ಬೆಂಗಳೂರು: ಚುನಾವಣೆ ಮುಗಿದು ಹೊಸ ಸರಕಾರ ರಚನೆಯಾದ ಬೆನ್ನಲ್ಲೇ 224 ಶಾಸಕರಿಗೂ ಜೂನ್ 30ರೊಳಗೆ ಆಸ್ತಿ ವಿವರ ಸಲ್ಲಿಸಲು ಲೋಕಾಯುಕ್ತ ನ್ಯಾ| ಬಿ. ಎಸ್. ಪಾಟೀಲ್ ಗಡುವು ನೀಡಿದ್ದಾರೆ.
ಆದೇಶ ನೀಡಿ 15 ದಿನ ಕಳೆದರೂ ಶಾಸಕರು ಆಸ್ತಿ ವಿವರ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳ ಶಾಸಕರ ಆಸ್ತಿ ವಿವರ ಪಡೆದು ಸಲ್ಲಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಲೋಕಾಯುಕ್ತರು ಸೂಚನೆ ನೀಡಿದ್ದಾರೆ.
ಮೊದಲ ಬಾರಿ ಆಯ್ಕೆಯಾದ ಶಾಸಕರು ಆಸ್ತಿ ವಿವರ ಸಲ್ಲಿಸುವುದರ ಜತೆಗೆ ಪುನರಾಯ್ಕೆಯಾದವರು ಮತ್ತೂಮ್ಮೆ ಆಸ್ತಿ ವಿವರ ಸಲ್ಲಿಸಬೇಕಾಗಿದೆ. ಒಂದು ವೇಳೆ ಜೂ. 30ರೊಳಗೆ ಸಲ್ಲಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಲೋಕಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
ದಾಖಲೆ ಅಗತ್ಯ
ಈ ಬಾರಿ ಆಸ್ತಿ ವಿವರವನ್ನು ದಾಖಲೆ ಸಹಿತ ಸಲ್ಲಿಸಬೇಕು. ಕಳೆದ ಬಾರಿ ಶಾಸಕರು ಸರಿಯಾದ ಮಾದರಿಯಲ್ಲಿ ಆಸ್ತಿ ವಿವರ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಸಮಸ್ಯೆ ಆಗಬಾರದೆಂದು ವಂದಿತಾ ಶರ್ಮಾ ಅವರಿಗೆ ಸೂಚಿಸಲಾಗಿದೆ.
ಜೂನ್‌ಗಿಂತ ಮುಂಚಿತವಾಗಿ ಪ್ರತಿ ವರ್ಷವೂ ತನ್ನ ಮತ್ತು ಕುಟುಂಬ ಸದಸ್ಯರ ಆಸ್ತಿ ವಿವರಗಳನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕಾಗಿದೆ. ಸಲ್ಲಿಸದಿದ್ದಲ್ಲಿ ರಾಜ್ಯಪಾಲರಿಗೆ ವರದಿ ಸಲ್ಲಿಸಲಾಗುತ್ತದೆ.