ಬೆಂಗಳೂರು : ಪಶುಸಂಗೋಪನೆ ಇಲಾಖೆ ಅಗತ್ಯ ಸೇವೆಗಳಲ್ಲಿ ಒಂದಾಗಿರುವುದರಿಂದ ಜಾನುವಾರುಗಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ಪಶುವೈದ್ಯರು ಹಾಗೂ ಸಿಬ್ಬಂದಿ ಪಶುಪಾಲಕರ, ರೈತರ ಮನೆ ಬಾಗಿಲಿಗೆ ತೆರಳಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರ ನೇರ ಸಂಪರ್ಕಕ್ಕೆ ಬರುವ ಎಲ್ಲಾ ಸಿಬ್ಬಂದಿಗೆ ಆದ್ಯತೆಯ ಮೇಲೆ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕೆಂದು ಸಚಿವ ಪ್ರಭು ಚೌಹಾಣ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಸುಧಾಕರ ಮತ್ತು ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರಿಗೆ ಪತ್ರ ನೀಡುವುದರ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ
ಕೋವಿಡ್ ಭೀತಿಯ ನಡುವೆಯೂ ಇಲಾಖೆಯ ಸಿಬ್ಬಂದಿ ಗ್ರಾಮಗಳಲ್ಲಿ ರೈತರ ಮನೆ-ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಹಾಗೂ ಅವರ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಅಲ್ಲದೇ ಕರ್ನಾಟಕ ಹಾಲು ಮಹಾಮಂಡಳಿಯ ಎಲ್ಲ ಘಟಕದ ಸಿಬ್ಬಂದಿ ಮತ್ತು ಕಾರ್ಮಿಕರಿಗೆ ಹಾಗೂ 14 ಜಿಲ್ಲಾ ಒಕ್ಕೂಟಗಳ ಸಿಬ್ಬಂದಿಗಳಿಗೆ ಹಾಗೂ 14500 ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೂ ಸಹ ಲಸಿಕೆ ಪಡೆಯುವಂತೆ ಸೂಚಿಸಿದ್ದಾರೆ.
ರಾಜ್ಯದ 8 ಜಿಲ್ಲೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ, ರಾಯಚೂರು, ಬೆಳಗಾವಿ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಉಳಿದ 22 ಜಿಲ್ಲೆಗಳಲ್ಲಿ ಇಲಾಖೆಯ ಸಿಬ್ಬಂದಿಗಳಿಗೆ ಲಸಿಕೆ ನೀಡಬೇಕಾದ ಅಗತ್ಯವಿದ್ದು ತಕ್ಷಣಕ್ಕೆ ಲಸಿಕೆಯ ವ್ಯವಸ್ಥೆ ಮಾಡುವಂತೆ, ಮುಖ್ಯಮಂತ್ರಿಗಳನ್ನು, ಮುಖ್ಯಕಾರ್ಯದರ್ಶಿಗಳನ್ನು ಹಾಗೂ ಆರೋಗ್ಯ ಇಲಾಖೆಯ ಸಚಿವರನ್ನು ಕೋರಲಾಗಿದೆ.
ಈ ಕುರಿತಾಗಿ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಅವರಿಗೆ ಸೂಚಿಸಲಾಗಿದ್ದು ಜಿಲ್ಲಾವಾರು ಇಲಾಖೆಯ ಎಲ್ಲ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಲು ಆಯಾ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪಶುಸಂಗೋಪನೆ ಇಲಾಖೆಯ ಎಲ್ಲ ಸಿಬ್ಬಂದಿಗೆ ಲಸಿಕೆಯ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮೇ.25ರಿಂದ ಜೂ.7ರವರೆಗೆ ಮತ್ತೆ 14 ದಿನ ಲಾಕ್ ಡೌನ್ ವಿಸ್ತರಣೆಗೆ ಸರಕಾರ ನಿರ್ಧಾರ