Advertisement

ಪರಿಷತ್‌ ಸಮರದ ಕಣ ತಯಾರಿ

11:40 PM Nov 09, 2021 | Team Udayavani |

ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಡಿ.10ರಂದು 20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಹುತೇಕ ಕಡೆಗಳಲ್ಲಿ ಹಾಲಿ ಸದಸ್ಯರೇ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಆದರೂ, ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಲಾಬಿಯೂ ಆರಂಭವಾಗಿದೆ. ಈ ಕುರಿತ ಒಂದು ನೋಟ ಇಲ್ಲಿದೆ.

Advertisement

ಮೈಸೂರು-ಚಾಮರಾಜನಗರ- 2 ಸ್ಥಾನ
ಮೈಸೂರು, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್ತಿನ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸದ್ಯ ಜೆಡಿಎಸ್‌ನ ಸಂದೇಶ್‌ ನಾಗರಾಜ್‌ ಮತ್ತು ಕಾಂಗ್ರೆಸ್‌ನ ಎನ್‌.ಧರ್ಮಸೇನಾ ಅವರು ಸದಸ್ಯರಾಗಿದ್ದಾರೆ. ಟಿಕೆಟ್‌ಗಾಗಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಪ್ರಬಲ ಪೈಪೋಟಿ ಇದೆ. ಹಿಂದಿನ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಕೌಟಿಲ್ಯ ರಘು ಟಿಕೆಟ್‌ ಆಕಾಂಕ್ಷಿ. ವಿಜಯೇಂದ್ರ ಆಪ್ತರಾಗಿರುವುದರಿಂದ ಟಿಕೆಟ್‌ ಪಕ್ಕಾ ಅಂದುಕೊಂಡಿದ್ದಾರೆ. ಜತೆಗೆ, ಮುಡಾ ಮಾಜಿ ಅಧ್ಯಕ್ಷ, ವಿ.ಶ್ರೀನಿವಾಸ ಪ್ರಸಾದ್‌ ಅವರ ಆಪ್ತರಾಗಿರುವ ಸಿ.ಬಸವೇಗೌಡರೂ ಟಿಕೆಟ್‌ ಕೇಳಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಹಾಗೂ ಹಾಲಿ ಸದಸ್ಯರಾಗಿರುವ ಸಂದೇಶ್‌ ನಾಗರಾಜ್‌, ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ವಿಶೇಷವೆಂದರೆ, ಅವರು ಇನ್ನೂ ಜೆಡಿಎಸ್‌ಗೆ ರಾಜೀನಾಮೆಯನ್ನೂ ನೀಡಿಲ್ಲ. ಕಾಂಗ್ರೆಸ್‌ನಿಂದ ಹಾಲಿ ಸದಸ್ಯ ಎನ್‌.ಧರ್ಮಸೇನಾ ಅರ್ಜಿಗಾಗಿ ಬಯಸಿದ್ದಾರೆ. ಜತೆಗೆ ಸಿದ್ದರಾಮಯ್ಯ ಆಪ್ತ ಮರೀಗೌಡ, ಮಂಜೇಗೌಡ, ಡಾ. ತಿಮ್ಮಯ್ಯ ಅವರೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್‌ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಈಗ ಸೊರಗಿದೆ. ಈ ಪಕ್ಷದಿಂದ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎನ್‌.ನರಸಿಂಹಸ್ವಾಮಿ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ವರುಣಾದಿಂದ ಕಣಕ್ಕಿಳಿದಿದ್ದ ಅಭಿಷೇಕ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಬೆಂಗಳೂರು ನಗರ – ಒಂದು ಸ್ಥಾನ
ಬೆಂಗಳೂರು ನಗರ ಜಿಲ್ಲೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ನಾರಾಯಣಸ್ವಾಮಿ ಪ್ರಸ್ತುತ ಸದಸ್ಯರಾಗಿದ್ದು ಅವರು ಮತ್ತೂಮ್ಮೆ ಸ್ಪರ್ಧೆ ಬಯಸಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧೆಗೆ ಪೈಪೋಟಿ ಇಲ್ಲದಿದ್ದರೂ ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ದೊಡ್ಡ ಬಸವರಾಜು, ಗೋಪಿನಾಥರೆಡ್ಡಿ ಸೇರಿ ಮೂವರು ಆಕಾಂಕ್ಷಿಗಳಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ- 1 ಸ್ಥಾನ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್‌ನ ಎಸ್‌.ರವಿ ಪ್ರಸ್ತುತ ಸದಸ್ಯರಾಗಿದ್ದು ಅವರೂ ಪುನರಾಯ್ಕೆ ಬಯಸಿದ್ದಾರೆ. ಜೆಡಿಎಸ್‌ನಿಂದ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ಇ. ಕೃಷ್ಣಪ್ಪ ಸೋಲು ಅನುಭವಿಸಿದ್ದರು. ಈ ಬಾರಿ ಅವರೂ ಸೇರಿದಂತೆ ಜೆಡಿಎಸ್‌ನಲ್ಲಿ ಟಿಕೆಟ್‌ಗೆ ಪೈಪೋಟಿ ಇದೆ. ಬಿಜೆಪಿಯಿಂದಲೂ ಇಬ್ಬರು ಪ್ರಬಲ ಆಕಾಂಕ್ಷಿಗಳಿದ್ದಾರೆ.

