Advertisement

ಸರ್ಕಾರಕ್ಕೆ ಡಿ”ಕೇಸ್‌’ಕಂಟಕ

06:00 AM Jun 21, 2018 | |

ಬೆಂಗಳೂರು: ಪ್ರಭಾವಿ ಸಚಿವ, ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ವಿರುದ್ಧ ಆದಾಯ ತೆರಿಗೆ ಇಲಾಖೆ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರು ಹಾಗೂ ವಿಚಾರಣೆಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯವೇ ಸಚಿವರಿಗೆ ನೋಟಿಸ್‌ ನೀಡಿರುವುದು ಸಮ್ಮಿಶ್ರ ಸರ್ಕಾರಕ್ಕೆ ಆರಂಭಿಕ ಆತಂಕ ತಂದೊಡ್ಡಿದಂತಿದೆ.

Advertisement

ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಬಲ ಅಸ್ತ್ರ ಪ್ರಯೋಗಿಸಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದರೂ, ಈ ಬೆಳವಣಿಗೆ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಮೊದಲ ಕಂಟಕ ಎಂದೇ ವಿಶ್ಲೇಷಿಸಲಾಗುತ್ತಿದೆ.

ಆದಾಯ ತೆರಿಗೆ ಇಲಾಖೆ ದಾಳಿ ಪ್ರಕರಣದಲ್ಲಿ ಸಮನ್ಸ್‌ ಜಾರಿಯಾಗುವುದು ಸಹಜ. ಜತೆಗೆ ಜಾಮೀನು ಕೂಡ ಪಡೆಯಲು ಅವಕಾಶವಿರುತ್ತದೆ. ಆದರೆ ಡಿ.ಕೆ.ಶಿವಕುಮಾರ್‌ ವಿರುದ್ಧದ ಐಟಿ ದಾಳಿ ಪ್ರಕರಣದಲ್ಲಿ ಕೇಳಿಬರುತ್ತಿರುವ ಮಾತುಗಳೇ ಬೇರೆ. ವಿಚಾರಣೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಐಟಿ ಅಧಿಕಾರಿಗಳು ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಸಚಿವರ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗಾಗಿ ಪ್ರಕರಣ ಗಂಭೀರ ಹಂತಕ್ಕೆ ತಲುಪಿದರೆ ಮೈತ್ರಿ ಸರ್ಕಾರದ ನಡೆ ಏನಾಗಿರಬೇಕು ಎಂಬುದು ಸದ್ಯ ಕಾಂಗ್ರೆಸ್‌ ಮಾತ್ರವಲ್ಲದೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿರೂ ತಲೆನೋವಾಗಿ ಪರಿಣಮಿಸಿದೆ.

ಈ ಬೆಳವಣಿಗೆ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರನ್ನು ಪದ್ಮನಾಭ ನಗರದ ನಿವಾಸದಲ್ಲಿ ಬುಧವಾರ ಭೇಟಿಯಾಗಿ ವಿಸ್ತ್ರತ ಚರ್ಚೆ ನಡೆಸಿದರು. ಪ್ರಕರಣದ ಬೆಳವಣಿಗೆಗೆ ಸಂಬಂಧಿಸಿ ಸರ್ಕಾರದ ನಿಲುವೇನಿರಬೇಕು? ಸಮರ್ಥನೆ ನೀಡಬಹುದಾದ ಅಂಶಗಳು, ನಂತರದ ಬೆಳವಣಿಗೆಯನ್ನು ಹೇಗೆ ಎದುರಿಸಬೇಕು ಎಂಬುದು ಸೇರಿ ಇತರೆ ವಿಚಾರಗಳ ಬಗ್ಗೆ ಗಹನ ಚರ್ಚೆ ನಡೆಸಿದರು.

ಕಾಡುವ ಭೀತಿ: ತಮ್ಮ ಹಾಗೂ ಆಪ್ತರ ಮೇಲೆ ನಡೆದ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸಹೋದರರಾದ ಸಂಸದ ಡಿ.ಕೆ.ಸುರೇಶ್‌ ಹಲವು ಬಾರಿ ಆರೋಪ ಮಾಡಿದ್ದಾರೆ. ಇಷ್ಟಾದರೂ ಡಿ.ಕೆ.ಶಿವಕುಮಾರ್‌ ಮೇಲೆ ಐಟಿ ಪ್ರಕರಣದ ತೂಗುಗತ್ತಿ ನೇತಾಡುತ್ತಿದೆ.

