ಮುಂಬಯಿ: ಕರ್ನಾಟಕ ಮಹಾಮಂಡಳ ಮೀರಾ-ಭಾಯಂದರ್ ಇದರ ವಾರ್ಷಿಕ ಕ್ರೀಡೋತ್ಸವವು ಭಾಯಂದರ್ ಪೂರ್ವದ ಆದರ್ಶ ಇಂದಿರಾ ನಗರದ ಎಸ್. ಎನ್. ಕಾಲೇಜಿನ ಎದುರುಗಡೆಯ ಆನಂದ ದಿಘ ಸ್ಮಾರಕ ಮೈದಾನದಲ್ಲಿ ವೈವಿಧ್ಯಮಯ ಕ್ರೀಡಾಸ್ಪರ್ಧೆಗಳೊಂದಿಗೆ ಫೆ. 24 ರಂದು ನಡೆಯಿತು.
ಬೆಳಗ್ಗೆ ಕ್ರೀಡೋತ್ಸವವನ್ನು ಉದ್ಘಾಟಿಸಿದ ಪಲಿಮಾರು ಮಠ ಮೀರಾರೋಡ್ ಶಾಖೆಯ ಟ್ರಸ್ಟಿ ಮುಖ್ಯ ಪ್ರಬಂಧಕ ವಿದ್ವಾನ್ ರಾಧಾಕೃಷ್ಣ ಭಟ್ ಇವರು ಮಾತನಾಡಿ, ಕ್ರೀಡೆಯು ವೈಯಕ್ತಿಕ ಪರಿಶ್ರಮದ ಕಲೆಯಾಗಿದೆ. ಪ್ರತಿಯೊಂದು ಸೋಲಿನಲ್ಲಿ ನಾವು ಹೆಚ್ಚು ಅನುಭವಗಳನ್ನು ಪಡೆಯುತ್ತೇವೆ. ಬೌದ್ಧಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಸಮಸ್ಥಿತಿಯಲ್ಲಿರುವ ಪಂದ್ಯಾಟದಲ್ಲಿ ಗೆಲುವಿನಲ್ಲಿ ಸಂಭ್ರಮ, ಸೋಲಿನಲ್ಲಿ ನಿರಾಶೆ ಸಲ್ಲದು. ಕರ್ನಾಟಕ ಮಹಾ ಮಂಡಳದ ಕ್ರೀಡೋತ್ಸವದಿಂದ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರಗಳು ಭಾಯಂದರ್ ಪರಿಸರದಲ್ಲಿ ಅನಾವರಣಗೊಳ್ಳಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ವೇದಿಕೆಯ ಗಣ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರು, ಕ್ರೀಡಾಪಟುಗಳು ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷ ಕರ್ನಾಟಕ ಮಹಾಮಂಡಲದ ಅಧ್ಯಕ್ಷ ರವಿಕಾಂತ ಶೆಟ್ಟಿ ಇನ್ನ ಇವರು ಸ್ವಾಗತಿಸಿ, ದಿನಪೂರ್ತಿ ನಡೆದ ಕ್ರೀಡೋತ್ಸವದಲ್ಲಿ ತಪ್ಪುಗಳು ಸಹಜ. ಅದನ್ನು ಕೂಡಲೆ ಸರಿಪಡಿಸಿ ಸಹನೆ, ತಾಳ್ಮೆ ಹಾಗೂ ಕರ್ನಾಟಕ ಮಹಾಮಂಡಲದ ಪ್ರೀತಿಯಿಂದ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿ ಶುಭ ಹಾರೈಸಿದರು.
ರಾಷ್ಟ್ರೀಯ ಕ್ರೀಡಾಪಟು ಮೋನಿಶ್ ಪೂಜಾರಿ ಮೈದಾನಕ್ಕೆ ತೆಂಗಿನಕಾಯಿಯನ್ನು ಒಡೆಯು ವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅನಂತರ ವಿವಿಧ ಕ್ರೀಡಾಸ್ಪರ್ಧೆಗಳು ನಡೆದವು. ವಯೋಮಿತಿಗೆ ಅನುಗುಣವಾಗಿ ರನ್ನಿಂಗ್ ರೇಸ್, ಪುರುಷ ಹಾಗೂ ಮಹಿಳೆಯರಿಗೆ ಶಾಟ್‌ಪುಟ್, ಲಿಂಬು ಚಮಚ, ಬಟಾಟೆ ಓಟ, ಸ್ಯಾಕ್‌ರೇಸ್, ಕ್ರಿಕೆಟ್, ಹಗ್ಗಜಗ್ಗಾಟ, ತ್ರೋಬಾಲ್, ಪುರುಷ ಹಾಗೂ ಮಹಿಳೆಯರಿಗೆ ಹಿಮ್ಮುಖ ನಡಿಗೆ ಸ್ಪರ್ಧೆ ನಡೆಯಿತು.
ಸಂಸ್ಥೆಯ ಸ್ಥಾಪಕ ಚಂದ್ರಶೇಖರ ಶೆಟ್ಟಿ, ಗೌರವಾಧ್ಯಕ್ಷ ಡಾ| ಅರುಣೋದಯ ರೈ, ಸಂಚಾಲಕ ಕರುಣಾಕರ ಶೆಟ್ಟಿ, ಉಪಾಧ್ಯಕ್ಷರಾದ ಸುಭಾಷ್ ಶೆಟ್ಟಿ ಮತ್ತು ಶಂಕರ್ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಜತೆ ಕೋಶಾಧಿಕಾರಿ ಸೀತಾರಾಮ ಸುವರ್ಣ, ಕೋಶಾಧಿಕಾರಿ ಗುಣಪಾಲ್ ಶೆಟ್ಟಿ, ಜತೆ ಕೋಶಾಧಿಕಾರಿ ಚಂದ್ರಶೇಖರ ಕುಲಾಲ್, ಇತರ ಉಪಸಮಿತಿಯ ಪದಾಧಿಕಾರಿಗಳಾದ ಆಶಾ ಶೆಟ್ಟಿ, ಸುಮಂಗಲಾ ಕಣಂಜಾರು, ನಯನಾ ಶೆಟ್ಟಿ, ಅರುಣ್ ಶೆಟ್ಟಿ ಪಣಿಯೂರು, ರಾಜೇಶ್ ಶೆಟ್ಟಿ ಕಾಪುಕಲ್ಯ, ಗಣೇಶ್ ಅಂಚನ್, ಸರ್ವ ಸದಸ್ಯರು, ಮಹಿಳಾ ಸದಸ್ಯೆಯರು ಸಹಕರಿಸಿದರು.
ಚಿತ್ರ-ವರದಿ: ರಮೇಶ್ ಅಮೀನ್