ಕಲಬುರಗಿ-ಯಾದಗಿರಿ – 1 ಸ್ಥಾನ
ಬಿಜೆಪಿಯಿಂದ ಹಾಲಿ ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ ಬಿಜೆಪಿಯಿಂದ ಮತ್ತೆ ಸ್ಪರ್ಧಿಸುವ ಸಾಧ್ಯತೆಗಳೇ ಹೆಚ್ಚಿದೆ. ಎರಡೂ¾ರು ದಿನದೊಳಗೆ ಬಿಜೆಪಿ ಈ ಕುರಿತು ಅಧಿಕೃತವಾಗಿ ಪ್ರಕಟಿಸಲಿದೆ. ಬಿಜೆಪಿಯಿಂದ ಹಲವರು ಟಿಕೆಟ್‌ ಕೇಳಿದ್ದಾರೆ. ಸ್ಪರ್ಧಿಸುವ ಬಗ್ಗೆ ತಮ್ಮ ಅಭಿಪಾಷೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಕಳೆದ ಸಲ ಅಲ್ಲಮಪ್ರಭು ಪಾಟೀಲ ಸ್ಪರ್ಧಿಸಿದ್ದರು. ಈ ಬಾರಿ ಇವರು ಸ್ಪರ್ಧಿಸಲು ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ವಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಗ್ಗೆ ನಿರ್ಧಾರವಾಗಲಿದೆ.

Advertisement

ಕೊಡಗು – ಒಂದು ಸ್ಥಾನ
ಪ್ರಸ್ತುತ ಬಿಜೆಪಿಯ ಎಂ.ಪಿ. ಸುನಿಲ್‌ ಸುಬ್ರಮಣಿ ಅವರು ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಅವರು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್‌ ಅವರ ಸಹೋದರ. ಈ ಬಾರಿ ಅವರ ಮತ್ತೂಬ್ಬ ಸಹೋದರ ಸುಜಾ ಕುಶಾಲಪ್ಪ ಆಕಾಂಕ್ಷಿಯಾಗಿದ್ದಾರೆ. ಆದರೆ ಕುಟುಂಬದವರಿಗೆ ಮತ್ತೆ ಅವಕಾಶ ಕೊಡಬಾರದು ಎನ್ನುವುದು ಕಾರ್ಯಕರ್ತರ ಅಭಿಪ್ರಾಯ. ಕೊಡಗು ಜಿಲ್ಲೆಯಲ್ಲಿ ಬಿಜೆಪಿಯ ಆಕಾಂಕ್ಷಿಗಳ ಸಂಖ್ಯೆ 20ಕ್ಕೂ ಹೆಚ್ಚು. ಜಿಲ್ಲೆಯ ಎಲ್ಲ ಪಂಚಾಯತ್‌ಗಳಲ್ಲೂ ಬಿಜೆಪಿಯೇ ಬಹುಮತ ಪಡೆದಿರುವುದರಿಂದ ಮತ್ತೆ ಬಿಜೆಪಿಯಿಂದಲೇ ವಿಧಾನಪರಿಷತ್‌ಗೆ ಆಯ್ಕೆಯಾಗುವ ಎಲ್ಲ ಸಾಧ್ಯತೆಗಳಿವೆ.

