Advertisement

ಸಂಪುಟ ತೆರೆಯಲು ಕೊನೆಗೂ ಅನುಮತಿ?

05:45 AM Aug 18, 2017 | Team Udayavani |

ಬೆಂಗಳೂರು: ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆ ಸರ್ಕಸ್‌ಗೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವರಾಗಿ ನೇಮಕ ಮಾಡಬೇಕಾದವರ ಪಟ್ಟಿಯನ್ನ ದೆಹಲಿ ಭೇಟಿ ವೇಳೆ ಪಕ್ಷದ ವರಿಷ್ಠರಿಗೆ ನೀಡಿದ್ದಾರೆ. ಈ ಬೆಳವಣಿಗೆಯಿಂದ ಸಂಪುಟ ವಿಸ್ತರಣೆ ಚೆಂಡು ಈಗ ಹೈಕಮಾಂಡ್‌ ಅಂಗಳದಲ್ಲಿದೆ.

Advertisement

ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ ರೇವಣ್ಣ, ಸೇರಿದಂತೆ ಒಟ್ಟು ಆರು ಜನ ಆಕಾಂಕ್ಷಿಗಳ ಪಟ್ಟಿ ಹೈ ಕಮಾಂಡ್‌ ಪರಿಶೀಲನೆಯಲ್ಲಿದೆ. ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ತಿಪಟೂರು ಶಾಸಕ ಷಡಕ್ಷರಿ, ಯಾದಗಿರಿ ಶಾಸಕ ಎ.ಬಿ. ಮಾಲಕರೆಡ್ಡಿ ಹೆಸರು ಹೈ ಕಮಾಂಡ್‌ ಮಟ್ಟದಲ್ಲಿ ಹೆಚ್ಚಿನ ಚರ್ಚೆಗೆ ಒಳಗಾಗಿದೆ.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ರಾಜೀನಾಮೆಯಿಂದ ತೆರವಾದ ಎಸ್ಸಿ ಕೋಟಾದಲ್ಲಿ ಆರ್‌.ಬಿ ತಿಮ್ಮಾಪುರ ಮತ್ತು ನರೇಂದ್ರ ಸ್ವಾಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಿಎಂ ನರೇಂದ್ರ ಸ್ವಾಮಿ ಪರ ಒಲವು ವ್ಯಕ್ತಪಡಿಸಿದರೆ, ಹಿರಿಯ ಮುಖಂಡ ಸಂಸದ ಕೆ.ಎಚ್‌. ಮುನಿಯಪ್ಪ ಆರ್‌.ಬಿ. ತಿಮ್ಮಾಪುರ ಪರ ಪಟ್ಟು ಹಿಡಿದ್ದಾರೆ.

ಎಚ್‌. ಎಸ್‌. ಮಹದೇವ ಪ್ರಸಾದ ನಿಧನದಿಂದ ಖಾಲಿಯಾಗಿದ್ದ ಲಿಂಗಾಯತರ ಲೆಕ್ಕಾಚಾರದಲ್ಲಿ ತಿಪಟೂರು ಶಾಸಕ ಷಡಕ್ಷರಿ ಹಾಗೂ ಯಾದಗಿರಿ ಶಾಸಕ ಮಾಲಕರೆಡ್ಡಿ ನಡುವೆ ಮಂತ್ರಿಗಿರಿಗಾಗಿ ಸ್ಪರ್ಧೆ ಏರ್ಪಟ್ಟಿದೆ. ತಮ್ಮ ಜಿಲ್ಲೆಯವರೇ ಆದ ಷಡಕ್ಷರಿ ಪರ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ಇದರಿಂದ ತಮ್ಮ ಜಿಲ್ಲೆಯಲ್ಲಿ ಲಿಂಗಾಯತರ ಬೆಂಬಲ ಸಿಗಬಹುದು ಎನ್ನುವುದು ಇದರ ಹಿಂದಿನ ಲೆಕ್ಕಾಚಾರ ಎನ್ನಲಾಗಿದೆ.

ಆಕಾಂಕ್ಷಿಗಳ ಹೆಚ್ಚಿನ ಒತ್ತಡದಿಂದಾಗಿ ಒಮ್ಮತದ ತೀರ್ಮಾನಕ್ಕೆ ಇನ್ನೂ ಬರಲಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಶಿಫಾರಸ್ಸಿನ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಿ ಅವರ ತೀರ್ಮಾನಕ್ಕೆ ಬಿಟ್ಟಿದ್ದಾರೆ. ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ನಾಯಕರುಗಳೊಂದಿಗೆ ಚರ್ಚಿಸಿ ಸಚಿವರಾಗುವ ಶಾಸಕರ ಪಟ್ಟಿಯನ್ನು ಹೈಕಮಾಂಡ್‌ ಎರಡು ಮೂರು ದಿನಗಳಲ್ಲಿ ಅಂತಿಮಗೊಳಿಸುವ ಸಾಧ್ಯತೆ ಇದೆ.

