ಬೆಂಗಳೂರು: ಕೇಂದ್ರ ಸರ್ಕಾದ ಬಜೆಟ್ ಕೋವಿಡ್ ಅನಂತರದ ಕಾಲದಲ್ಲಿ ದೇಶದ ಸಮಗ್ರ ಆರ್ಥಿಕ ಸುಧಾರಣೆಗೆ ಒತ್ತು ನೀಡಿದೆ. ಜಾಗತಿಕ ಮಟ್ಟದಲ್ಲಿ ಭಾರತ ಸದೃಢವಾಗಿ ಬೆಳೆಯಲು ವೇಗ ದೊರೆತಂತಾಗಿದೆ. ಜತೆಗೆ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಆದ್ಯತೆ ದೊರೆತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸ್ವಾತಂತ್ರ್ಯದ 100ನೇ ವರ್ಷದತ್ತ ಸಾಗುತ್ತಿರುವ ಈ ಅಮೃತ ಕಾಲದಲ್ಲಿ, ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರಲು ಭದ್ರ ಅಡಿಪಾಯ ಹಾಕುವ ನಿಟ್ಟಿನಲ್ಲಿ ಬಜೆಟ್ ರೂಪಿಸಲಾಗಿದೆ. ಅದರಲ್ಲೂ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಯೋಜನೆ, ಕ್ರಮಗಳನ್ನು ತಂದು ಜನರ ಜೀವನ ಗುಣಮಟ್ಟ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗಿದೆ.
ದೇಶದಲ್ಲಿ ಈವರೆಗೆ 166 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡುವ ಮೂಲಕ ಜನರ ಜೀವ, ಜೀವನೋಪಾಯ ಎರಡನ್ನೂ ರಕ್ಷಿಸಲಾಗಿದೆ. ಲಸಿಕಾಕಾರಣ ಕೋವಿಡ್ ಅನಂತರದ ಆರ್ಥಿಕ ಪುಶ್ಚೇತನಕ್ಕೆ ವೇಗ ನೀಡಿದೆ. ಇಂತಹ ಬಜೆಟ್ ನೀಡಿದ ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಆರೋಗ್ಯ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಬೆಂಬಲ ಬೆಲೆ ಯೋಜನೆಯಡಿ, 2.37 ಲಕ್ಷ ಕೋಟಿ ರೂ. ನಲ್ಲಿ ಬೆಳೆ ಖರೀದಿ ನಡೆಯಲಿದೆ. ಸಹಕಾರಿ ಸಂಘಗಳ ತೆರಿಗೆ ದರವನ್ನು ಶೇ.15 ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಅನುಮತಿ ನೀಡಲಾಗಿದೆ. ಅಲ್ಲದೆ, ಪಿಎಂ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ, 400 ವಂದೇ ಭಾರತ್ ರೈಲುಗಳು, ಆಧುನಿಕ ತಂತ್ರಜ್ಞಾನ ಇ-ಪಾಸ್ ಪೋರ್ಟ್ ವ್ಯವಸ್ಥೆ, 2 ಲಕ್ಷ ಅಂಗನವಾಡಿಗಳ ಉನ್ನತೀಕರಣ, ಹೊಸದಾಗಿ 3.8 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ, ಸೌರ ವಿದ್ಯುತ್‌ಗೆ 19,500 ಕೋಟಿ ರೂ. ಮೊದಲಾದ ಯೋಜನೆಗಳು ದೇಶವನ್ನು ಎಲ್ಲ ಆಯಾಮಗಳಿಂದ ಸುಧಾರಣೆ ಮಾಡಲು ಪೂರಕವಾಗಿದೆ ಎಂದು ಹೇಳಿದ್ದಾರೆ.