ಇದನ್ನೂ ಓದಿ:ನಕ್ಸಲ್‌ ನಾಯಕ ಬಿ.ಜಿ. ಕೃಷ್ಣಮೂರ್ತಿ ಸೆರೆ

ಬೀದರ್‌ 1 ಸ್ಥಾನ
ಸದ್ಯ ಕಾಂಗ್ರೆಸ್‌ನಿಂದ ಹಾಲಿ ಸದಸ್ಯ ವಿಜಯ್‌ ಸಿಂಗ್‌ ಅವರು ಮತ್ತೂಮ್ಮೆ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಅಶೋಕ್‌ ಖೇಣಿ ಅವರನ್ನು ಕಣಕ್ಕಿಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಸಕ್ತಿ ತೋರಿದ್ದು, ಖೇಣಿ ಅವರು ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಹೀಗಾಗಿ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿರುವ ಸುಬ್ಟಾರೆಡ್ಡಿ ಕಣಕ್ಕಿಳಿಯುವ ಸಾಧ್ಯತೆ ಇದೆ.  ಕಮಲ ಪಾಳಯದಲ್ಲಿ ಆಕಾಂಕ್ಷಿತ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಮಾಜಿ ಸಚಿವ ದಿ| ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೆಸರು ಮುಂಚೂಣಿಯಲ್ಲಿದೆ. ಅದರೊಟ್ಟಿಗೆ ಈಚೆಗೆ ಜೆಡಿಎಸ್‌ನಿಂದ ಮರಳಿ ಬಿಜೆಪಿಗೆ ಸೇರಿರುವ ಪ್ರಕಾಶ ಖಂಡ್ರೆ ಮತ್ತು ಸದ್ಯ ಕೆಎಸ್‌ಐಐಡಿಸಿ ಅಧ್ಯಕ್ಷರಾಗಿರುವ ಡಾ| ಶೈಲೇಂದ್ರ ಬೆಲ್ದಾಳೆ ಅವರ ಹೆಸರುಗಳು ಸಹ ಸಧ್ಯ ಚರ್ಚೆಯ ಚಾವಡಿಯಲ್ಲಿವೆ.

