Advertisement

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

12:15 AM May 27, 2022 | Team Udayavani |

ಶಿಕ್ಷಕರು, ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಹುತೇಕರು ಕೋಟ್ಯಧೀಶರೇ ಆಗಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭ ಸಲ್ಲಿಸಿರುವ ಆಸ್ತಿ ವಿವರಗಳ ಪ್ರಮಾಣ ಪತ್ರದಲ್ಲಿ ಇದು ಬಹಿರಂಗವಾಗಿದೆ.

Advertisement

ಹನುಮಂತ ನಿರಾಣಿ  :

ಬೆಳಗಾವಿ: ವಾಯವ್ಯ ಪದವೀಧರ ಕ್ಷೇತ್ರದಿಂದ ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹನುಮಂತ ನಿರಾಣಿ ಅವರು ಆಸ್ತಿ ಮತ್ತು ಸಾಲದಲ್ಲೂ  ಕೋಟಿ ರೂ. ಒಡೆಯರು. ಅ ಅವರ ಪತ್ನಿಯೂ ಕೋಟ್ಯಧೀಶರೇ ಆಗಿದ್ದಾರೆ.

ನಿರಾಣಿ  ಹೆಸರಿನಲ್ಲಿ ಚರಾಸ್ತಿಗಿಂತ ಸಾಲದ ಪ್ರಮಾಣವೇ ಹೆಚ್ಚಿರುವುದು ವಿಶೇಷ. ಅವರು 18.38 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದು,  ಪತ್ನಿ ಶೋಭಾ  ಹೆಸರಿನಲ್ಲಿ 10.06 ಕೋಟಿ ರೂ. ಬೆಲೆಯ ಚರಾಸ್ತಿ ಇದೆ. ಮಗಳು ಪೂಜಾ 2.09 ಲಕ್ಷ ರೂ., ಮಗ ಪ್ರಜ್ವಲ್‌ 85 ಸಾವಿರ ರೂ. ಬೆಲೆಯ ಚರಾಸ್ತಿ ಹೊಂದಿದ್ದಾರೆ.

ಹನುಮಂತ ನಿರಾಣಿ ಹೆಸರಿನಲ್ಲಿ 81.02 ಲಕ್ಷ ರೂ. ಬೆಲೆಯ ಸ್ಥಿರಾಸ್ತಿ, ಪತ್ನಿ  ಹೆಸರಲ್ಲಿ 21.30 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ.  ವಿವಿಧ ಬ್ಯಾಂಕ್‌ಗಳಲ್ಲಿ 1.39 ಕೋಟಿ ಠೇವಣಿ ಇಟ್ಟಿದ್ದರೆ ಪತ್ನಿಯ ಖಾತೆಯಲ್ಲಿ 2.79 ಲಕ್ಷ ಹಣ ಇದೆ. ವೈಯಕ್ತಿಕವಾಗಿ 14.28 ಲಕ್ಷ ರೂ. ಸಾಲ ಮಾಡಿದ್ದಾರೆ. ಇದರ ಹೊರತಾಗಿ ಹನುಮಂತ ನಿರಾಣಿ ಅವರು ವಿವಿಧ ಬ್ಯಾಂಕ್‌ಗಳಲ್ಲಿ 20.14 ಕೋಟಿ ರೂ. ಹಾಗೂ  ಪತ್ನಿ ಹೆಸರಿನಲ್ಲಿ 10.20 ಕೋ. ರೂ. ಸಾಲ ಇದೆ.

Advertisement

ಅರುಣ ಶಹಾಪುರ   :

ವಾಯವ್ಯ ಶಿಕ್ಷಕರ ಕ್ಷೇತ್ರದಿಂದ   ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿರುವ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಕೋಟ್ಯಧೀಶರು ಹಾಗೂ ಪತ್ನಿ ದೀಪಾ ಅವರು ಲಕ್ಷಾಧೀಶೆ ಆಗಿದ್ದಾರೆ.

ಅರುಣ ಶಹಾಪುರ ಒಟ್ಟು 1.71 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು,  ಪತ್ನಿ  ಹೆಸರಿನಲ್ಲಿ 14.22 ಲಕ್ಷ ರೂ. ಬೆಲೆಯ ಸ್ಥಿರಾಸ್ತಿ ಇದೆ. ಅರುಣ  ಹೆಸರಿನಲ್ಲಿ 75 ಲಕ್ಷ ರೂ. ಬೆಲೆಯ ಚರಾಸ್ತಿ ಹಾಗೂ ಪತ್ನಿ  ಹೆಸರಿನಲ್ಲಿ 31.15 ಲಕ್ಷ ರೂ. ಆಸ್ತಿ ಇದೆ. ಮಗ ರೀತ್‌ ಹೆಸರಿನಲ್ಲಿ 1.78 ಲಕ್ಷ ರೂ. ಮತ್ತು ಪುತ್ರಿ ರಿಯಾ ಹೆಸರಿನಲ್ಲಿ 9.12 ಲಕ್ಷ ರೂ. ಚರಾಸ್ತಿ ಇದೆ. ಅರುಣ ಶಹಾಪುರ  ಕೈಯಲ್ಲಿ 3 ಲಕ್ಷ ರೂ.  ಹಾಗೂ ಪತ್ನಿಯಲ್ಲಿ 1 ಲಕ್ಷ ರೂ. ನಗದು ಇದೆ. ಅರುಣರಲ್ಲಿ  80 ಗ್ರಾಂ, ಪತ್ನಿಯಲ್ಲಿ   300 ಗ್ರಾಂ, ಮಗನ ಹೆಸರಲ್ಲಿ  35 ಗ್ರಾಂ ಬಂಗಾರ ಹಾಗೂ ಪುತ್ರಿ ಹೆಸರಿನಲ್ಲಿ  70 ಗ್ರಾಂ ಬಂಗಾರ ಮತ್ತು 1.05 ಲಕ್ಷ ರೂ. ಬೆಲೆಯ ಬೆಳ್ಳಿ ಆಭರಣಗಳಿವೆ. ಅರುಣ ಶಹಾಪುರ 13.36 ಲಕ್ಷ ರೂ. ಬೆಲೆಯ ಕಾರು ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 50 ಲಕ್ಷ ರೂ. ಹಾಗೂ ಎಲ್‌ಐಸಿಯಲ್ಲಿ 7.56 ಲಕ್ಷ ರೂ. ಸಾಲ ಮಾಡಿದ್ದಾರೆ. ಪತ್ನಿಯ ಹೆಸರಿನಲ್ಲಿ 3 ಲಕ್ಷ ರೂ. ಸಾಲ ಇದೆ.

