Advertisement

Karnataka Lok Sabha Poll: ಮೇ 7ಕ್ಕೆ 2ನೇ ಹಂತದ ಮತದಾನ: ಮತ್ತೆ ಬಸ್‌ ದರ ದುಪ್ಪಟ್ಟು

05:34 PM May 03, 2024 | Team Udayavani |

■ ಉದಯವಾಣಿ ಸಮಾಚಾರ
ಬೆಂಗಳೂರು: ಲೋಕಸಭಾ ಚುನಾವಣೆ ಮೊದಲ ಹಂತದ ಸಂದರ್ಭದಲ್ಲಿನ ಬಸ್‌ ಟಿಕೆಟ್‌ ದರದ ಸುಲಿಗೆ ಎರಡನೇ ಹಂತದ
ಚುನಾವಣೆಯಲ್ಲೂ ಮುಂದುವರಿದಿದೆ. ಬಸ್‌ ದರ ಹೆಚ್ಚಳದಿಂದಾಗಿ ಮತದಾರರಿಗೆ ತಮ್ಮ ಹಕ್ಕು ಚಲಾವಣೆ ದುಬಾರಿಯಾಗಿ
ಪರಿಣಮಿಸಲಿದೆ.

Advertisement

ಮೇ 7ರಂದು ರಾಜ್ಯದಲ್ಲಿ 2ನೇ ಹಂತದ ಮತದಾನ ನಡೆಯಲಿದ್ದು, ಮತ ಚಲಾಯಿಸಲು ಆಯಾ ಕ್ಷೇತ್ರಗಳಿಗೆ ತೆರಳಲು ಜನರು ಸಿದ್ಧವಾಗಿದ್ದರೆ, ಮತ್ತೊಂದೆಡೆ ಖಾಸಗಿ ಬಸ್‌ನವರು ಟಿಕೆಟ್‌ ದರ ಹೆಚ್ಚಿಸಲು ಕಾದು ಕುಳಿತಿದ್ದಾರೆ.

ಇಂದು ರಾತ್ರಿಯೇ ಊರಿಗೆ ತೆರಳಲು ಸಿದ್ಧತೆ: ಶಿವಮೊಗ್ಗ, ದಾವಣಗೆರೆ, ಬೀದರ್‌, ಕಲಬುರಗಿ, ವಿಜಯಪುರ, ರಾಯಚೂರು,
ಬಳ್ಳಾರಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ ಈ 14 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದ ಚುನಾವಣೆ ನಡೆಯಲಿದೆ.

ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಲಕ್ಷಾಂತರ ಮಂದಿ ನೆಲೆಸಿದ್ದು, ಮಂಗಳವಾರದ ಚುನಾವಣೆಗೆ ಶುಕ್ರವಾರ ರಾತ್ರಿಯೇ ತಮ್ಮ-ತಮ್ಮ ಊರುಗಳಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದಾರೆ.

ಆಯೋಗವಾದರೂ ಕ್ರಮ ಕೈಗೊಳ್ಳಲಿ:
ಮೊದಲ ಹಂತದ ಚುನಾವಣಾ ವೇಳೆ ಸಾರಿಗೆ ಇಲಾಖೆಯು 1,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದ್ದರೂ ಖಾಸಗಿ ಬಸ್‌ನವರು ಸಾಮಾನ್ಯ ದಿನಗಳಿಗಿಂತ ಎರಡು ಪಟ್ಟು ಹೆಚ್ಚು ಟಿಕೆಟ್‌ ದರ ಹೆಚ್ಚಿಸಿದ್ದರು. 2ನೇ ಹಂತದ ಚುನಾವಣೆಯೊಳಗೆ ಹೆಚ್ಚಿನ ಟಿಕೆಟ್‌ ದರ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿತ್ತು.

Advertisement

ಆದರೆ, ವಿಶೇಷ ಹಬ್ಬಗಳ ವೇಳೆ, ಮೊದಲ ಹಂತದ ಚುನಾವಣೆಯಲ್ಲಿಯೂ ಕ್ರಮ ಕೈಗೊಳ್ಳಲಿಲ್ಲ. ಈಗಲೂ ಕಣ್ಣುಮುಚ್ಚಿ
ಕುಳಿತಿದೆ. ಈ ಕುರಿತು ಚುನಾವಣಾ ಆಯೋಗವಾದರೂ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಪ್ರಯಾಣಿಕರದ್ದಾಗಿದೆ.

ರಾಜಧಾನಿ ಬೆಂಗಳೂರಿನಿಂದ ವಿಜಯಪುರಕ್ಕೆ ಸಾಮಾನ್ಯ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ಟಿಕೆಟ್‌ ದರ 670 ರೂ. ಹಾಗೂ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ನಲ್ಲಿ 850 ರೂ. ಇದ್ದರೆ, ಖಾಸಗಿ ಬಸ್‌ ಗಳ ಟಿಕೆಟ್‌ ದರ 850 ರೂ.ನಿಂದ 1,200
ರೂ.ವರೆಗೆ ಹಾಗೂ ವಾರಾಂತ್ಯದಲ್ಲಿ 1,000 ರೂ.ಗಳಿಂದ 1,400 ರೂ.ವರೆಗೆ ಇರಲಿದೆ. ವಿಶೇಷ ಹಬ್ಬಗಳ ಸಂದರ್ಭದಲ್ಲಿ 2,500 ರಿಂದ 2,800 ರೂ.ವರೆಗೂ ಹೆಚ್ಚಿಸಿರುವ ಉದಾಹರಣೆಗಳು ಇವೆ.

ಚುನಾವಣೆ ಸಂದರ್ಭದಲ್ಲಿ ವಿವಿಧ ಖಾಸಗಿ ಬಸ್‌ಗಳು ಟಿಕೆಟ್‌ ದರ ಹೆಚ್ಚಳ ಮಾಡಿರುವ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಆಯುಕ್ತರಿಗೆ ಸೂಚನೆ ನೀಡಲಾಗುವುದು.
●ಮನೋಜ್‌ಕುಮಾರ್‌ ಮೀನಾ, ರಾಜ್ಯ
ಮುಖ್ಯ ಚುನಾವಣಾಧಿಕಾರಿ

ಸಾಮಾನ್ಯ ದಿನ ಹಾಗೂ ವಾರಾಂತ್ಯದ ಪ್ರಯಾಣಕ್ಕೆ ಹೋಲಿಸಿದರೆ, ಚುನಾವಣೆ ಹಿನ್ನೆಲೆಯಲ್ಲಿ ಬಸ್‌ಗಳ ಟಿಕೆಟ್‌ ದರ ದುಪ್ಪಟ್ಟು
ಆಗಿದ್ದು, ನಮ್ಮ ಜೇಬು ಸುಡುವಂತಾಗಿದೆ. ಒಬ್ಬರು, ಒಮ್ಮೆ ಊರಿಗೆ ಹೋಗಿ ಬರಲು ಸುಮಾರು 5 ಸಾವಿರ ಹಣ ಬೇಕಾಗುತ್ತದೆ. ಈ ಹಣದುಬ್ಬರದ ಮಧ್ಯೆ ಊರಿಗೆ ಹೋಗಲು ಸಾಧ್ಯವಿಲ್ಲ.
●ಪೂಜಾ ನಾಯಕ್‌, ಬೆಂಗಳೂರು ನಿವಾಸಿ
(ಮೂಲ ವಿಜಯಪುರ)

Advertisement

Udayavani is now on Telegram. Click here to join our channel and stay updated with the latest news.

Next