ಬಳ್ಳಾರಿ- ವಿಜಯನಗರ – ಒಂದು ಸ್ಥಾನ
ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ ಹಾಲಿ ಸದಸ್ಯರಾಗಿದ್ದಾರೆ. ತಮಗೇ ಟಿಕೆಟ್‌ ಖಚಿತ ಎಂಬ ಆಧಾರದಲ್ಲಿ ಕೊಂಡಯ್ಯ ಅವರು ಪ್ರಚಾರ ಆರಂಭಿಸಿದ್ದಾರೆ  ಇವರ ಜತೆಗೆ ಜಿಪಂ ಸದಸ್ಯ ಮುಂಡ್ರಿಗಿ ನಾಗರಾಜ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಎಸ್‌. ಸ್ವಾಮಿ ಸಹ ಆಕಾಂಕ್ಷಿಗಳಾಗಿದ್ದಾರೆ. ಅತ್ತ ಬಿಜೆಪಿಯಲ್ಲಿ ಅಭ್ಯರ್ಥಿಯ ಹುಡುಕಾಟ ನಡೆದಿದೆ. ಕಳೆದ ಬಾರಿ ಪರಾಜಿತ ಅಭ್ಯರ್ಥಿ, ಹಾಲಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌, ಗೋನಾಳ್‌ ವಿರೂಪಾಕ್ಷಗೌಡ, ವೈ.ಎಂ.ಸತೀಶ್‌ ಸೇರಿ ಹಲವರು ಪಕ್ಷದ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಹಾಗೆಯೇ ಜಿಪಂ ಮಾಜಿ ಸದಸ್ಯ ಕೆ.ಎ.ರಾಮಲಿಂಗಪ್ಪ, ಬುಡಾ ಮಾಜಿ ಅಧ್ಯಕ್ಷ ದಮ್ಮೂರು ಶೇಖರ್‌, ಪಾಲಿಕೆ ಉಪಮೇಯರ್‌ ಶಶಿಕಲಾ ಕೃಷ್ಣಮೋಹನ್‌, ಅಯ್ನಾಳಿ ತಿಮ್ಮಪ್ಪ ಟಿಕೆಟ್‌ ಕೋರಿದ್ದಾರೆ. ಅಂತಿಮವಾಗಿ ಸಚಿವರಾದ ಶ್ರೀರಾಮುಲು, ಆನಂದ್‌ ಸಿಂಗ್‌ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ತುಮಕೂರು – 1 ಸ್ಥಾನ
ಹಾಲಿ ಸದಸ್ಯ ಜೆಡಿಎಸ್‌ನ ಬೆಮೆಲ್‌ ಕಾಂತರಾಜ್‌ ಪಕ್ಷ ತೊರೆದು ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ. ಹೀಗಾಗಿ ಜೆಡಿಎಸ್‌ ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿ ಪಕ್ಷವಿದೆ. ಜತೆಗೆ ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಕೆ.ಎನ್‌.ರಾಜಣ್ಣ  ಪುತ್ರ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಆರ್‌.ರಾಜೇಂದ್ರ, ಜಿ.ಪಂ. ಮಾಜಿ ಸದಸ್ಯ ಕೆಂಚಮಾ ರಯ್ಯ, ಯಲಚವಾಡಿ ನಾಗರಾಜ್‌, ಮಾಜಿ ಶಾಸಕ ಆರ್‌.ನಾರಾ ಯಣ್‌, ಡಾ.ಇಮಿ¤ಯಾಜ್‌ ಅಹಮದ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಎಂ.ಆರ್‌.ಹುಲಿನಾಯ್ಕರ್‌ ಹೆಸರು ಕೇಳಿ ಬರುತ್ತಿದೆ. ಈಗಿನ ವಾತಾವರಣ  ನೋಡಿದರೆ ಕಾಂಗ್ರೆಸ್‌-ಬಿಜೆಪಿ ಹಣಾಹಣಿಯಾಗುವ ಸಾಧ್ಯತೆ ಇದ್ದು,  ಜೆಡಿಎಸ್‌ ಅಭ್ಯರ್ಥಿಯ ಮೇಲೆ ಮುಂದಿನ ರಾಜಕೀಯ ನಡೆ ಇದೆ.

ಹಾಸನ – ಒಂದು ಸ್ಥಾನ
ಇಲ್ಲಿ ಕಾಂಗ್ರೆಸ್‌ನ ಎಂ.ಎ.ಗೋಪಾಲಸ್ವಾಮಿ ಅವರು ಹಾಲಿ ಸದಸ್ಯರಾಗಿದ್ದು, ಈ ಬಾರಿ ಜೆಡಿಎಸ್‌ನಿಂದ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ನಿಂದ ಗೋಪಲಸ್ವಾಮಿ ಅವರೇ ಸ್ಪರ್ಧಿಸಲು ಇಚ್ಚಿಸಿದರೆ, ಟಿಕೆಟ್‌ ಖಚಿತ. ಆದರೆ, ಇವರು ವಿಧಾನಸಭೆ ಚುನಾವಣೆಯಲ್ಲಿ ಶ್ರವಣ ಬೆಳಗೊಳದಿಂದ ಸ್ಪರ್ಧಿಸಲು ಇಚ್ಚಿಸಿದ್ದಾರೆ. ಹೀಗಾಗಿ ಚನ್ನರಾಯಪಟ್ಟಣದ ಶಂಕರ್‌, ಸಕಲೇಶಪುರದ ಬೈರಮುಡಿ ಚಂದ್ರು ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಬಹುದು. ಬಿಜೆಪಿಯಲ್ಲಿ ಅಭ್ಯರ್ಥಿಯನ್ನು ಹುಡುಕಬೇಕಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನ ಹಿರಿಯ ಮುಖಂಡ ಪಟೇಲ್‌ ಶಿವರಾಂ ಅವರನ್ನು ಗೋಪಾಲ ಸ್ವಾಮಿ ಅವರು ಪರಾಭವಗೊಳಿಸಿದ್ದರು. ಬಿಜೆಪಿಯ ರೇಣು ಕುಮಾರ್‌ ಮೂರನೇ ಸ್ಥಾನ ಪಡೆದಿದ್ದರು.

