Advertisement

Karnataka: ಇಂದಿನಿಂದ ವಿಧಾನಮಂಡಲ ಅಧಿವೇಶನ

11:17 PM Feb 11, 2024 | Pranav MS |

ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನಡೆಯಲಿರುವ ಈ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ಪಾಲಿಗೆ ಪ್ರತಿಷ್ಠೆ ಆಗಿದೆ. ದಿಲ್ಲಿಯಲ್ಲಿ ನಡೆದ ಕರ ಸಮರ ಈಗ ವಿಧಾನಮಂಡಲವನ್ನೂ ಪ್ರವೇಶಿಸಲಿದೆ. ಆಡಳಿತ ಮತ್ತು ವಿಪಕ್ಷಗಳ ರಾಜಕೀಯ ಜಿದ್ದಾಜಿದ್ದಿಗೆ ಸದನ ವೇದಿಕೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮುಂದಾಳತ್ವದಲ್ಲಿ ಉಭಯ ಪಕ್ಷಗಳ ನಡುವೆ ಕಾದಾಟ ನಡೆಯವುದು ನಿಚ್ಚಳ.

Advertisement

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇತ್ತೀಚೆಗೆ ಯುಪಿಎ ಅವಧಿ ಮತ್ತು ಎನ್‌ಡಿಎ ಅವಧಿ ಹೋಲಿಕೆ ಮಾಡಿ ಶ್ವೇತಪತ್ರ ಹೊರಡಿಸಿದ್ದರೆ, ಕಾಂಗ್ರೆಸ್‌ ಕಪ್ಪುಪತ್ರದ ಮೂಲಕ ತಿರುಗೇಟು ಕೊಟ್ಟಿತ್ತು. ಅದರ ತ್ವದಿರುದ್ಧ ಪ್ರಹಸನ ರಾಜ್ಯ ವಿಧಾನಸಭೆಯಲ್ಲೂ ನಡೆಯಲಿದೆ, ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಶ್ವೇತಪತ್ರ ಹೊರಡಿಸಿದರೆ, ವಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಸೇರಿ ಸರಕಾರದ ವಿರುದ್ಧ ಕಪ್ಪುಪತ್ರ ಹೊರಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇದರ ಜತೆಗೆ ರಾಜ್ಯ ಸರಕಾರದಲ್ಲಿನ ಭ್ರಷ್ಟಾಚಾರ, ದುರಾಡಳಿತ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವೈಫ‌ಲ್ಯ, ಹದಗೆಟ್ಟ ಆರ್ಥಿಕ ಸ್ಥಿತಿ, ಅಭಿವೃದ್ಧಿಗೆ ಯೋಜನೆಗಳಿಗೆ ಅನುದಾನದ ಕೊರತೆ, ಶಾಸಕರಿಗೆ ಅನುದಾನ ಬಿಡುಗಡೆ ಆಗದಿರುವುದು, ಬರ ನಿರ್ವಹಣೆ ಗುತ್ತಿಗೆದಾರರ ಕಮಿಷನ್‌ ಆರೋಪ, ಅಲ್ಪಸಂಖ್ಯಾತರ ಒಲೈಕೆ ರಾಜಕಾರಣ ಇತ್ಯಾದಿ ವಿಚಾರಗಳನ್ನು ಇಟ್ಟುಕೊಂಡು ಸರಕಾರದ ಮೇಲೆ ಸವಾರಿ ಮಾಡಲು ವಿಪಕ್ಷಗಳು ರಣತಂತ್ರ ರೂಪಿಸಿದ್ದರೆ, ಕೇಂದ್ರ ಸರಕಾರದಿಂದ ಅನುದಾನ ತಾರತಮ್ಯ ಮತ್ತು ಸರಕಾರದ ಸಾಧನೆಗಳು, ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬಗ್ಗೆ ಅಂಕಿ-ಅಂಶಗಳ ಸೇಮತ ವಿಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತಾರೂಢ ಕಾಂಗ್ರೆಸ್‌ ಪ್ರತಿತಂತ್ರ ಹೆಣೆದಿದೆ.

