Advertisement

ಕಾಲಮಿತಿಯೊಳಗೆ ತಾ.ಪಂ., ಜಿ.ಪಂ. ಗಡಿಗಳನ್ನು ನಿಗದಿಪಡಿಸಲಿ

12:26 AM Nov 24, 2021 | Team Udayavani |

ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಿಗೆ ಗಡಿಗಳನ್ನು ಗುರುತಿಸುವ ಉದ್ದೇಶದಿಂದ ರಚಿಸಲಾಗಿರುವ “ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ’ ಅಧಿಕೃತವಾಗಿ ತನ್ನ ಕಾರ್ಯ ಆರಂಭಿಸಿರುವುದು ಸ್ವಾಗತಾರ್ಹ.

Advertisement

ಎಲ್ಲ ರೀತಿಯ ತಾಂತ್ರಿಕ ಮತ್ತು ಕಾನೂನು ಪ್ರಕ್ರಿಯೆಗಳನ್ನು ಸುಸೂತ್ರವಾಗಿ ನಡೆಸಿ ಆಯೋಗ ತಾನು ಹಾಕಿಕೊಂಡ ಕಾಲಮಿತಿಯೊಳಗೆ ಗಡಿಗಳನ್ನು ನಿಗದಿಪಡಿಸುವ ಕಾರ್ಯ ಪೂರ್ಣಗೊಳಿಸುವ ಬದ್ಧತೆ ಪ್ರದರ್ಶಿಸಬೇಕಾಗಿದೆ.

ಸೀಮಾ ನಿರ್ಣಯ ಆಯೋಗದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಜ್ಯ ಚುನಾವಣ ಆಯೋಗ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಗಳಿಗೆ ಚುನಾವಣೆ ನಡೆಸಬೇಕಾಗುತ್ತದೆ.

2016ರಲ್ಲಿ ಚುನಾವಣೆ ನಡೆದು 2021ರ ಮೇ-ಜೂನ್‌ನಲ್ಲಿ ಹೊಸದಾಗಿ ಚುನಾವಣೆ ನಡೆಯಬೇಕಿತ್ತು. ಇದಕ್ಕಾಗಿ ರಾಜ್ಯ ಚುನಾವಣ ಆಯೋಗ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ವಿಚಾರ ಕೋರ್ಟ್‌ ಮೆಟ್ಟಿಲೇರಿದ್ದರಿಂದ ಚುನಾವಣೆಗಳು ನನೆಗುದಿಗೆ ಬಿದ್ದವು. ಈ ಮಧ್ಯೆ, ಕ್ಷೇತ್ರ ಪುನರ್‌ವಿಂಗಡಣೆಯ ಅಧಿಕಾರವನ್ನು ರಾಜ್ಯ ಚುನಾವಣ ಆಯೋಗದಿಂದ ಹಿಂದಕ್ಕೆ ಪಡೆದು ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿ 6 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರಕಾರ ಗಡುವು ನೀಡಿದೆ.

ಈ ಹಿನ್ನೆಲೆಯಲ್ಲಿ ಸೀಮಾ ನಿರ್ಣಯ ಆಯೋಗ ತನ್ನ ಕೆಲಸ ಆರಂ ಭಿಸಿದೆ. ಈವರೆಗೆ ರಾಜ್ಯ ಚುನಾವಣ ಆಯೋಗ ಮಾಡಿದ್ದ ಕ್ಷೇತ್ರಪುನರ್‌ ವಿಂಗಡಣೆ ಹಾಗೂ ಮೀಸಲಾತಿಯ ಮಾಹಿತಿಯನ್ನು ಪರಿಶೀಲಿಸಿ ಎರಡು ತಿಂಗಳಲ್ಲಿ ಹೊಸದಾಗಿ ಪ್ರಕಟಿಸಿ ಆ ಬಗ್ಗೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಅವುಗಳನ್ನು ಕಾನೂನು ರೀತಿ ಪರಿಗಣಿಸಿ ಅಂತಿಮಗೊಳಿಸಬೇಕಾಗಿದೆ.