ರಾಯಚೂರು- ಕೊಪ್ಪಳ 1 ಸ್ಥಾನ
ಸದ್ಯ ಕಾಂಗ್ರೆಸ್‌ನ ಬಸವರಾಜ ಪಾಟೀಲ್‌ ಇಟಗಿ ಸದಸ್ಯರಾಗಿದ್ದಾರೆ. ಆದರೆ, ಇವರೇ ಈ ಬಾರಿ ಸ್ಪರ್ಧೆಗೆ ನಿರುತ್ಸಾಹ ತೋರಿದ್ದಾರೆ. ಅತ್ತ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಸಿ.ಎಸ್‌.ಚಂದ್ರಶೇಖರ್‌ ವಿಧಾನಪರಿಷತ್‌ಗೆ ಸ್ಪರ್ಧೆ ಮಾಡಲ್ಲ ಎಂದಿದ್ದರು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಹೊಸಬರ ಹಣಾಹಣಿ ಕಾಣಬಹುದಾಗಿದೆ. ಈ ಮಧ್ಯೆ ‌ುತ್ತು ಕಾಂಗ್ರೆಸ್‌ನಲ್ಲಿ ಹೊಸ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಶರಣೇಗೌಡ ಬಯ್ನಾಪುರ, ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹಾಲಾಪುರ, ಬಸವರಾಜ್‌ ರೆಡ್ಡಿ, ಶರಣೆಗೌಡ ಮಸರಕಲ್‌ ಆಕಾಂಕ್ಷಿಗಳಾಗಿದ್ದಾರೆ. ಶರಣೇಗೌಡ ಬಯ್ಯಾಪುರ, ರಾಮಣ್ಣ ಇರಬಗೇರಾ ನಡುವೆ ಒಬ್ಬರಿಗೆ ಕೈ ಟಿಕೆಟ್‌ ಸಿಗುವ ಸಾಧ್ಯತೆ ಇದೆ. ಬಿಜೆಪಿಯಿಂದ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್‌, ಕೊಪ್ಪಳದ ಸಿ.ಎಸ್‌.ಚಂದ್ರಶೇಖರ್‌, ಲಿಂಗಸೂಗೂರಿನ ಕೆ.ಎಂ.ಪಾಟೀಲ್‌, ವಿಶ್ವನಾಥ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಜೆಡಿಎಸ್‌ ಈ ಬಾರಿಯೂ ತಟಸ್ಥವಾಗಿ ಉಳಿಯುವ ಸಾಧ್ಯತೆ ಇದೆ.

