Advertisement

Karnataka: ಅನ್ನಭಾಗ್ಯಕ್ಕಿಲ್ಲ ಅಕ್ಕಿ , ರೊಕ್ಕವೇ ನಿಕ್ಕಿ

11:52 PM Nov 04, 2023 | Team Udayavani |

ಬೆಂಗಳೂರು: “ಅನ್ನಭಾಗ್ಯ’ದ ಮೇಲೆ ಪಂಚರಾಜ್ಯಗಳ ಚುನಾವಣೆ ನೀತಿಸಂಹಿತೆಯ ನೆರಳು ಬಿದ್ದಿದ್ದು, ಅಕ್ಕಿಯ ಅಲಭ್ಯತೆ ತಲೆದೋರಿದೆ.

Advertisement

ಶೀಘ್ರದಲ್ಲೇ ಅಕ್ಕಿ ಕೊಡುತ್ತೇವೆ ಎನ್ನುತ್ತ ದಿನ ದೂಡಿ ಕೊಂಡು ಬಂದ ಆಹಾರ ಇಲಾಖೆಯು ಆರಂಭ ದಿಂದಲೂ ಅಕ್ಕಿಯ ಬದಲು ರೊಕ್ಕವನ್ನೇ ಕೊಡುತ್ತಿದ್ದು, ಸದ್ಯಕ್ಕಂತೂ ಆಹಾರಧಾನ್ಯ ಸಿಗುವ ಲಕ್ಷಣಗಳಿಲ್ಲ.

ಒಂದು ವೇಳೆ ಆಹಾರ ಧಾನ್ಯ ಲಭಿಸಿದರೂ ಅದರ ಸಾಗಾಟ, ಸಂಗ್ರಹಣೆ, ವಿತರಣೆ ಎಲ್ಲದಕ್ಕೂ ಹೆಚ್ಚುವರಿ ಖರ್ಚು ಬರಲಿದೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿಯೇ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಮಾಡುವುದನ್ನೇ ಮುಂದುವರಿಸುವ ನಿರ್ಣಯಕ್ಕೆ ಸಚಿವ ಸಂಪುಟ ಸಭೆ ಬಂದಿದೆ. ಆದ್ದರಿಂದ ಡಿಸೆಂಬರ್‌ವರೆಗೂ ಅಕ್ಕಿಯ ಬದಲು ರೊಕ್ಕವನ್ನೇ ಪಾವತಿಸಲಿದ್ದು, ಇದೇ ಮುಂದುವರಿಯುವ ಎಲ್ಲ ಲಕ್ಷಣಗಳಿವೆ.

ದುರ್ಭಿಕ್ಷದಲ್ಲಿ ಅಧಿಕ ಮಾಸ
ಅಕ್ಕಿಯ ಬದಲು ಹಣ ಕೊಟ್ಟರೆ ತಿನ್ನಲು ಸಾಧ್ಯವಿಲ್ಲ. ಹೀಗಾಗಿ ಬರಪೀಡಿತ ಪ್ರದೇಶಗಳಿಗೆ ನಗದು ಪಾವತಿ ಬದಲು ಆಹಾರ ಧಾನ್ಯವನ್ನೇ ಕೊಡುವುದಾಗಿ ಸರ ಕಾರ ಹೇಳಿತ್ತು. ಆದರೆ ಹೆಚ್ಚುವರಿ

ಆಹಾರ ಧಾನ್ಯ ಸಿಗದೆ ಇರು
ವುದರಿಂದ ದುರ್ಭಿಕ್ಷದಲ್ಲಿ ಅಧಿಕ ಮಾಸ ಎನ್ನುವಂತಾ ಗಿದೆ. ರಾಷ್ಟ್ರೀಯ ಆಹಾರ ಭದ್ರತೆಯಡಿ ಕೇಂದ್ರ ಸರಕಾರ ನೀಡುತ್ತಿರುವ 5 ಕೆ.ಜಿ. ಆಹಾರ ಧಾನ್ಯವೇ ಗಟ್ಟಿ ಎನಿಸಿದ್ದು, ಹೆಚ್ಚುವರಿ ಅಕ್ಕಿಯ ಬಗ್ಗೆ ಇತ್ತೀಚೆಗಷ್ಟೇ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಅವರಿದ್ದ ಸಭೆಯಲ್ಲಿ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದೇ ರೀತಿ ಹಲವೆಡೆ ಸಚಿವರು ಮುಜುಗರ ಅನುಭವಿಸಿದ್ದೂ ಇದೆ.