Advertisement

ಮುಖ್ಯಮಂತ್ರಿಯವರೇ ಸಲ್ಲಿಸಿದ ಪಟ್ಟಿ ಅಂತಿಮವಾದುದೆಂದು ಹೇಳಲಾಗುತ್ತಿದೆಯಾದರೂ, ಅದಕ್ಕಿನ್ನೂ ಹೈಕಮಾಂಡ್‌ನ‌ ಅಂಕಿತ ಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಇಲ್ಲದವರ ಹೆಸರುಗಳನ್ನೂ ಸಹ ಹೈಕಮಾಂಡ್‌ ಪರಿಗಣಿಸುವ ಸಾಧ್ಯತೆ ಇದ್ದು, ವರಿಷ್ಠರು ಒಪ್ಪಿಗೆ ಕೊಟ್ಟ ತಕ್ಷಣ ಸಚಿವ ಸಂಪುಟದ ವಿಸ್ತರಣೆ ರಾಜ್ಯದಲ್ಲಿ ನಡೆಯಲಿದೆ  ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸಂಪುಟ ವಿಸ್ತರಣೆಗೆ ಹೈಕಮಾಂಡ್‌ನ್ನು ಭೇಟಿ ಮಾಡಿ ಬುಧವಾರ ಹಾಗೂ ಗುರುವಾರ ಕಸರತ್ತು ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿ,  ಸಂಪುಟ ವಿಸ್ತರಣೆ ಬಗ್ಗೆ ರಾಹುಲ್‌ ಗಾಂಧಿ ಜೊತೆಗೆ ಚರ್ಚೆ ಮಾಡಿದ್ದೇನೆ. ನಾನು ಸಚಿವರಾಗುವವರ ಹೆಸರನ್ನು ಅವರಿಗೆ ನೀಡಿದ್ದೇನೆ ಹೈಕಮಾಂಡ್‌ ತಮ್ಮ ತೀರ್ಮಾನ ತಿಳಿಸಬೇಕಿದೆ ಎಂದು ಹೇಳಿದರು.

ಮೇಲ್ಮನೆಗೆ ಇಬ್ರಾಹಿಂ ಸಾಧ್ಯತೆ:
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಈ 31 ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮುಖ್ಯಮಂತ್ರಿಯ ಆಪ್ತರಾದ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರ ಹೆಸರೇ ಅಂತಿಮವಾಗುವ ಸಾಧ್ಯತೆ ಇದೆ.

ಮೊದಲಿನಿಂದಲೂ ಮೇಲ್ಮನೆ ಸ್ಥಾನಕ್ಕಾಗಿ, ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಡುತ್ತಲೇ ಬಂದಿದ್ದ ಇಬ್ರಾಹಿಂ ಅವರನ್ನು ಅಲ್ಪಾವಧಿಗಾದರೂ,  ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಪ್ರಯತ್ನ ನಡೆಸಿ, ಹೈ ಕಮಾಂಡ್‌ಗೆ ಶಿಫಾರಸ್ಸು ಮಾಡಿದ್ದಾರೆ. ಸಿಎಂ ಪಟ್ಟು ಹಿಡಿದಿದ್ದರಿಂದ ಹೈ ಕಮಾಂಡ್‌ ಇಬ್ರಾಹಿಂಗೆ ಟಿಕೆಟ್‌ ನೀಡಲು ಒಪ್ಪುವ ಸಾಧ್ಯತೆ ಹೆಚ್ಚಾಗಿದೆ.

