Advertisement

Karnataka: “ತುರ್ತು” ಅನುಮೋದನೆಗೆ ಆಕ್ಷೇಪ

11:16 PM Aug 30, 2023 | Team Udayavani |

ಬೆಂಗಳೂರು: ಸರಕಾರ ಅಧಿಕಾರಕ್ಕೆ ಬಂದು ನೂರು ದಿನ ತುಂಬಿದರೂ ಇಲಾಖೆಗಳು ಮಾತ್ರ ಶಿಸ್ತು ಕಲಿತಿಲ್ಲ. ವೆಚ್ಚ ಸಂಬಂಧಿತ ಪ್ರಸ್ತಾವನೆಗಳ ಅಧ್ಯಯನಕ್ಕೂ ಸಮಯಾವಕಾಶ ಕೊಡದೆ “ತುರ್ತು’ ಅನುಮೋದನೆ ಪಡೆಯುತ್ತಿರುವುದಕ್ಕೆ ಆರ್ಥಿಕ ಇಲಾಖೆ ಆಕ್ಷೇಪಿಸಿದೆ.

Advertisement

ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ಸೂಕ್ತ ವೈದ್ಯಕೀಯ ದಾಖಲೆಗಳಿಲ್ಲದ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಇದಕ್ಕೆ ಸಚಿವರು, ಶಾಸಕರು ಹಾಗೂ ಸಂಸದರು ಶಿಫಾರಸು ಮಾಡುತ್ತಿರುವುದು ಸರಿಯಲ್ಲ. ಇದರಿಂದ ಕಡತ ವಿಲೇವಾರಿ ವಿಳಂಬವಾಗುತ್ತಿದ್ದು, ನೊಂದವರಿಗೆ ಸಕಾಲದಲ್ಲಿ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ಸಚಿವರಾದಿಯಾಗಿ ಜನಪ್ರತಿನಿಧಿಗಳಿಗೆ ಖುದ್ದು ಪತ್ರ ಬರೆದು ಬೇಸರ ತೋಡಿಕೊಂಡಿದ್ದ ಸಿಎಂ, ಸೂಕ್ತ ದಾಖಲೆಗಳಿದ್ದಲ್ಲಿ ಮಾತ್ರ ಶಿಫಾರಸು ಮಾಡುವಂತೆ ಮನವಿ ಮಾಡಿದ್ದರು.

ಒಟ್ಟಾರೆ ಆಡಳಿತಕ್ಕೆ ಸಂಬಂಧಿಸಿದಂತೆ ಅನೇಕ ಎಡವಟ್ಟುಗಳಂತೂ ಆಗುತ್ತಲೇ ಇದ್ದು, ಕೆಲವು ಇಲಾಖೆಗಳಲ್ಲಿ ಶಿಸ್ತು ತರಲು 100 ದಿನವಾದರೂ ಸಾಧ್ಯವಾಗುತ್ತಿಲ್ಲ. ಇದೀಗ ಆರ್ಥಿಕ ಇಲಾಖೆ ಮೇಲೆ ಕೆಲ ಇಲಾಖೆಗಳು ಸವಾರಿ ಮಾಡುತ್ತಿರುವ ಆರೋಪಗಳಿದ್ದು, ಇದರೊಂದಿಗೆ ಕೆಲವು ಇಲಾಖೆಗಳ ಮೇಲೆ ಆರ್ಥಿಕ ಇಲಾಖೆಯೂ ಸವಾರಿ ಮಾಡುತ್ತಿದೆ ಎನ್ನುವ ಗುಸುಗುಸು ವಿಧಾನಸೌಧದ ಮೊಗಸಾಲೆಯಲ್ಲಿದೆ.