Advertisement

ಆಂಧ್ರದಲ್ಲೂ ಅಕ್ಕಿ ಅಲಭ್ಯ
ಅನ್ನಭಾಗ್ಯ ಯೋಜನೆಯಡಿ ಬೇಕಿರುವ 2.40 ಲಕ್ಷ ಟನ್‌ ಅಕ್ಕಿಯನ್ನು ತೆಲಂಗಾಣ, ಆಂಧ್ರ ಹಾಗೂ ಛತ್ತೀಸ್‌ಗಢದಿಂದ ಖರೀದಿಸಿ ಕೊಡುವುದಾಗಿ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಘೋಷಿಸಿದ್ದರು. ಆದರೆ ಈಗ ಛತ್ತೀಸ್‌ಗಢ ಹಾಗೂ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸದ್ಯಕ್ಕಂತೂ ಅಕ್ಕಿ ಖರೀದಿ ಅಸಾಧ್ಯ. ಆಂಧ್ರಪ್ರದೇಶದಲ್ಲಿ ಲಭ್ಯವಿದ್ದ ಅಕ್ಕಿಯೂ ಮಾರಾಟವಾಗಿದೆ.

ಅಕ್ಟೋಬರ್‌ ಪಾವತಿ ಈಗ ಆರಂಭ
ರಾಜ್ಯದಲ್ಲಿ ಪ್ರಸ್ತುತ 1.08 ಕೋಟಿ ಬಿಪಿಎಲ್‌, ಅಂತ್ಯೋದಯ ಅನ್ನ ಕಾರ್ಡ್‌ಗಳಿದ್ದು, 3.69 ಕೋಟಿ ಫ‌ಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಮಾಸಿಕ ಸರಾಸರಿ 605 ಕೋಟಿ ರೂ.ಗಳನ್ನು ಪಾವತಿಸುತ್ತಿದೆ. ಜುಲೈ – ಆಗಸ್ಟ್‌ ಅಂತ್ಯದೊಳಗೆ ನಗದು ಪಾವತಿಸಿದ್ದು, ಅನಂತರ ವಿಳಂಬ ಧೋರಣೆ ಅನುಸರಿಸುತ್ತಿದೆ. ಹಾಗೂ ಹೀಗೂ ಸೆಪ್ಟಂಬರ್‌ವರೆಗೆ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರ ನಗದು ಪಾವತಿ ಮಾಡಿದ್ದು, ಅಕ್ಟೋಬರ್‌ ಪಾವತಿ ಈಗಷ್ಟೇ ಆರಂಭವಾಗಿದೆ.

ಸರಕಾರಕ್ಕೆ ಅಧಿಕಾರಗಳ ಸಲಹೆ ಏನು?
ಆಹಾರ ಧಾನ್ಯ ಹೊಂದಿಸುವುದಕ್ಕಿಂತ ನೇರ ನಗದು ಪಾವತಿಯೇ ಸುಲಭ. ಪ್ರಸ್ತುತ ತಲಾ 5 ಕೆ.ಜಿ. ಅಕ್ಕಿ ಬದಲು 170 ರೂ. ಪಾವತಿಸಲಾಗುತ್ತಿದೆ. ಬೇರೆ ಎಲ್ಲಿಂದ ಅಕ್ಕಿ ತರುವುದಾದರೂ ನೇರವಾಗಿ ಸರಕಾರಗಳಿಂದ ಖರೀದಿಸಬೇಕು. ಏಜೆನ್ಸಿಗಳಿಂದ ಖರೀದಿಸುವುದಾದರೆ ಟೆಂಡರ್‌ ಪ್ರಕ್ರಿಯೆ ನಡೆಸಬೇಕು. ಅಲ್ಲಿಂದ ಅಕ್ಕಿಯನ್ನು ನಮ್ಮ ರಾಜ್ಯಕ್ಕೆ ತರಲು ಸಾಗಾಟ ವೆಚ್ಚ, ಸಂಗ್ರಹಣೆ, ವಿತರಣೆ ಯಾವುದೂ ಸುಲಭವಲ್ಲ. ಇದೆಲ್ಲಕ್ಕೂ ಹೆಚ್ಚುವರಿಯಾಗಿ ಕನಿಷ್ಠ 1 ಸಾವಿರ ಕೋಟಿ ರೂ. ಹೊಂದಿಸಬೇಕು. ಇದರ ಬದಲು ನಗದು ಪಾವತಿಯೇ ಸೂಕ್ತ ಎಂದು ಸರಕಾರಕ್ಕೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಪ್ರಮುಖವಾಗಿ ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಕೂಡ ಇದೇ ನಿಲುವನ್ನು ವ್ಯಕ್ತಪಡಿಸಿದ್ದು, ಇದರ ಆಧಾರದ ಮೇಲೆಯೇ ಸಚಿವ ಸಂಪುಟ ಸಭೆಯಲ್ಲೂ ನೇರ ನಗದು ಪಾವತಿಗೆ ಸಹಮತ ವ್ಯಕ್ತವಾಗಿತ್ತು.

 ಶೇಷಾದ್ರಿ ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next