Advertisement

ವರ್ಷಕ್ಕೆ ಹುಟ್ಟುವ 15 ಲಕ್ಷ ಗಂಡು ಕರುಗಳು ಏನು ಮಾಡುತ್ತೀರಿ: ಭೋಜೇಗೌಡ ಪ್ರಶ್ನೆ.

08:36 PM Mar 09, 2022 | Team Udayavani |

ವಿಧಾನಪರಿಷತ್ತು: ಗೋಸಂಪತ್ತು ರಕ್ಷಣೆಗೆ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಆದರೆ, ರಾಜ್ಯದಲ್ಲಿ ವರ್ಷಕ್ಕೆ 15 ಲಕ್ಷ ಗಂಡು ಕರುಗಳು ಹುಟ್ಟುತ್ತವೆ ಅವುಗಳ ಬಗ್ಗೆ ಸರ್ಕಾರದ ಯೋಚನೆ ಮತ್ತು ಯೋಜನೆ ಏನು ಎಂದು ಜೆಡಿಎಸ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಪ್ರಶ್ನಿಸಿದ್ದಾರೆ.

Advertisement

ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 16 ಹಾಲು ಒಕ್ಕೂಟಗಳಿವೆ, ಅವುಗಳಿಂದ ತಿಂಗಳಿಗೆ 10 ಸಾವಿರ ಕರುಗಳು ಬರುತ್ತವೆ. ಅದರಲ್ಲಿ ಶೇ.50 ರಷ್ಟು ಗಂಡು ಕರುಗಳು ಇರುತ್ತವೆ. ಅಲ್ಲದೇ ವೈಯುಕ್ತಿಕವಾಗಿ ರೈತರು, ಇನ್ನಿತರರು ಹೈನುಗಾರಿಕೆ ಮಾಡುತ್ತಾರೆ. ಅದರಂತೆ ರಾಜ್ಯದಲ್ಲಿ ವರ್ಷಕ್ಕೆ 15 ಲಕ್ಷ ಗಂಡು ಕರುಗಳು ಬರುತ್ತವೆ.

ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಅದಕ್ಕೆ ವಿರೋಧವಿಲ್ಲ. ಆದರೆ, ರಾಜ್ಯದಲ್ಲಿ ಪ್ರತಿ ವರ್ಷ 15 ಲಕ್ಷ ಗಂಡು ಕರುಗಳು ಬರುತ್ತವೆ. ಈ ಗಂಡು ಕರುಗಳನ್ನು ಯಾರೂ ಇಟ್ಟುಕೊಳ್ಳುವುದಿಲ್ಲ. ಅವುಗಳ ಸಾಕಣೆ, ನಿರ್ವಹಣೆ ಹೇಗೆ ಎಂಬ ಬಗ್ಗೆ ಬಜೆಟ್‌ನಲ್ಲಿ ಹೇಳಲಾಗಿಲ್ಲ. ಗೋಶಾಲೆ ತೆರೆಯುವ ಬಗ್ಗೆ ಸರ್ಕಾರ ಹೇಳಿದೆ. ಆದರೆ, ಜಿಲ್ಲೆಗೊಂದು ಅಲ್ಲ, ಹೋಬಳಿಗೊಂದು ಗೋಶಾಲೆ ತೆರೆಯಬೇಕಾಗುತ್ತದೆ. ಕಾಯ್ದೆ ಜಾರಿಯ ಸಾಧಕ-ಬಾಧಕಗಳ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು ಎಂದು ಭೋಜೇಗೌಡ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಎಸ್‌. ರವಿ, ಉತ್ತರ ಪ್ರದೇಶದ ಮೂರನೇ ಹಂತದ ಚುನಾವಣೆಯಲ್ಲಿ ಬಿಡಾಡಿ ದನಗಳು ಚುನಾವಣಾ ವಿಷಯವಾಗಿತ್ತು. ಧರ್ಮ-ದೇವರು, ಭಾವನಾತ್ಮಕತೆ ಎಲ್ಲವೂ ಸರಿ. ಆದರೆ, ಯಾವುದೇ ಮುಂದಾಲೋಚನೆ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಇದೊಂದು ಬಹುದೊಡ್ಡ ಸಮಸ್ಯೆಯಾಗಲಿದ್ದು, ಸರ್ಕಾರಕ್ಕೆ ಶಾಪವಾಗಲಿದೆ ಎಂದರು.