ಬೆಳಗಾವಿ 2 ಸ್ಥಾನ
ಸದ್ಯ ಬಿಜೆಪಿಯ ಮಹಾಂತೇಶ ಕವಟಗಿಮಠ ಮತ್ತು ಪಕ್ಷೇತರ ಸದಸ್ಯ ವಿವೇಕರಾವ್‌ ಪಾಟೀಲ ಅವರ ಅವಧಿ ಮುಗಿಯಲಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚಿಂತೆ ಇಲ್ಲ. ಹಾಲಿ ಸದಸ್ಯರಿಗೆ ಟಿಕೆಟ್‌ ಕೊಡುವುದು ಬಹುತೇಕ ಅಂತಿಮವಾಗಿದೆ. ಜತೆಗೆ, ಲಖನ್‌ ಕೂಡ ತೆರೆಮರೆಯಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ಎರಡನೇ ಸ್ಥಾನಕ್ಕೆ ಅಭ್ಯರ್ಥಿಯನ್ನು ನಿಲ್ಲಿಸುವುದೇ ಆದರೆ ಇದಕ್ಕೆ ಲಖನ್‌ ಜಾರಕಿಹೊಳಿ ಹೆಸರನ್ನು ಪರಿಗಣಿಸಬೇಕು. ಕವಟಗಿಮಠ ಹಾಗೂ ಲಖನ್‌ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಹೋದರೆ ಎರಡೂ ಸ್ಥಾನ ಗೆಲ್ಲಬಹುದು. ಇನ್ನೊಂದು ಕಡೆ ಹಾಲಿ ಪಕ್ಷೇತರ ಸದಸ್ಯ ವಿವೇಕರಾವ್‌ ಪಾಟೀಲ ಗೊಂದಲದಲ್ಲಿದ್ದಾರೆ. ಪುನರಾಯ್ಕೆ ಬಯಸಿ ಕಾಂಗ್ರೆಸ್‌ ಟಿಕೆಟ್‌ ಕೇಳಿದ್ದ ವಿವೇಕರಾವ್‌ಗೆ ಪಕ್ಷದಿಂದ ಖಚಿತ ಭರವಸೆ ಸಿಕ್ಕಿಲ್ಲ. ನಿರಾಶರಾಗಿರುವ ವಿವೇಕರಾವ್‌ ಪಾಟೀಲ ಟಿಕೆಟ್‌ಗಾಗಿ ಬಿಜೆಪಿ ಬಾಗಿಲು ಬಡಿದಿದ್ದಾರೆ ಎಂಬುದು ಮೂಲಗಳ ಹೇಳಿಕೆ.  ಇನ್ನು ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಎರಡಂಕಿ ತಲುಪಿದೆ. ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಯುವ ಮುಖಂಡ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ, ಕಿರಣ ಸಾಧುನವರ, ಲಕ್ಷ್ಮಣರಾವ್‌ ಚಿಂಗಳೆ ಸೇರಿದಂತೆ ಹಲವರು ಟಿಕೆಟ್‌ ಕೋರಿ ಪಕ್ಷದ ವರಿಷ್ಠರ ಮನೆ ಬಾಗಿಲು ತಟ್ಟಿದ್ದಾರೆ.  ಮೂಲಗಳ ಪ್ರಕಾರ ಎರಡನೇ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದರೆ ಆಗ ತಾವೂ ಸಹ ಆಕಾಂಕ್ಷಿ ಎಂದು ಪಕ್ಷದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಮಂಡ್ಯ – ಒಂದು ಸ್ಥಾನ
ಸದ್ಯ ಜೆಡಿಎಸ್‌ನ ಎನ್‌.ಅಪ್ಪಾಜಿಗೌಡ ಅವರು ಸದಸ್ಯರಾಗಿದ್ದು ಪುನರಾಯ್ಕೆ ಬಯಸಿದ್ದಾರೆ. ಇವರ ಜತೆಗೆ ಜೆಡಿಎಸ್‌ನಿಂದ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರು ಅವರೂ ರೇಸ್‌ನಲ್ಲಿದ್ದಾರೆ. ಬಿಜೆಪಿಯಿಂದ ನಾಲ್ವರು ಆಕಾಂಕ್ಷಿತರಿದ್ದಾರೆ. ಬಿಜೆಪಿ ತಾಲೂಕು ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್‌, ಎಲೆಚಾಕನಹಳ್ಳಿ ಬಸವರಾಜು, ಅಂಬರೀಷ್‌, ಉಮೇಶ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಅತ್ತ ಕಾಂಗ್ರೆಸ್‌ನಿಂದ ಬಿ.ರಾಮಕೃಷ್ಣ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಚಿತ್ರದುರ್ಗ-ದಾವಣಗೆರೆ  – 1 ಸ್ಥಾನ
