Advertisement
ಟಿ.ಎಂ.ಕೆ.ಯವರು ಕಛೇರಿಯ ಪ್ರಾರಂಭವನ್ನೇ ಮುಖಾರಿ ರಾಗದ ವಿಸ್ತƒತ ಆಲಾಪನೆಯೊಂದಿಗೆ, ಜಯದೇವನ ಗೀತಗೋವಿಂದದ ಪ್ರಸಿದ್ಧ ಅಷ್ಟಪದಿ ಪ್ರಿಯೇ ಚಾರುಶೀಲೇಯನ್ನು ಬಹು ಮೆಲುವಾಗಿ, ಸಾಹಿತ್ಯವನ್ನು ನವಿರಾಗಿ ಎಳೆಎಳೆಯಾಗಿ ಬಿಡಿಸುತ್ತ, ಸಂಸ್ಕೃತ ಭಾಷೆ ಅರಿಯವದರಿಗೂ, ಸಾಹಿತ್ಯ ಅರ್ಥವಾಗುವಂತೆ, ಅತ್ಯಂತ ನಿಧಾನಗತಿಯಲ್ಲಿ ಪಕ್ಕವಾದ್ಯದವರನ್ನು ತನ್ನೊಳಗೆ ಸೇರಿಸುತ್ತ ಹಾಡಿದ ವೈಖರಿ ಮನನೀಯ. ಮುಂದೆ ಮೋಹನರಾಗದ ಆಲಾಪನೆ, ಉತ್ತಮ ತಾನಂ ಬಳಿಕ ನಿನ್ನುಕೋರಿವರ್ಣ ಸನ್ನುತಾಂಗ ಚರಣಕ್ಕೆ ಕಲ್ಪನಾ ಸ್ವರವಿಸ್ತಾರ ಹಾಗೂ ಮೃದಂಗದ ಮೊಹರ ಮುಕ್ತಾಯ-ಇವೆಲ್ಲವೂ ಒಂದು ಮಹತ್ತಾದ ಕೃತಿಯ ಗಾಯನ ಶೈಲಿಯನ್ನು ನೆನಪಿಸುವುದರೊಂದಿಗೆ ಏಕೆ ಈ ಎಡವಟ್ಟು ಎಂಬ ಭಾವವನ್ನು ಪಾರಂಪರಿಕ ಶ್ರೋತೃಗಳಲ್ಲಿ ಮೂಡಿಸಿದ್ದು ಸತ್ಯ. ರೀತಿ ಗೌಳ ರಾಗದ ವಿವಿಧ ಮಜಲುಗಳನ್ನು ಟಿ.ಎಂ.ಕೆ. ಚಿತ್ರಿಸಿ ಅಲಂಕರಿಸಿದ ರೀತಿಯಲ್ಲಿ ಇನ್ನೇನೂ ಈ ರಾಗದ ಶೃಂಗಾರಕ್ಕೆ ಕೊರತೆ ಇಲ್ಲ ಅನ್ನಿಸಿತು. ಪ್ರಸಿದ್ಧ ಕೃತಿ ಜನನಿ ನಿನ್ನು ವಿನಾದ ಪ್ರಾರಂಭದ ನಿಧಾನಗತಿ, ಮೃದಂಗ ಮತ್ತು ಘಟಂನ ನುಡಿಸಾಣಿಕೆ ಇಲ್ಲದೆ ಕೃತಿಯ ಮೊದಲ ಭಾಗದ ಸಾಹಿತ್ಯವನ್ನು ಅರ್ಥಾನುಸಂಧಾನದೊಂದಿಗೆ ಹಾಡಿದ ಪರಿ ಒಬ್ಬ ಭಕ್ತ ದೇವಿಗೆ ನಿನ್ನನ್ನು ಹೊರತುಪಡಿಸಿದರೆ ನನಗೆ ಯಾರೂ ಇಲ್ಲ ಎಂಬ ಆರ್ತಭಾವ ಹೃದಯದಲ್ಲಿ ಮೂಡಿಸಿತು. ಕೃಷ್ಣನನ್ನು ಯಶೋದೆ ವಾತ್ಸಲ್ಯದಿಂದ ಆಡಿಸುವ, ಮಧ್ಯೆಮಧ್ಯೆ ಮುನಿಸಿಕೊಳ್ಳುವ, ಜೊತೆಗೆ ಸಂಭ್ರಮಿಸುವ ವಿವಿಧ ಭಾವಗಳನ್ನು ಪೋಣಿಸಿ ಹಾಡಿದ ಕಾಪಿರಾಗದ ಜಗದೋದ್ಧಾರನ ರಾಮರಸವನ್ನು ನಾವು ಚಪ್ಪರಿಸುವಂತೆ ಮಾಡಿದ ಪಿಬರೆ ರಾಮರಸಂ ಮತ್ತು ಕೊನೆಯ ತುಳಸಿದಾಸರ ಶ್ರೀ ರಾಮಚಂದ್ರಂ ಕೃತಿ ಭಾವಸ್ನಾನವನ್ನೇ ಮಾಡಿಸಿದುವು.
Advertisement
ಮನವ ಕಾಡುವ ಹೃದ್ಯ ಟಿ.ಎಂ. ಕೃಷ್ಣ ಸ್ವರಾಂಜಲಿ
06:34 PM Jan 31, 2020 | mahesh |