ಜನಸಂಖ್ಯೆ ಹೆಚ್ಚಾಯಿತು ಎಂದು ಹತ್ಯೆ ಮಾಡಲಿಕ್ಕಾಗುತ್ತಾ?
ಕಾಂಗ್ರೆಸ್‌ ಸದಸ್ಯ ಎಸ್‌. ರವಿ ಮಾತಿಗೆ ಆಕ್ಷೇಪಿಸಿದ ಬಿಜೆಪಿಯ ಎಂ.ಕೆ. ಪ್ರಾಣೇಶ್‌ ಹಾಗಿದ್ದರೆ ಹತ್ಯೆ ಮಾಡಬೇಕು ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದರು. ಹತ್ಯೆ ಮಾಡಿ ಎಂದು ನಾವು ಹೇಳುತ್ತಿಲ್ಲ. ಸಾಕುವವರು ಯಾರು ಎಂಬುದು ನಮ್ಮ ಪ್ರಶ್ನೆ. ನಿಮಗಿಂತ ಗೋವುಗಳ ಬಗ್ಗೆ ಗೌರವ, ಪೂಜನೀಯ ಭಾವನೆ ನಮಗಿದೆ. ಅಷ್ಟೊಂದು ಇದ್ದರೆ, ನಿಮ್ಮ ತಾಲೂಕಿನ ಎಲ್ಲಾ ಗಂಡು ಕುರುಗಳನ್ನು ನಿಮ್ಮ ತೋಟ, ಮನೆಯಲ್ಲಿ ಇಟ್ಟುಕೊಳ್ಳಿ ಎಂದು ರವಿ ಹೇಳಿದರು. ಇದರಿಂದ ಕೋಪಗೊಂಡ ಪ್ರಾಣೇಶ್‌, ನಿರ್ವಹಣೆ ಬಗ್ಗೆ ಸಲಹೆಗಳನ್ನು ಕೊಟ್ಟರೆ ಒಪ್ಪಬಹುದು. ಆದರೆ, ಈ ರೀತಿ ಮಾತನಾಡುವುದು ಸರಿಯಲ್ಲ. ಹತ್ಯೆ ಮಾಡುವುದೇ ಪರಿಹಾರವೇ? ಹಾಗಿದ್ದರೆ, ಮಲೆನಾಡಿನಲ್ಲಿ ಆನೆಗಳ ಹಾವಳಿ ಹೆಚ್ಚಿದೆ. ಹಾಗಂತ ಆನೆಗಳನ್ನು ಹತ್ಯೆ ಮಾಡಬೇಕಾ? ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದೆ. ಜನಸಂಖ್ಯೆ ಹೆಚ್ಚಾಯಿತು ಎಂದು ಜನರನ್ನು ಹತ್ಯೆ ಮಾಡಲು ಆಗುತ್ತಾ ಎಂದ ಪ್ರಶ್ನಿಸಿದರು.

Advertisement

ಜಿಲ್ಲೆಗೊಂದು ಗೋಶಾಲೆ ಎಲ್ಲಿ: ಹರಿಪ್ರಸಾದ್‌
“ಗೋಮಾತಾ ಹಮಾರಿ ಮಾತಾ’ ಎಂದು ಬಿಜೆಪಿಯವರು ಹೇಳುತ್ತಾರೆ. ಗೋರಕ್ಷಣೆ ಬಗ್ಗೆ ಮಾತನಾಡದಿದ್ದರೆ ಬಿಜೆಪಿಯವರಿಗೆ ನಡೆಯಲ್ಲ. ಹಸುವಿನ ಬಗ್ಗೆ ಬಿಜೆಪಿಯವರಿಗೆ ಬಹಳ ಪ್ರೀತಿ. ಆದರೆ, ಬಜೆಟ್‌ನಲ್ಲಿ ಆ ಪ್ರೀತಿ ಕಾಣುತ್ತಿಲ್ಲ. ಪಶೋಸಂಗೋಪನಾ ಇಲಾಖೆಯಲ್ಲಿ 1,300 ಹುದ್ದೆಗಳು ಖಾಲಿ ಇದ್ದಾರೆ. ಆದರೆ, ಗ್ರಾಮೀಣ ಭಾಗದಲ್ಲಿ 100 ಪಶು ವೈದ್ಯಾಲಯಗಳನ್ನು ಪ್ರಾರಂಭಿಸುವುದಾಗಿ ಸರ್ಕಾರ ಹೇಳಿದೆ, ಅದಕ್ಕೆ ಸಿಬ್ಬಂದಿಯನ್ನು ಹೇಗೆ ಹೊಂದಿಸುತ್ತಾರೆ. ಪ್ರತಿ ಜಿಲ್ಲೆಯಲ್ಲಿ ಒಂದು ಗೋಶಾಲೆ ತೆರೆಯವುದಾಗಿ ಸರ್ಕಾರ ಹೇಳಿತ್ತು. ಆದರೆ, ಒಂದೇ ಒಂದು ಜಿಲ್ಲೆಯಲ್ಲಿ ಗೋಶಾಲೆ ತೆರೆದಿಲ್ಲ. ಈಗ ಹೊಸದಾಗಿ 100 ಗೋಶಾಲೆ ತೆರೆಯವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಹರಿಪ್ರಸಾದ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next