Advertisement

Karnataka Legislative Council; ಕಾಂಗ್ರೆಸ್‌ ಅಭ್ಯರ್ಥಿ 2 ದಿನದಲ್ಲಿ ಅಂತಿಮ?

12:57 AM May 27, 2024 | Team Udayavani |

ಬೆಂಗಳೂರು: ವಿಧಾನಸಭಾ ಸದಸ್ಯ ಬಲದ ಆಧಾರದಲ್ಲಿ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಇರುವ ಸ್ಥಾನಗಳಿಗೆ ಆಕಾಂಕ್ಷಿಗಳ ಸಂಖ್ಯೆ 10 ಪಟ್ಟು ಹೆಚ್ಚಿರುವ ಕಾರಣ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಮೇ 28-29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ದಿಲ್ಲಿ ಪ್ರವಾಸ ಕೈಗೊಂಡಿದ್ದಾರೆ.

Advertisement

ಆಕಾಂಕ್ಷಿಗಳ ಪಟ್ಟಿಯೊಂದಿಗೆ ದಿಲ್ಲಿಗೆ ಹಾರಲಿರುವ ಉಭಯ ನಾಯಕರು ಎರಡು ದಿನಗಳ ಪ್ರವಾಸದಲ್ಲಿ ಹೈಕಮಾಂಡ್‌ ಜತೆ ಚರ್ಚಿಸಿ ಕಣಕ್ಕಿಳಿಸಬೇಕಾದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ. ಸಮುದಾಯ, ಹಿರಿತನ, ಹಿಂದಿನ ವಿಧಾನಸಭಾ ಚುನಾವಣೆ ಯಲ್ಲಿ ಪಕ್ಷದ ಗೆಲುವಿಗೆ ದುಡಿದ ಮುಂಚೂಣಿ ನಾಯಕರ ಸಹಿತ ಹಲವು ಲೆಕ್ಕಾಚಾರಗಳ ಆಧಾರದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ವಿಧಾನಸಭೆಯಲ್ಲಿರುವ ಸಂಖ್ಯಾಬಲದ ಆಧಾರದಲ್ಲಿ 11 ಸ್ಥಾನಗಳ ಪೈಕಿ ಏಳು ಸ್ಥಾನಗಳು ಸಿಗಲಿವೆ. ಅದರ ಹತ್ತು ಪಟ್ಟು ಅಂದರೆ 70 ಜನ ಆಕಾಂಕ್ಷಿಗಳು ಇದ್ದಾರೆ. ಇವರಲ್ಲಿ ಸಿಎಂ-ಡಿಸಿಎಂ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಮೂವರೂ ನಾಯಕರ ಬೆಂಬಲಿಗರು ಹೆಚ್ಚು-ಕಡಿಮೆ ಸಮಾನ ಸಂಖ್ಯೆಯಲ್ಲಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್ತಿನ ಮಾಜಿ ಸದಸ್ಯರು, ರಾಜ್ಯಸಭೆಯ ಮಾಜಿ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು ಪಟ್ಟಿಯಲ್ಲಿದ್ದು, ತಮ್ಮ ನಾಯಕರ ಮೂಲಕ ಮೇಲ್ಮನೆ ಸ್ಥಾನ ಗಿಟ್ಟಿಸಿಕೊಳ್ಳಲು ಲಾಬಿ ಮಾಡುತ್ತಿದ್ದಾರೆ. ಈ ಕುತೂಹಲಕ್ಕೆ ದಿಲ್ಲಿ ಪ್ರವಾಸದ ಅನಂತರ ತೆರೆಬೀಳಲಿದೆ.

ಶೆಟ್ಟರ್‌ ಸ್ಥಾನಕ್ಕೂ ಅಭ್ಯರ್ಥಿ ಅಂತಿಮ?
ಏಳರಲ್ಲಿ 2:2:3ರಂತೆ ಹಂಚಿಕೆ ಅಂದರೆ, ತಲಾ 2 ಸ್ಥಾನ ಗಳು ಸಿಎಂ-ಡಿಸಿಎಂ ಬೆಂಬಲಿಗರಿಗೆ ಹಾಗೂ ಉಳಿದ ಮೂರು ಸ್ಥಾನ  ಗಳನ್ನು ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಲಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೂ ಅಭ್ಯರ್ಥಿಯನ್ನು ಅಂತಿಮ ಗೊಳಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇಂದಿನಿಂದ ನಾಮಪತ್ರ ಸಲ್ಲಿಕೆ
ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳ ಆಯ್ಕೆಗೆ ಜೂ. 13ರಂದು ನಡೆಯಲಿರುವ ಚುನಾವಣೆಗೆ ಸೋಮವಾರ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಸಲು ಜೂ. 3 ಕೊನೆಯ ದಿನವಾಗಿದ್ದು, 4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ. 6 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂ. 13ರಂದು ಚುನಾವಣೆ ನಡೆದು ಅಂದೇ ಫ‌ಲಿತಾಂಶ ಪ್ರಕಟಗೊಳ್ಳಲಿದೆ. ಆಡಳಿತಾರೂಢ ಕಾಂಗ್ರೆಸ್‌ 7, ಬಿಜೆಪಿ 3 ಮತ್ತು ಜೆಡಿಎಸ್‌ 1 ಸ್ಥಾನ ಗೆಲ್ಲುವ ಅವಕಾಶವಿದ್ದು, ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿ ಆಯಾ ಪಕ್ಷಗಳ ನಾಯಕರು ನಿರತರಾಗಿದ್ದಾರೆ.

Advertisement

ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಲಿದೆಯೇ ಮೈತ್ರಿಪಕ್ಷ?
ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳ ಪೈಕಿ ಮೂರು ಸ್ಥಾನ ಗೆಲ್ಲುವ ಸಾಧ್ಯತೆಗಳಿರುವ ಬಿಜೆಪಿ ಹಾಗೂ 1 ಸ್ಥಾನ ಗೆಲ್ಲಬಲ್ಲ ಅವಕಾಶ ಇರುವ ಜೆಡಿಎಸ್‌ ಕೊನೆಯ ಕ್ಷಣದಲ್ಲಿ ಹೆಚ್ಚುವರಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಕುರಿತು ಗಂಭೀರ ಚಿಂತನೆ ನಡೆಸಿವೆ. ಬಿಜೆಪಿಯಲ್ಲಿ ಗೆಲ್ಲಬಲ್ಲ 3 ಸ್ಥಾನಗಳಿಗೆ 40ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಪಟ್ಟಿ ಅಂತಿಮ ಕಸರತ್ತು ನಡೆಸುವ ಸಲುವಾಗಿ ಒಂದು ಸುತ್ತಿನ ಮಾತುಕತೆ ನಡೆದಿದೆ. ಈಗ ರಾಜ್ಯ ಬಿಜೆಪಿ ಸಂಘಟನ ಕಾರ್ಯದರ್ಶಿ ಬದಲಾಗಿರುವುದರಿಂದ ಸದ್ಯದಲ್ಲೇ ರಾಜ್ಯ ನಾಯಕರು ಮತ್ತೂಂದು ಸುತ್ತಿನ ಸಮಾಲೋಚನೆ ನಡೆಸಲಿದ್ದು, ಅನಂತರ ಸಂಭಾವ್ಯರ ಪಟ್ಟಿಯನ್ನು 12ಕ್ಕೆ ಇಳಿಸಿ ಕೇಂದ್ರ ನಾಯಕರಿಗೆ ಕಳುಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next