Advertisement

ಇದನ್ನೂ ಓದಿ:ಕಾಂಪ್ಲೆಕ್ಸ್‌ ಗೊಬ್ಬರ ಬಳಕೆಗೆ ಹೆಚ್ಚಿನ ಗಮನ ನೀಡಲು ಕ್ರಮ: ಬಿ.ಸಿ.ಪಾಟೀಲ್‌

ಇದನ್ನು ಎಪ್ರಿಲ್‌ ವೇಳೆಗೆ ಪೂರ್ಣಗೊಳಿಸುವ ಉದ್ದೇಶವನ್ನು ಸೀಮಾ ನಿರ್ಣಯ ಆಯೋಗ ಹೊಂದಿದೆ. ಅದರಂತೆ 2022ರ ಮೇ ಬಳಿಕ ಚುನಾವಣೆ ನಡೆಯುವ ಆಶಾಭಾವನೆ ಮೂಡಿದೆ. ರಾಜ್ಯದ 31 ಜಿ.ಪಂ. ಹಾಗೂ 233 ತಾ.ಪಂಗಳಿಗೆ ಚುನಾವಣೆ ನಡೆದು, ರಾಜ್ಯದ ಒಟ್ಟು ಮತದಾರರ ಪೈಕಿ ಶೇ.60ರಿಂದ 70ರಷ್ಟಿರುವ ಗ್ರಾಮೀಣ ಮತದಾರರಿಗೆ ಚುನಾಯಿತ ಜನಪ್ರತಿನಿಧಿಗಳು ಸಿಕ್ಕು, ಗ್ರಾಮೀಣ ಭಾಗದಲ್ಲಿ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಳ್ಳುವಂತಾಗಬೇಕು.

ಅವಧಿ ಮುಗಿದ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ಗಳಿಗೆ ಅವಧಿ ಪೂರ್ಣಗೊಳ್ಳುವ ವೇಳೆಗೆ ಚುನಾವಣೆ ನಡೆಸಿ ಚುನಾಯಿತ ಆಡ ಳಿತ ವ್ಯವಸ್ಥೆ ಜಾರಿಗೆ ಬರುವಂತೆ ಮಾಡಬೇಕು ಎಂದು ಸಂವಿಧಾನದ ಸ್ಪಷ್ಟ ವಾಗಿ ಹೇಳುತ್ತದೆ. ಇದನ್ನೇ ಪಂಚಾಯತ್‌ರಾಜ್‌ ಕಾಯ್ದೆಯಲ್ಲೂ ಹೇಳಲಾಗಿದೆ. ಆದರೆ ಮೀಸಲಾತಿ ವಿಚಾರ ಬಹುತೇಕ ಸಂದರ್ಭಗಳಲ್ಲಿ ಚುನಾವಣೆಯ ವಿಳಂಬಕ್ಕೆ ಕಾರಣವಾಗಿದೆ. ಮೀಸಲಾತಿಗೆ ಮಾರ್ಗಸೂಚಿಗಳನ್ನು ನಿಗದಿಪಡಿಸಿಲ್ಲ ಎಂದು ಸ್ವತಃ ಚುನಾವಣ ಆಯೋಗ ನ್ಯಾಯಾಲಯದ ಮೊರೆ ಹೋದ ಅನೇಕ ಉದಾಹರಣಗಳಿವೆ.

ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ಗಳಿಗೆ ಕಾಲಬದ್ಧವಾಗಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಲು ಖುದ್ದು ಹೈಕೋರ್ಟ್‌ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡಿತ್ತು.

ಪಂಚಾಯತ್‌ಗಳ ಜತೆಗೆ ರಾಜ್ಯದ 56 ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಈ ವರ್ಷ ಡಿಸೆಂಬರ್‌ ಅಂತ್ಯದೊಳಗೆ ಮುಗಿಸುವಂತೆ ಸರಕಾರ ಮತ್ತು ಚುನಾವಣ ಆಯೋಗಕ್ಕೆ ಹೈಕೋರ್ಟ್‌ ತಾಕೀತು ಮಾಡಿದೆ. ಒಟ್ಟಿನಲ್ಲಿ ಸಕಾಲಕ್ಕೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸರಕಾರ ತನ್ನ ಪಾಲಿನ ಬದ್ಧತೆಯನ್ನು ಪ್ರಾಮಾಣಿಕವಾಗಿ ತೋರಬೇಕು. ರಾಜಕಾರಣ ಮಾಡದೆ ಗ್ರಾಮೀಣ ಭಾಗದ ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next