Advertisement

ಐಟಿ ದಾಳಿ ಜಾಮೀನು ಪಡೆಯಬಹುದಾದ ಪ್ರಕರಣವೆನಿಸಿದೆ. ಆದರೆ ವಿಚಾರಣೆ ವೇಳೆ ಸುಳ್ಳು ಮಾಹಿತಿ ನೀಡುವುದು ಸತ್ಯ ಮರೆಮಾಚುವ ಪ್ರಯತ್ನವೆನಿಸುವ ಕಾರಣ ಪ್ರಕರಣ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಲ್ಲದೇ ಸಮ್ಮಿಶ್ರ ಸರ್ಕಾರಕ್ಕೆ ಆರಂಭದಲ್ಲೇ ಮುಜುಗರಕ್ಕೀಡುಮಾಡುವ ಬೆಳವಣಿಗೆಯಾಗಿ ಪರಿಣಮಿಸಿದರೂ ಅಚ್ಚರಿಯಲ್ಲ.

ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲೇ ಡಿ.ಕೆ.ಶಿವಕುಮಾರ್‌ ವಿರುದ್ಧದ ಐಟಿ ಪ್ರಕರಣ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಅಲ್ಲದೇ ಇದು ಗಂಭೀರ ಸ್ವರೂಪ ಪಡೆಯುವ ಶಂಕೆ ಜತೆಗೆ ಮೈತ್ರಿ ಸರ್ಕಾರದ ಮೇಲೆ ಬೀರುವ ಪರಿಣಾಮದ ಬಗ್ಗೆಯೂ ಚರ್ಚೆ ನಡೆದಿತ್ತು. ಪ್ರಕರಣದ ಬೆಳವಣಿಗೆಯು ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸುವ ಆತಂಕ ಕೂಡ ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ವ್ಯಕ್ತವಾಗಿತ್ತು. ಆ ಕಾರಣಕ್ಕೆ ಸಂಪುಟದಲ್ಲಿ ಡಿ.ಕೆ.ಶಿವಕುಮಾರ್‌ ಅವರಿಗೆ ಅವಕಾಶ ತಪ್ಪುವ ಮಾತುಗಳು ಕೇಳಿಬಂದಿತ್ತು. ಅಂತಿಮವಾಗಿ ಸಚಿವ ಸ್ಥಾನ ಪಡೆದು ಎರಡು ಪ್ರಭಾವಿ ಖಾತೆಗಳನ್ನು ಪಡೆಯುವಲ್ಲಿ ಶಿವಕುಮಾರ್‌ ಯಶಸ್ವಿಯಾಗಿದ್ದರು.

ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಐಟಿ ದೂರು ಸಲ್ಲಿಸಿರುವುದು ಮತ್ತು ನಂತರದ ಬೆಳವಣಿಗೆ ಜತೆಗೆ ಮುಂದೆ ಪ್ರಕರಣ ಪಡೆಯಬಹುದಾದ ತಿರುವುಗಳು ಹಾಗೂ ಕೇಂದ್ರ ಸರ್ಕಾರ ಹಂತ ಹಂತವಾಗಿ ಪ್ರಯೋಗಿಸುವ ಅಸ್ತ್ರಗಳೇನು ಎಂಬ ಭೀತಿ ಕಾಂಗ್ರೆಸ್‌ ಪಕ್ಷದ ನಿದ್ದೆಗೆಡಿಸಿದೆ. ಅಲ್ಲದೆ, ಇನ್ನಷ್ಟು ಕಾಂಗ್ರೆಸ್‌ ನಾಯಕರ ಮೇಲೆ ಐಟಿ ದಾಳಿ ನಡೆಯುವ ಸಾಧ್ಯತೆ ಬಗೆಗಿನ ಮಾತುಗಳು ಪಕ್ಷವನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.