ಮಂಡ್ಯ ಜಿಲ್ಲೆ ಕೆರಗೋಡು ಹನುಮಧ್ವಜ ವಿವಾದ, ದೇಶ ವಿಭಜಿಸುವ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಹೇಳಿಕೆ, ವಿಭಜನೆಯ ಮಾತನಾಡುವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂಬ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿಕೆಯೂ ಸದನದಲ್ಲಿ ಸದ್ದು ಮಾಡಿ, ಆಡಳಿತ ಮತ್ತು ವಿಪಕ್ಷಗಳ ಜಂಗೀ ಕುಸ್ತಿಗೆ ಸದನ ಅಂಕಣವಾಗಲಿದೆ.
ಸರಕಾರದ ಸಾಧನೆ

ಸಮರ್ಥನೆಗೆ ಕಾಂಗ್ರೆಸ್‌ ಪ್ಲಾನ್‌
ಕೇಂದ್ರ ಸರಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯವನ್ನು ಗಟ್ಟಿಧ್ವನಿಯಲ್ಲಿ ಹೇಳುವುದರ ಜೊತೆಗೆ ರಾಜ್ಯ ಸರಕಾರ ಸಾಧನೆಗಳನ್ನು ಪ್ರತಿ ಹಂತದಲ್ಲಿ ಸಮರ್ಥಿಸಿಕೊಳ್ಳಲು ಕಾಂಗ್ರೆಸ್‌ ಪ್ಲಾನ್‌ ಮಾಡಿಕೊಂಡಿದೆ. ಸರಕಾರದ ವಿರುದ್ಧ ವಿಪಕ್ಷಗಳು ಆರೋಪಗಳನ್ನು ಮಾಡಿದಾಗ ಅವರ ವಿರುದ್ಧ ಮುಗಿಬೀಳುವಂತೆ ಶಾಸಕರಿಗೆ ಸಿಎಂ, ಡಿಸಿಎಂ ಸಂದೇಶ ರವಾನಿಸಿದ್ದಾರೆ. ಪ್ರತಿ ಹಂತದಲ್ಲೂ ಸರಕಾರ ಮತ್ತು ಪಕ್ಷದ ನಿಲುವು ಸಮರ್ಥಿಸಿಕೊಳ್ಳಬೇಕು ಎಂದು ಕೈ ಶಾಸಕರಿಗೆ ಸೂಚನೆ ನೀಡಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತವೆ.

Advertisement

ಸರಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸಜ್ಜು
ಸರಕಾರವನ್ನು ಕಟ್ಟಿ ಹಾಕಲು ಬಿಜೆಪಿ ಕೆಲವು ಅಸ್ತ್ರಗಳನ್ನು ತನ್ನ ಬತ್ತಳಿಕೆಯಲ್ಲಿ ಜೋಡಿಸಿಟ್ಟುಕೊಂಡಿದೆ. ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿನ ವೈಫ‌ಲ್ಯ, ಬರ ನಿರ್ವಹಣೆ ಕೊರತೆ, ಹಳಿತಪ್ಪಿದ ಆರ್ಥಿಕ ಸ್ಥಿತಿ, ಕಾನೂನು ಸುವ್ಯಸ್ಥೆ, ಹಿಂದೂ ವಿರೋಧಿ ಧೋರಣೆ, ಅಲ್ಪಸಂಖ್ಯಾಕರ ಓಲೈಕೆ ಈ ವಿಚಾರಗಳನ್ನು ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಸರಕಾರದ ವಿರುದ್ಧ ಮುಗಿಬೀಳಲು ಸಜ್ಜುಗೊಂಡಿದೆ. ನನ್ನ ತೆರಿಗೆ; ನನ್ನ ಹಕ್ಕು ಅಭಿಯಾನಗಳ ಮೂಲಕ ಕೇಂದ್ರ ಸರಕಾರಕ್ಕೆ ಕಪ್ಪುಚುಕ್ಕೆ ಆಗಂದಂತೆ ರಾಜ್ಯ ಸರಕಾರವನ್ನು ಕಟ್ಟಿ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌ ರಣತಂತ್ರ ರೂಪಿಸಿದ್ದಾರೆ.

