Advertisement
ಒಂದೂವರೆ ವರ್ಷದ ಹಿಂದೆಯೇ ಜಿಲ್ಲಾಧಿಕಾರಿಗಳ ನಿವಾಸದ ಮುಂಭಾಗದ ತೊಟ್ಟಿ ಬಾವಿ ನೀರು ಪೂರೈಕೆ ಕೇಂದ್ರದ ಕಟ್ಟಡವೊಂದನ್ನು ‘ಕರ್ನಾಟಕ ಒನ್’ ಸೇವೆಗಳಿಗಾಗಿ ಪುನಶ್ಚೇಚನಗೊಳಿಸಿ ಸಿದ್ಧಪಡಿಸಲಾಗಿತ್ತು. ಆದರೆ, ಒಂದೂವರೆ ವರ್ಷಗಳಿಂದಲೂ ಕಟ್ಟಡ ಮುಂಭಾಗ ನಾಮಫಲಕ ಅಳವಡಿಸಲಾಯಿತಾದರೂ, ಯಾವುದೇ ಸೇವೆ ಜನತೆಗೆ ಲಭ್ಯವಾಗಲಿಲ್ಲ. ಈ ಕುರಿತು ಪತ್ರಿಕೆಗಳಲ್ಲಿ ವಿಶೇಷ ವರದಿಗಳು ಪ್ರಕಟವಾದರೂ ಜಿಲ್ಲಾಡಳಿತ ಮತ್ತು ನಗರಸಭೆ ಎಚ್ಚೆತ್ತುಕೊಂಡಿರಲಿಲ್ಲ.
Related Articles
Advertisement
ಸಂಪರ್ಕ ಸೇವೆ ಅಳವಡಿಕೆ: ಕಟ್ಟಡ ಇರುವ ತೊಟ್ಟಿಬಾವಿ ಕೇಂದ್ರದ ಆವರಣವನ್ನು ಜೆಸಿಬಿ ಯಂತ್ರಗಳ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ. ಆದರೆ, ಕೇಂದ್ರ ಆರಂಭದ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಹೊರ ಬಿದ್ದಿಲ್ಲದಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಆದರೂ, ಕೇಂದ್ರದ ಬೀಗ ತೆರೆದು ಕಂಪ್ಯೂಟರ್, ಇಂಟರ್‌ನೆಟ್ ಸೇವೆ, ಪೀಠೊಪಕರಣಗಳ ವ್ಯವಸ್ಥೆ ಇತ್ಯಾದಿ ಸೇವೆಗಳನ್ನು ಮಾಡಲಾಗುತ್ತಿರುವುದರಿಂದ ಕರ್ನಾಟಕ ಒನ್‌ಸೇವೆ ಶೀಘ್ರವೇ ಕೋಲಾರ ಜನತೆಗೆ ಸಿಗುತ್ತದೆಯೆಂದು ನಿರೀಕ್ಷಿಸಲಾಗುತ್ತಿದೆ.
ಇತ್ಯಾದಿ ಸೇವೆಗಳು: ಈಗಾಗಲೇ ಬೆಂಗಳೂರು ಸೇರಿ ವಿವಿಧ ಮಹಾನಗರ ಪಾಲಿಕೆ ಹಾಗೂ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಕರ್ನಾಟಕ ಒನ್ ಸೇವೆಯು ಆರಂಭವಾಗಿದ್ದು, ಈ ಕೇಂದ್ರದಲ್ಲಿ ಆಧಾರ್, ಪಡಿತರ ಚೀಟಿ, ಪಾಸ್‌ಪೋರ್ಟ್, ನಗರಸಭೆ ತೆರಿಗೆ ಪಾವತಿ, ಮೊಬೈಲ್ ರೀಚಾರ್ಜ್, ಕಂದಾಯ ಇಲಾಖೆಯ ಸೇವೆಗಳು, ಜಾತಿ, ಆದಾಯ ಪ್ರಮಾಣ ಪತ್ರಗಳ ಪಡೆಯುವಿಕೆ, ಇತ್ಯಾದಿ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಸೇವಾ ನಾಮಫಲಕ ಸಿದ್ಧ: ಈಗಾಗಲೇ ಕೋಲಾರ ಕೇಂದ್ರದಲ್ಲಿ ಯಾವ್ಯಾವ ಸೇವೆ ನೀಡಲಾಗುತ್ತದೆಯೆಂಬ ಕುರಿತು ಮಾಹಿತಿ ಫಲಕವನ್ನು ಸಿದ್ಧಪಡಿಸಲಾಗುತ್ತಿದ್ದು, ಕೇಂದ್ರದಲ್ಲಿ ಅಳವಡಿಸಲಾಗಿದೆ. ಆದರೆ, ಕರ್ನಾಟಕ ಒನ್ ಸೇವೆ ಆರಂಭ ಕುರಿತಂತೆ ಅಧಿಕಾರಿಗಳು ಗುಟ್ಟಾಗಿಟ್ಟಿರುವ ರಹಸ್ಯವೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕರ್ನಾಟಕ ಒನ್ ಕೇಂದ್ರದಲ್ಲಿ ಹಾಲಿ ವ್ಯವಸ್ಥೆ ಮಾಡುತ್ತಿರುವ ವ್ಯಕ್ತಿಗಳು ತಮ್ಮದೇನಿದ್ದರೂ ತಾಂತ್ರಿಕ ಸೌಲಭ್ಯಗಳನ್ನು ಕಲ್ಪಿಸುವುದು ಮಾತ್ರವೇ ಆಗಿದ್ದು, ಹೆಚ್ಚಿನ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ಪಡೆದುಕೊಳ್ಳಬೇಕೆಂದು ಸೂಚಿಸುತ್ತಿದ್ದಾರೆ.
ಆದರೂ, ಕರ್ನಾಟಕ ಒನ್ ಸೇವೆ ಜಿಲ್ಲಾ ಕೇಂದ್ರದಲ್ಲಿ ಆರಂಭವಾಗಿ ಸಾರ್ವಜನಿಕರಿಗೆ ಸೇವೆ ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಸಿಗುವಂತಾಗಲಿ ಎಂದು ಜನರು ಆಶಿಸಿದ್ದಾರೆ.