Advertisement

ಮೇಕೆದಾಟುವಿಗಾಗಿ ಸಂಸದರ ಪ್ರತಿಭಟನೆ: ಈ ಒಗ್ಗಟ್ಟು ಮಾದರಿ

12:30 AM Dec 29, 2018 | Team Udayavani |

ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ನಿರ್ಮಿಸಲುದ್ದೇಶಿಸಲಾಗಿರುವ ಅಣೆಕಟ್ಟೆಗೆ ತಮಿಳುನಾಡು ತಕರಾರು ತೆಗೆಯುತ್ತಿರುವುದನ್ನು ಪ್ರತಿಭಟಿಸಿ ರಾಜ್ಯದ ಸಂಸದರು ನಿನ್ನೆ ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ರಾಜ್ಯದ ಸಂಸದರು ಈ ಪ್ರತಿಭಟನೆಯಲ್ಲಿ ಪಕ್ಷಬೇಧ ಬದಿಗಿಟ್ಟು ಭಾಗವಹಿಸಿದ್ದಾರೆ ಎನ್ನುವುದು ಇಲ್ಲಿ ಬಹಳ ಗಮನಾರ್ಹ ಅಂಶ. ರಾಜ್ಯದ ಹಿತಾಸಕ್ತಿಯ ವಿಚಾರಕ್ಕೆ ಬಂದರೆ ರಾಜ್ಯವನ್ನು ಕೇಂದ್ರದಲ್ಲಿ ಪ್ರತಿನಿಧಿಸುವ ಸಂಸದರು ಧ್ವನಿಯೆತ್ತಬೇಕು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಕರ್ನಾಟಕದ ಸಂದರ್ಭದಲ್ಲಿ ಇಂಥ ಪ್ರತಿಭಟನೆಗಳು ಪಕ್ಷಾಧಾರಿತವಾಗಿರುತ್ತವೆ ಎನ್ನುವುದು ಬೇಸರದ ಸಂಗತಿ.ಅಂದರೆ ಯಾವುದೇ ಸಮಸ್ಯೆಯಿದ್ದರೂ ಅದನ್ನು ಕೇಂದ್ರ ಮಟ್ಟದಲ್ಲಿ ಬಿಂಬಿಸುವಾಗ ಸಂಸದರಿಗೆ ರಾಜ್ಯದ ಹಿತಾಸಕ್ತಿಗಿಂತ ತಮ್ಮ ಪಕ್ಷದ ಹಿತಾಸಕ್ತಿ ಮುಖ್ಯವಾಗಿರುತ್ತದೆ. ಕಾವೇರಿ ಜಲ ಹಂಚಿಕೆ ವಿವಾದ, ಮಹದಾಯಿ ವಿವಾದ ಈ ಮುಂತಾದ ಸಂದರ್ಭಗಳಲ್ಲಿ ನಾವಿದನ್ನು ನೋಡಿದ್ದೇವೆ. 

Advertisement

ಈ ವಿಚಾರದಲ್ಲಿ ತಮಿಳುನಾಡಿನ ಸಂಸದರಿಂದ ನಾವು ಕಲಿಯುವುದು ಬಹಳಷ್ಟಿದೆ. ಕಾವೇರಿ ಜಲ ಹಂಚಿಕೆ ವಿವಾದದ ವಿಚಾರ ಬಂದಾಗಲೆಲ್ಲ ಸಂಸತ್ತಿನ ಒಳಗೂ ಹೊರಗೂ ಪ್ರತಿಭಟನೆ ಮಾಡಲು ಅವರಿಗೆ ಪಕ್ಷಬೇಧ ಅಡ್ಡಿಯಾಗುವುದಿಲ್ಲ. ಪಕ್ಷಕ್ಕಿಂತ ರಾಜ್ಯ ಮೊದಲು ಎಂಬ ಅವರ ಧೋರಣೆಯಿಂದಾಗಿಯೇ ತಮಿಳುನಾಡಿಗೆ ಹಲವು ಸಲ ಗೆಲುವಾಗಿತ್ತು. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳೇ ಪ್ರಬಲವಾಗಿರುವುದರಿಂದ ಅವರು ರಾಷ್ಟ್ರ ರಾಜಕಾರಣದ ಮೇಲಾಗುವ ಪರಿಣಾಮಗಳ ಕುರಿತು ಚಿಂತಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಕರ್ನಾಟಕದ ಸಂಸದರು ಎಂದೂ ಈ ರೀತಿ ವರ್ತಿಸಿಲ್ಲ.ಅದಕ್ಕೆ ಇಲ್ಲಿನ ಹೈಕಮಾಂಡ್‌ ರಾಜಕೀಯ ಕಾರಣವಾಗಿರಲೂಬಹುದು. ಇಲ್ಲಿರುವ ಎರಡು ಪ್ರಮುಖ ಪಕ್ಷಗಳು ರಾಷ್ಟ್ರೀಯ ಪಕ್ಷಗಳಾಗಿದ್ದು, ಅವುಗಳು ಹೈಕಮಾಂಡ್‌ ದಿಲ್ಲಿಯಲ್ಲಿವೆ. ಈ ಹೈಕಮಾಂಡ್‌ಗಳು ನೀಡುವ ಆದೇಶವನ್ನು ಮೀರಿ ಹೋಗುವ ಪರಿಸ್ಥಿತಿಯಲ್ಲಿ ರಾಜ್ಯದ ನಾಯಕರು ಇಲ್ಲ. ಹೀಗಾಗಿ ಕೆಲವೊಮ್ಮೆ ಪ್ರತಿಭಟಿಸಬೇಕೆಂಬ ಉದ್ದೇಶ ಇದ್ದರೂ ಪರಿಸ್ಥಿತಿಯ ಅನಿವಾರ್ಯತೆ ಅವರನ್ನು ಕಟ್ಟಿ ಹಾಕುತ್ತದೆ ಎಂಬುದು ಒಪ್ಪತಕ್ಕ ಮಾತು. 