“ಪೂರ್ಣ ಪ್ರಮಾಣ”ದಲ್ಲಿ ಬಿಜೆಪಿ ಸಜ್ಜು

ವಿಧಾನಸಭಾ ಚುನಾವಣ ಫ‌ಲಿತಾಂಶದ ಅನಂತರ ವಿಪಕ್ಷ ಸ್ಥಾನ ಹಿಡಿದ ಬಿಜೆಪಿ, ಉಭಯ ಸದನಗಳಲ್ಲಿ ವಿಪಕ್ಷ ನಾಯಕ, ಉಪನಾಯಕ, ಸಚೇತಕರಿಲ್ಲದೆ ಎರಡು ಅಧಿವೇಶನಗಳನ್ನು ಎದುರಿಸಿತ್ತು. ಈ ಬಾರಿ ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಲ್ಲಿ ಪೂರ್ಣಪ್ರಮಾಣದ ನಾಯಕತ್ವದೊಂದಿಗೆ ಪ್ರತಿಪಕ್ಷದ ದಾಳ ಉರುಳಿಸಲು ಸನ್ನದ್ಧವಾಗಿದೆ. ಪ್ರತಿಪಕ್ಷ ನಾಯಕರಿಲ್ಲದೆ ಬಜೆಟ್‌ ಮಂಡನೆಯಾಗಿತ್ತಲ್ಲದೆ, ಮೊದಲ ಅಧಿವೇಶನದಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರೇ ಸರಕಾರದ ವಿರುದ್ಧ ಅತಿ ಹೆಚ್ಚು ದಾಳಿ ನಡೆಸಿ, ಅಧಿಕೃತ ವಿರೋಧ ಪಕ್ಷವಾಗಿದ್ದ ಬಿಜೆಪಿ ಮಂಕಾಗಿತ್ತು. ನಾಯಕತ್ವದ ಕೊರತೆಯಿಂದ ವಿಚಲಿತವಾಗಿದ್ದ ರಾಜ್ಯ ಬಿಜೆಪಿ, ಚಳಿಗಾಲ ಅಧಿವೇಶನದವರೆಗೆ ಅದರ ಬಿಸಿಯನ್ನು ಅನುಭವಿಸಿತ್ತು. ಹಲವು ಅಸ್ತ್ರಗಳನ್ನು ಬತ್ತಳಿಕೆಯಲ್ಲಿ ಭದ್ರ ಮಾಡಿಕೊಂಡಿರುವ ಬಿಜೆಪಿ, ಜೆಡಿಎಸ್‌ನೊಂದಿಗೆ ಜಂಟಿ ಹೋರಾಟ ನಡೆಸಲು ತಯಾರಾಗಿದೆ.

ಮೈತ್ರಿ ಪಕ್ಷದೊಂದಿಗೆ ಸೇರಿ ಜೆಡಿಎಸ್‌ ಹೋರಾಟ
ಅಧಿಕೃತವಾಗಿ ಎನ್‌ಡಿಎ ಕೂಟ ಸೇರಿದ ಬಳಿಕ ಜೆಡಿಎಸ್‌ಗೆ ಇದು ಮೊದಲ ಅಧಿವೇಶನ ಆಗಿದ್ದು, ಮೈತ್ರಿ ಪಕ್ಷದದೊಂದಿಗೆ ಸೇರಿ ಸರಕಾರದ ಮೇಲೆ ಸವಾರಿ ಮಾಡಲು ಜೆಡಿಎಸ್‌ ತನ್ನದೇ ಆದ ಕಾರ್ಯತಂತ್ರ ರೂಪಿಸಿದೆ. ಶ್ವೇತಪತ್ರ, ಗ್ಯಾರಂಟಿ ಅನುಷ್ಠಾನ, ಬರ ನಿರ್ವಹಣೆ, ಕುಡಿಯುವ, ಕಾನೂನು ಸುವ್ಯವಸ್ಥೆ ವಿಚಾರಗಳನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಸದನದಲ್ಲಿ ಚರ್ಚೆ ನಡೆಸಲಿದೆ. ಇದಲ್ಲದೇ ಕೆಪಿಎಸ್‌ಸಿ ನೇಮಕಾತಿ ವಿಳಂಬ ವಿಚಾರವನ್ನೂ ಜೆಡಿಎಸ್‌ ಪ್ರಸ್ತಾಪಿಸಲಿದೆ. ಇಡೀ ಅಧಿವೇನದ ಅವಧಿಯಲ್ಲಿ ಹೋರಾಟ ಹೇಗಿರಬೇಕು ಎಂಬ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ. ಆಧಿವೇಶನದಲ್ಲಿ ತಪ್ಪದೆ ಭಾಗವಹಿಸುವಂತೆ ಜೆಡಿಎಸ್‌ ಶಾಸಕರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತಾಕೀತು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next