ಈ ಕುರಿತು ಎಲ್ಲ ಇಲಾಖೆಗಳ ಹೆಚ್ಚುವರಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯ ದರ್ಶಿ ಸೇರಿದಂತೆ ಎಲ್ಲ ಹಂತದ ಅಧಿಕಾರಿ ಗಳಿಗೂ ಸುತ್ತೋಲೆ ರವಾನಿಸಿರುವ ಆರ್ಥಿಕ ಇಲಾಖೆ, ಇನ್ನು ಮುಂದೆ ಸಂಪುಟ ಸಭೆಗೆ ಸಲ್ಲಿಸುವ ಪ್ರಕರಣಗಳಲ್ಲಿ ಆರ್ಥಿಕ ಇಲಾಖೆಯ ಅಭಿಪ್ರಾಯಕ್ಕಾಗಿ ಸಲ್ಲಿಸುವ ಕಡತಗಳನ್ನು ಒಂದು ವಾರ ಮುಂಚಿತವಾಗಿ ಸಲ್ಲಿಸಲು ಸ್ಪಷ್ಟವಾಗಿ ತಿಳಿಸಿದೆ.

ಎಲ್ಲ ಕೋನಗಳಿಂದ ಪರಿಶೀಲಿಸಲಾಗುತ್ತಿಲ್ಲ

Advertisement

ಕರ್ನಾಟಕ ಸರಕಾರಿ (ವ್ಯವಹಾರಗಳ ನಿರ್ವಹಣೆ) ನಿಯಮ 1977 ರ ನಿಯಮ 17ರ ಅನ್ವಯ ಯಾವುದೇ ಆರ್ಥಿಕ ಪರಿಣಾಮಗಳು ಇರುವ ಪ್ರಸ್ತಾವನೆಗಳನ್ನು ಸಚಿವ ಸಂಪುಟದ ಅನುಮೋದನೆಗೆ ಸಲ್ಲಿಸುವ ಮೊದಲು ಆರ್ಥಿಕ ಇಲಾಖೆಯ ಸಹಮತಿ ಪಡೆಯಬೇಕಾಗಿರುತ್ತದೆ. ಇಂತಹ ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆ ಕೂಲಂಕುಷವಾಗಿ ಪರಿಶೀಲಿಸಬೇಕಾಗುತ್ತದೆ. ಆರ್ಥಿಕ ಇಲಾಖೆಯ ಬೇರೆ ಬೇರೆ ವಿಭಾಗಗಳೊಂದಿಗೆ ಸಮಾಲೋಚಿಸಿ ತನ್ನ ಸಮಗ್ರ ಅಭಿಪ್ರಾಯ ತಿಳಿಸಬೇಕಾಗುತ್ತದೆ.

ವಾರದ ಮೊದಲೇ ಕಡತ ಸಲ್ಲಿಸಿ

ಕೆಲವು ಇಲಾಖೆಗಳು ಸಂಪುಟ ಸಭೆಯ ದಿನಾಂಕ ನಿಗದಿಯಾದ ಅನಂತರ ಕೇವಲ ಒಂದು ಅಥವಾ ಎರಡು ದಿನಗಳ ಮೊದಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸಿ ತುರ್ತಾಗಿ ಪರಿಶೀಲಿಸುವಂತೆ ಕೋರಲಾಗುತ್ತಿದೆ. ಇದರಿಂದ ಆರ್ಥಿಕ ಇಲಾಖೆಯು ಪ್ರಸ್ತಾವನೆಗಳನ್ನು ಎಲ್ಲ ಕೋನಗಳಿಂದ ಪರಿಶೀಲಿಸಿ ತನ್ನ ಅಭಿಪ್ರಾಯ ನೀಡಲು ಕಷ್ಟವಾಗುತ್ತಿದೆ. ಹೀಗಾಗಿ ಎಲ್ಲ ಇಲಾಖೆಗಳೂ ಇನ್ನು ಮುಂದೆ ಸಂಪುಟಕ್ಕೆ ಸಲ್ಲಿಸುವ ಪ್ರಕರಣಗಳಲ್ಲಿ ಆರ್ಥಿಕ ಇಲಾಖೆಯ ಅಭಿಪ್ರಾಯಕ್ಕಾಗಿ ಸಲ್ಲಿಸುವ ಕಡತಗಳನ್ನು ಕನಿಷ್ಠ ಒಂದು ವಾರ ಮುಂಚಿತವಾಗಿ ಸಲ್ಲಿಸಲು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next