ಈ ಹಿನ್ನೆಲೆಯಲ್ಲಿ ಗುರುವಾರ ದಿಲ್ಲಿಯಲ್ಲಿ ನಡೆಸಿದ ಪ್ರತಿಭಟನೆ ರಾಜ್ಯದ ಪಾಲಿಗೆ ಮುಖ್ಯವಾಗುತ್ತದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಶೋಭಾ ಕರಂದ್ಲಾಜೆ, ಪ್ರಹ್ಲಾದ್‌ ಜೋಶಿ, ಜಿ. ಎಂ. ಸಿದ್ದೇಶ್ವರ, ಜೈರಾಂ ರಮೇಶ್‌, ಬಿ.ಕೆ.ಹರಿಪ್ರಸಾದ್‌, ರಾಜೀವ್‌ ಗೌಡ, ಡಿ.ಕೆ.ಸುರೇಶ್‌, ಆರ್‌. ಧ್ರುವನಾರಾಯಣ, ಎಲ್‌.ಆರ್‌. ಶಿವರಾಮೇಗೌಡ ಅವರೆಲ್ಲ ಅಭಿನಂದನೆಗೆ ಅರ್ಹರಾಗುತ್ತಾರೆ. ಸದಾನಂದ ಗೌಡ, ಅನಂತ ಕುಮಾರ್‌ ಹೆಗಡೆ, ರಮೇಶ್‌ ಜಿಗಜಿಣಗಿಯವರು ಸಚಿವರೆಂಬ ನೆಲೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರಬಹುದು. ಆದರೆ ಸಂಸದರು ನಡೆಸಿದ ಪ್ರತಿಭಟನೆಗೆ ಬೆಂಬಲವನ್ನಾದರೂ ನೀಡುವ ನೈತಿಕ ಹೊಣೆಗಾರಿಕೆ ಅವರಿಗಿದೆ. ಕರ್ನಾಟಕದವರಲ್ಲದಿದ್ದರೂ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಕರ್ನಾಟಕದ ಹಿತಾಸಕ್ತಿಗೆ ಪೂರಕವಾದ ನಿಲುವು ವ್ಯಕ್ತಪಡಿಸಬೇಕೆನ್ನುವುದನ್ನು ರಾಜ್ಯದ ಜನತೆ ನಿರೀಕ್ಷಿಸುತ್ತಿದೆ. ಸಂಸದರು ಪ್ರದರ್ಶಿಸಿದ ಈ ಒಗ್ಗಟ್ಟು ಮೇಕೆದಾಟುವಿಗೆ ಮಾತ್ರ ಸೀಮಿತವಾಗಿರಬಾರದು. ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವ ಸಂದರ್ಭ ಬಂದಾಗಲೆಲ್ಲ ಈ ರೀತಿಯ ಒಗ್ಗಟ್ಟು ತೋರಿಸಬೇಕು. ಇದನ್ನೇ ಆರೋಗ್ಯಕರ ರಾಜಕೀಯ ಎನ್ನುವುದು. 

Advertisement

Udayavani is now on Telegram. Click here to join our channel and stay updated with the latest news.

Next