ಬೆಂಗಳೂರು: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ದಿಲ್ಲಿ ವಿಶೇಷ ಪ್ರತಿನಿಧಿಗಳಿಗೆ ಲಾಭದಾಯಕ ಹುದ್ದೆಯಿಂದ ವಿನಾಯಿತಿ ನೀಡುವ ಸಲುವಾಗಿ ಕರ್ನಾಟಕ ವಿಧಾನಮಂಡಲ (ಅನರ್ಹತೆ ನಿವಾರಣೆ ತಿದ್ದುಪಡಿ) ಮಸೂದೆ-2023ಕ್ಕೆ ವಿಧಾನಸಭೆ ಅನುಮೋದನೆ ನೀಡಿತು.
ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರ ಹುದ್ದೆಗಳನ್ನು ಲಾಭದಾಯಕವಲ್ಲ ಎಂಬುದನ್ನು ನಿರೂಪಿಸಿ, ಕಾನೂನು ರಕ್ಷಣೆ ನೀಡುವ ಸಲುವಾಗಿ ಈ ಮಸೂದೆಯನ್ನು ಮಂಡಿಸಲಾಗಿತ್ತು. ಮುಂದಿನ ಹಂತದಲ್ಲಿ ವಿಧಾನಪರಿಷತ್ತಿನ ಮುಂದೆ ಮಂಡನೆಯಾಗಲಿದೆ.
ವಿಧೇಯಕದ ಮೇಲಿನ ಚರ್ಚೆ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಈಗಾಗಲೇ ಎರಡೂ ಹುದ್ದೆಗಳಿಗೆ ನೇಮಕ ಆಗಿದೆ. ಈ ಹಂತದಲ್ಲಿ ಮಸೂದೆ ಮಂಡಿಸಿರುವುದು ಎಷ್ಟು ಸರಿ? ನೇಮಕ ಆಗುವ ಮೊದಲೇ ಈ ಪ್ರಕ್ರಿಯೆ ನಡೆಸಬೇಕಿತ್ತು. ಸರಕಾರಕ್ಕೆ ಅಷ್ಟೂ ವಿವೇಕ ಇಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾನೂನು ಮಂತ್ರಿ ಎಚ್.ಕೆ. ಪಾಟೀಲ್, ಮೇ ತಿಂಗಳಿಂದಲೇ ಅನ್ವಯಿಸುವಂತೆ ಮಸೂದೆಯಲ್ಲಿ ಉಲ್ಲೇಖೀಸಿದೆ. ನೇಮಕಾತಿ ಇತ್ತೀಚೆಗೆ ಆಗಿರುವುದು. ಹೀಗಾಗಿ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಬಳಿಕ ಧ್ವನಿಮತದ ಮೂಲಕ ಮಸೂದೆಗೆ ಅಂಗೀಕಾರ ದೊರೆಯಿತು.
ಪಾಪ ಜಯಚಂದ್ರರಿಗೇಕೆ ಈ ಶಿಕ್ಷೆ?
ಮಸೂದೆ ಬಗ್ಗೆ ಬೆಳಕು ಚೆಲ್ಲುತ್ತಿದ್ದ ಬಸವರಾಜ ಬೊಮ್ಮಾಯಿ, ಜಯಚಂದ್ರ ಈ ಸದನದ ಹಿರಿಯ ಶಾಸಕರು. 1978ರಲ್ಲೇ ಶಾಸಕರಾದವರು. ಅವರನ್ನು ಮಂತ್ರಿ ಮಾಡುತ್ತೀರಿ ಎಂದುಕೊಂಡರೆ ದಿಲ್ಲಿ ವಿಶೇಷ ಪ್ರತಿನಿಧಿ ಮಾಡಿದ್ದೀರಿ. ಅವರು ಸ್ಪೀಕರ್ ಸ್ಥಾನವನ್ನೇ ಒಪ್ಪಿರಲಿಲ್ಲ. ಇದನ್ನು ಒಪ್ಪಿದರೆ? ಅಲ್ಲಿ ವಿಪರೀತ ಚಳಿ, ವಿಪರೀತ ಬಿಸಿಲು. ಈ ವಯಸ್ಸಲ್ಲಿ ಅವರನ್ನು ಅಲ್ಲಿಗೆ ಕಳುಹಿಸುವುದೇ? ಅವರಿಗೇಕೆ ಈ ಶಿಕ್ಷೆ? ಅಲ್ಲೇನು ಮಾಡುತ್ತಾರೆ? ಕರ್ನಾಟಕ ಭವನದಲ್ಲಿ ಒಂದು ಕೊಠಡಿಯಲ್ಲಿ ಇರಬೇಕಷ್ಟೇ ಎಂದರು.
ಇದಕ್ಕೆ ಆರಗ ಜ್ಞಾನೇಂದ್ರ ಕೂಡ ಧ್ವನಿಗೂಡಿಸಿದರು. ಮಧ್ಯಪ್ರವೇಶಿಸಿದ ಅಪ್ಪಾಜಿ ನಾಡಗೌಡ, ನಾನೂ ವಿಶೇಷ ಪ್ರತಿನಿಧಿಯಾಗಿದ್ದೆ. ಇಲ್ಲಿನ ಸಚಿವರು ಎಲ್ಲದಕ್ಕೂ ದಿಲ್ಲಿಗೆ ಓಡಾಡಬಾರದು ಎಂದು ನೇಮಿಸುವುದು ಎನ್ನುತ್ತಿದ್ದಂತೆ, ಹಾಗಿದ್ದರೆ ಅವರು ಮಂತ್ರಿಗಳ ಪ್ರತಿನಿಧಿಯೇ ಎಂಬ ಮರು ಪ್ರಶ್ನೆ ಬಂತು. ಇದೆಲ್ಲವನ್ನೂ ಕೇಳಿಸಿಕೊಂಡು ಕುಳಿತಿದ್ದ ಜಯಚಂದ್ರ ನಕ್ಕು ಸುಮ್ಮನಾದರು.