಗೆ 20 ಸಾವಿರ ರೂ.ಗಳ ಬೋಧನ ಶುಲ್ಕ ನಿಗದಿ ಪಡಿಸಲಾಗಿದೆ. ಇದರ ಜೊತೆಗೆ 10,810 ರೂ. ವಿಶ್ವವಿದ್ಯಾಲಯ ಶುಲ್ಕ ಭರಿಸಬೇಕಿದೆ.

ಇನ್ನು ಖಾಸಗಿ ಅನುದಾನರಹಿತ ಸಂಸ್ಥೆಗಳ ಅನುದಾನರಹಿತ ಕೋರ್ಸ್‌ಗಳಲ್ಲಿ ಎಂಬಿಎ ಮತ್ತು ಎಂಸಿಎಗೆ ತಲಾ 57,750 ಸಾವಿರ ರೂ ಮತ್ತು ಎಂಇ, ಎಂಟೆಕ್‌ಗೆ 69,300 ಸಾವಿರ ರೂ ನಿಗದಿ ಪಡಿಸಲಾಗಿದೆ.

ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿನ ಶೇ. 50 ಎಂಬಿಎ ಮತ್ತು ಎಂಸಿಎ ಸೀಟುಗಳನ್ನು ಪಿಜಿಸಿಇಟಿಯ ಮುಖಾಂತರ ತುಂಬಬೇಕು. ಉಳಿದ ಶೇ. 50 ಸ್ಥಾನವನ್ನು ಆಡಳಿತ ಮಂಡಳಿಗಳು ನಡೆಸುವ ಪ್ರವೇಶ ಪರೀಕ್ಷೆಯ ಅರ್ಹತೆ ಮತ್ತು ರ್‍ಯಾಂಕಿಂಗ್‌ ಆಧಾರದಲ್ಲಿ ತುಂಬಬೇಕು ಎಂದು ಸರ್ಕಾರ ಸೂಚಿಸಿದೆ.

Advertisement

ಎಂ.ಇ ಮತ್ತು ಎಂಟೆಕ್‌ ಕೋರ್ಸ್‌ಗಳ ಶೇ. 80 ಸೀಟುಗಳನ್ನು ಗೇಟ್‌ ಅಥವಾ ಪಿಜಿಸಿಇಟಿ ಪರೀಕ್ಷೆ ಆಧಾರದಲ್ಲಿ ತುಂಬಬೇಕು. ಉಳಿದ ಶೇ. 20 ಸ್ಥಾನವನ್ನು ಸಕ್ಷಮ ಪ್ರಾಧಿಕಾರ ಅಥವಾ ವಿವಿ ನಿಗದಿ ಪಡಿಸುವ ಪ್ರವೇಶಾತಿ ಅರ್ಹತೆಯ ಆಧಾರದ ಮೇಲೆ ಸಿಇಟಿಯ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಗಳು ಸಿದ್ಧಪಡಿಸಿರುವ ಅರ್ಹತಾ ಪಟ್ಟಿಯ ಭರ್ತಿ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ವಿದ್ಯಾರ್ಥಿಗಳು ಬೋಧನಾ ಶುಲ್ಕದ ಜೊತೆಗೆ ವಿವಿಯ ಶುಲ್ಕವನ್ನು ಸಹ ಭರಿಸಬೇಕು. ಒಂದು ವೇಳೆ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡಿದರೆ ಪ್ರವೇಶ ಮೇಲ್ವಿಚಾರಣಾ ಸಮಿತಿಗೆ ದೂರನ್ನು ಸಲ್ಲಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಗೆ ಆಡಳಿತ ಮಂಡಳಿಯ ಕೋಟಾದಿಂದ ಭರ್ತಿ ಮಾಡಿಕೊಳ್ಳುವ ಸೀಟುಗಳನ್ನು ನ್ಯಾಯಯುತ ಮತ್ತು ಪಾರದರ್ಶಕವಾಗಿ ತುಂಬಿಕೊಳ್ಳಬೇಕು ಎಂದು ಇಲಾಖೆ ಹೇಳಿದೆ.

ಪಿಜಿಸಿಇಟಿ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಖಾಸಗಿ ವಿವಿಗಳಿಗೆ ದಾಖಲಾಗುತ್ತಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಪಿಜಿಸಿಇಟಿ ಪರೀಕ್ಷೆಯನ್ನು ಸುಮಾರು 70 ಸಾವಿರ ವಿದ್ಯಾರ್ಥಿಗಳು ಬರೆದು ಕೌನ್ಸಿಲಿಂಗ್‌ಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೆ ಪರೀಕ್ಷಾ ಪ್ರಾಧಿಕಾರಕ್ಕೆ ಸೀಟ್‌ ಮ್ಯಾಟ್ರಿಕ್ಸ್‌ ಮಾಹಿತಿ ಸಿಕ್ಕಿದ್ದು ಇದೀಗ ಶುಲ್ಕ ಸಂರಚನೆಯ ಸೂಚನೆಯೂ ಕೈಸೇರಿದೆ. ಸದ್ಯದಲ್ಲೇ ಕೆಇಎ ಕೌನ್ಸಿಲಿಂಗ್‌ ದಿನಾಂಕ ಪ್ರಕಟಿಸುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next