ಈ ನಡುವೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವ ರ ತಮ್ಮ ಆಪ್ತರಾಗಿರುವ  ಜೆ .ಸಿ. ಚಂದ್ರಶೇಖರ್‌ ಅವರಿಗೆ ಅವಕಾಶ ಕಲ್ಪಿಸಿಕೊಡುವಂತೆ ಹೈ ಕಮಾಂಡ್‌ ಬಳಿ ಮನವಿ ಮಾಡಿದ್ದಾರೆ. ಆದರೆ, ಮುಖ್ಯಮಂತ್ರಿ ಪರಮೇಶ್ವರ್‌ ಅವರ ಅಭ್ಯರ್ಥಿ ಆಯ್ಕೆಗೆ ಹೆಚ್ಚಿನ ಒಲವು ತೋರಿಲ್ಲ. ಇದರಿಂದ ಪರಮೇಶ್ವರ್‌ ಅಸಮಾಧಾನಗೊಂಡು ಗುರುವಾರ ಸಿಎಂ ಜೊತೆಗೂಡಿ ಹೈ ಕಮಾಂಡ್‌ ಭೇಟಿ ಮಾಡುವ ಕಾರ್ಯಕ್ರಮವನ್ನು ಮೊಟಕುಗೊಳಿಸಿ, ಬುಧವಾರ ತಡ ರಾತ್ರಿಯೇ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಲೋಕಸಭೆ ಕಾಂಗ್ರೆಸ್‌ ಸಂಸದೀಯ ಪಕ್ಷದ  ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ತಮ್ಮ ಆಪ್ತರಾದ ಯು.ಬಿ. ವೆಂಕಟೇಶ್‌ ಅವರಿಗೆ ಮೇಲ್ಮನೆ ಟಿಕೆಟ್‌ ನೀಡುವಂತೆ ಹೈ ಕಮಾಂಡ್‌ ಬಳಿ ಲಾಬಿ ನಡೆಸಿದ್ದಾರೆ.. ಅಂತಿಮವಾಗಿ ಪಕ್ಷ ಇಬ್ರಾಹಿಂ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ದೆಹಲಿ ಮೂಲಗಳು ಖಚಿತಪಡಿಸಿವೆ.

ಎಚ್‌ ವೈ ಮೇಟಿ ಸ್ಥಾನಕ್ಕೆ (ಕುರುಬ ಕೋಟಾ)
ಎಚ್‌ ಎಂ ರೇವಣ್ಣ (ಎಂಎಲ್‌ಸಿ): ಸ್ವತಃ ಮುಖ್ಯಮಂತ್ರಿ ಬೆಂಬಲ
ಎಚ್‌ ಎಸ್‌ ಮಹದೇವ ಪ್ರಸಾದ್‌ ಸ್ಥಾನಕ್ಕೆ (ಲಿಂಗಾಯತರ ಕೋಟಾ)
ಷಡಕ್ಷರಿ (ತಿಪಟೂರು): ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಒಲವು
ಮಾಲಕರೆಡ್ಡಿ (ಯಾದಗಿರಿ): ಪಕ್ಷದ ಹಿರಿಯ ಮುಖಂಡ, ನಿಷ್ಠಾವಂತ
ಪರಮೇಶ್ವರ್‌ ಸ್ಥಾನಕ್ಕೆ (ಎಸ್ಸಿ ಕೋಟಾ)
ಆರ್‌ ಬಿ ತಿಮ್ಮಾಪುರ (ವಿಧಾನಪರಿಷತ್‌ ಸದಸ್ಯ): ಹಿರಿಯ ಮುಖಂಡ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಒಲವು
ಪಿ. ಎಂ. ನರೇಂದ್ರ ಸ್ವಾಮಿ (ಮಳವಳ್ಳಿ): ಮುಖ್ಯಮಂತ್ರಿ ಒಲವು, ಮಂಡ್ಯಕ್ಕೆ ಪ್ರಾಶಸ್ತ್ಯ

ರೈಗೆ ಗೃಹ ಖಾತೆ
ಇದೇ ಸಂದರ್ಭದಲ್ಲಿ ತಮ್ಮ ಬಳಿ ಇರುವ ಗೃಹ ಖಾತೆಯನ್ನು ಬೇರೆಯವರಿಗೆ ನೀಡುವ ಕುರಿತು ರಾಹುಲ್‌ ಗಾಂಧಿ ಜೊತೆಗೆ ಚರ್ಚೆ ನಡೆಸಿದ್ದು, ಅರಣ್ಯ ಸಚಿವ ರಮಾನಾಥ ರೈಗೆ ಗೃಹ ಖಾತೆ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಿಎಂ ಆಪ್ತ ಮೂಲಗಳ ಪ್ರಕಾರ, ರಮಾನಾಥ ರೈಗೆ ಗೃಹ ಖಾತೆ ನೀಡಿದರೆ, ಅವರ ಬಳಿ ಇರುವ ಅರಣ್ಯ ಖಾತೆಯನ್ನು ಎಚ್‌.ಎಂ. ರೇವಣ್ಣಗೆ, ಷಡಕ್ಷರಿಗೆ ಸಹಕಾರ ಮತ್ತು ಸಕ್ಕರೆ ಖಾತೆ ಹಾಗೂ ಆರ್‌.ಬಿ. ತಿಮ್ಮಾಪುರ್‌ಗೆ ಅಬಕಾರಿ ಖಾತೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
 

Advertisement

Udayavani is now on Telegram. Click here to join our channel and stay updated with the latest news.

Next