ಬಸವರಾಜ ಗುರಿಕಾರ  :

ಧಾರವಾಡ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ಹೆಸರಿನಲ್ಲಿ ಒಟ್ಟು 11,68,413 ರೂ.ಮೌಲ್ಯದ ಹಾಗೂ  ಪತ್ನಿ 1,02,01,235 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನುಳಿದಂತೆ 25 ಸಾ. ರೂ. ಮೌಲ್ಯದ ಅರ್ಧ ತೊಲೆ ಬಂಗಾರ, ಪತ್ನಿಯಲ್ಲಿ  6 ಲಕ್ಷ ರೂ. ಮೌಲ್ಯದ 12 ತೊಲೆ ಬಂಗಾರವಿದೆ. 25 ಸಾವಿರ ರೂ. ಮೌಲ್ಯದ ಬೆಳ್ಳಿ ಪೂಜಾ ಸಾಮಾಗ್ರಿಗಳಿವೆ.  4 ಲಕ್ಷ ರೂ. ಮೌಲ್ಯದ ಎಲ್‌ಐಸಿ ಬಾಂಡ್‌, 20 ಸಾವಿರ ರೂ.ಮೌಲ್ಯದ  ಬೈಕ್‌ ಹೊಂದಿರುವುದಾಗಿ  ತಿಳಿಸಿದ್ದಾರೆ. ಗುರಿಕಾರರಲ್ಲಿ 55 ಸಾವಿರ ರೂ.ಹಾಗೂ ಪತ್ನಿಯಲ್ಲಿ 40 ಸಾವಿರ ರೂ.ಪತ್ನಿ ಬಳಿ ಇರುವುದಾಗಿ ಮಾಹಿತಿ ನೀಡಿದ್ದಾರೆ.

ಬಸವರಾಜ ಹೊರಟ್ಟಿ  :

ಧಾರವಾಡ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ  ಹೆಸರಿನಲ್ಲಿ ಒಟ್ಟು 9.5 ಕೋಟಿ ರೂ.ಗೂ ಅಧಿಕ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಇದ್ದು, ಪತ್ನಿ ಹಾಗೂ ಅವರ ಹೆಸರಿನಲ್ಲಿ ಹೊಲ, ಮನೆ, ಬಂಗಾರ, ಬೆಳ್ಳಿ ಹಾಗೂ ಬ್ಯಾಂಕುಗಳಲ್ಲಿ ಠೇವಣಿ ಹಣವಿದೆ.

ಹೊರಟ್ಟಿ  ಹೆಸರಿನಲ್ಲಿ ಒಟ್ಟು 2,61,47,985 ರೂ. ಮೌಲ್ಯದ ಚರಾಸ್ತಿ ಹಾಗೂ ಪತ್ನಿ ಹೇಮಲತಾರಲ್ಲಿ 1,92,91,812 ರೂ. ಮೌಲ್ಯದ ಚರಾಸ್ತಿ ಇದೆ. ಹೊರಟ್ಟಿ  ಒಟ್ಟು  9,89,73,890 ರೂ. ಮೌಲ್ಯದ  ಹಾಗೂ ಹೇಮಲತಾ 2,18,68,935 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು 18 ಬ್ಯಾಂಕುಗಳಲ್ಲಿ  ಖಾತೆಗಳನ್ನು ಹೊಂದಿದ್ದು, ಇದರಲ್ಲಿ 2,36,92,745 ರೂ. ಉಳಿತಾಯದ ಹಣ ಹೊಂದಿದ್ದಾರೆ.  ಪತ್ನಿ  1,64,06,517 ರೂ.ಠೇವಣಿ  ಹೊಂದಿದ್ದಾರೆ. ಹೊರಟ್ಟಿ  ಹೆಸರಿನಲ್ಲಿ 6,36,240 ರೂ. ಸಾಲ ಇದೆ.  ಧಾರವಾಡ ಜಿಲ್ಲೆಯ ಛಬ್ಬಿ ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಸಹಿತ ವಿವಿಧ ಕಡೆಗಳಲ್ಲಿ 1,68,30,750 ರೂ. ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ಪತ್ನಿ ಹೇಮಲತಾ ಕೂಡ 83.55 ಲಕ್ಷ ರೂ. ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ಛಬ್ಬಿ, ಯಡಹಳ್ಳಿ ಹಾಗೂ ಬೆಂಗಳೂರಿನ ರಾಜಮಹಲ್‌ ವಿಲಾಸ್‌ ಬಡಾವಣೆಯಲ್ಲಿ 8,05,87,940 ರೂ.ಮೌಲ್ಯದ ಮನೆಗಳಿದ್ದು, ಹುಬ್ಬಳ್ಳಿ ಮನೆ 1.35 ಕೋಟಿ ರೂ.ಮೌಲ್ಯದ್ದಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next