ಇದು ಉದ್ದೇಶಪೂರ್ವಕ ಕಿರುಕುಳ
ತಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಕುರಿತಂತೆ ಪ್ರತಿಕ್ರಿಯಿಸಿರುವ ಸಚಿವ ಡಿ.ಕೆ.ಶಿವಕುಮಾರ್‌, ಉದ್ದೇಶಪೂರ್ವಕವಾಗಿ ನನಗೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ಎದುರಿಸುವ ಧೈರ್ಯ ನನಗಿದೆ. ನ್ಯಾಯಾಲಯದಲ್ಲಿ ಇರುವುದರಿಂದ ನಾನು ಏನನ್ನೂ ಹೇಳುವುದಿಲ್ಲ. ಇಲ್ಲದಿದ್ದರೆ ನಾನೇನು ಎಂಬುದನ್ನು ತೋರಿಸುತ್ತಿವೆ. ಐಟಿ ಕೇಸ್‌ನಲ್ಲಿ ನನ್ನನ್ನು ದುರುದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಆರ್ಥಿಕ ಅಪರಾಧಗಳ ನ್ಯಾಯಾಲಯದಿಂದ ಸಮನ್ಸ್‌ ಜಾರಿಯಾಗಿಲ್ಲ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಬಂದಿದೆ. ನನಗೆ ಮಾತ್ರವಲ್ಲ, ನನ್ನ ತಾಯಿ ಹಾಗೂ ಕುಟುಂಬ ಸದಸ್ಯರಿಗೂ ನೋಟಿಸ್‌ ಬಂದಿದೆ. ನ್ಯಾಯಾಲಯದ ಆದೇಶವನ್ನು ಗೌರವಿಸಿ ವಿಚಾರಣೆಗೆ ಹಾಜರಾಗುತ್ತೇವೆ ಎಂದು ಹೇಳಿದರು.

ನಮಗೆ ಸಂಬಂಧಿಸಿದ ಡೈರಿ ಸಿಕ್ಕಿದೆ. ಅದರಲ್ಲಿ ಹಲವು ವಿಷಯಗಳನ್ನು ಬರೆಯಲಾಗಿದೆ ಎಂದೆಲ್ಲಾ ಮಾಧ್ಯಮಗಳಲ್ಲಿ ಉಲ್ಲೇಖೀಸಲಾಗುತ್ತಿದೆ. ನಾವೂ ಸಾಕಷ್ಟು ಡೈರಿಗಳನ್ನು ನೋಡಿದ್ದೇವೆ. ನಾವು ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನೇ ಏಕೆ ಗುರಿ ಮಾಡುತ್ತಿದ್ದಾರೆ ಎಂಬುದೂ ಗೊತ್ತಿದೆ. ಅದಕ್ಕೆ ಈಗ ಪ್ರತಿಕ್ರಿಯಿಸುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ ಎಂದರು.

ಆದಾಯ ತೆರಿಗೆ, ಡೈರಿ ಪತ್ತೆ ಎಂದೆಲ್ಲಾ ನನ್ನನ್ನೇ ಏಕೆ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಶಿವಕುಮಾರ್‌, ಏಕೆ ಬೇರೆಯವರ ಮನೆಯಲ್ಲಿ ಡೈರಿ, ಕಳ್ಳ ಲೆಕ್ಕ ಇಟ್ಟಿದ್ದು ಗೊತ್ತಿಲ್ಲವೇ? ಅಂತವರ ಮೇಲೆ ಏಕೆ ದಾಳಿ ಮಾಡುತ್ತಿಲ್ಲ? ಈ ದೇಶದಲ್ಲಿ ಕಾನೂನು ಎಂಬುದಿದ್ದು, ಕಾನೂನು ಹೋರಾಟದ ಮೂಲಕವೇ ಎಲ್ಲದಕ್ಕೂ ಉತ್ತರ ನೀಡಲಾಗುವುದು ಎಂದರು.

ಬಿಜೆಪಿಯವರು ತಮ್ಮ ರಾಜೀನಾಮೆ ಕೇಳಿದ ಬಗ್ಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಸ್ನೇಹಿತರು ನನ್ನ ರಾಜೀನಾಮೆ ಕೇಳುತ್ತಿದ್ದಾರಾ? ನಾವೂ ಕೂಡ ಅವರ ಪ್ರಕರಣಗಳ ದೊಡ್ಡ ಹೊರೆಯನ್ನೇ ಬಿಚ್ಚಿಡಬೇಕಾಗುತ್ತದೆ. ಕಾಲ ಕೂಡಿ ಬಂದಾಗ ಅದನ್ನೂ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಕೇಂದ್ರ ಸರ್ಕಾರದ ಸಂಸ್ಥೆಗಳು ದ್ವೇಷ ಅಥವಾ ಒತ್ತಡಕ್ಕೆ ಮಣಿಯದೆ ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಸಚಿವ ಡಿ.ಕೆ.ಶಿವಕುಮಾರ್‌ ಅವರು ಕಾನೂನುಬದ್ಧವಾಗಿದ್ದರೆ ನಾವೆಲ್ಲರೂ ಅವರ ಬೆಂಬಲಕ್ಕೆ ನಿಲ್ಲುತ್ತೇವೆ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next