ಇಲ್ಲಿ ಸದ್ಯ ಕಾಂಗ್ರೆಸ್‌ನ ರಘು ಆಚಾರ್‌ ಸದಸ್ಯರಾಗಿದ್ದಾರೆ. ಮೂರು ಪಕ್ಷಗಳಲ್ಲಿ ಅಭ್ಯರ್ಥಿ ಗಳ ಪಟ್ಟಿ ದೊಡ್ಡದಿದೆ. 2010ರಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಾಗಿದ್ದು, 2013ರಲ್ಲಿ ಆಗಿನ ಸದಸ್ಯ ಜಿ.ಎಚ್‌.ತಿಪ್ಪಾರೆಡ್ಡಿ ಅವರು ವಿಧಾನಸಭೆಗೆ ಆಯ್ಕೆಯಾಗಿ ರಾಜೀನಾಮೆ ನೀಡಿದ್ದರು. ಆಗ ಪಕ್ಷೇತರ ಅಭ್ಯರ್ಥಿಯಾಗಿ ರಘು ಆಚಾರ್‌ ಕಣಕ್ಕಿಳಿದು ಗೆದ್ದಿದ್ದರು. 2016ರಲ್ಲಿ ರಘು ಆಚಾರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು, ಬಿಜೆಪಿಯ ಕೆ.ಎಸ್‌.ನವೀನ್‌ ವಿರುದ್ಧ ಗೆದ್ದಿದ್ದರು. ಸದ್ಯ ಬಿಜೆಪಿಯಿಂದ ಕೆ.ಎಸ್‌. ನವೀನ್‌, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್‌.ಲಿಂಗಮೂರ್ತಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‌ ಯಾದವ್‌ ಹಾಗೂ ಹೊಸದುರ್ಗ ಎಪಿಎಂಸಿ ಮಾಜಿ ಅಧ್ಯಕ್ಷ ಹೆಬ್ಬಳ್ಳಿ ಮಲ್ಲಿಕಾ ರ್ಜುನ್‌ ಹೆಸರುಗಳಿವೆ. ರಘು ಆಚಾರ್‌ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದಿದ್ದು, ಎಚ್‌. ಆಂಜನೇಯ, ಭೀಮಸಮುದ್ರದ ಜಿ.ಎಸ್‌. ಮಂಜುನಾಥ್‌ ಅಥವಾ ಹನುಮಲಿ ಷಣ್ಮುಖಪ್ಪ ಅವರಿಗೆ ಟಿಕೆಟ್‌ ನೀಡಬೇಕೆಂದು ಹೇಳಿದ್ದಾರೆ. ಜೆಡಿಎಸ್‌ನಲ್ಲಿ ಈವರೆಗೆ ಯಾವುದೇ ಅಭ್ಯರ್ಥಿಗಳ ಹೆಸರು ಹೊರ ಬಂದಿಲ್ಲ.

ಕೋಲಾರ-ಚಿಕ್ಕಬಳ್ಳಾಪುರ – 1 ಸ್ಥಾನ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಚುನಾವಣೆ ನಡೆಯಲಿದ್ದು, ಜೆಡಿಎಸ್‌ನ ಸಿ.ಆರ್‌.ಮನೋಹರ್‌ ಹಾಲಿ ಸದಸ್ಯರಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು 12ಕ್ಕೂ ಹೆಚ್ಚು ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಹಿಂದೆ ಸ್ಪರ್ಧಿಸಿದ್ದ ಅನಿಲ್‌ಕುಮಾರ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ, ವಿ.ಆರ್‌.ಸುದರ್ಶನ್‌ ಇತರರು ಪ್ರಮುಖರಾಗಿದ್ದಾರೆ. ಯಾರಿಗೂ ಟಿಕೆಟ್‌ ನಿರ್ಧಾರವಾಗಿಲ್ಲ. ಹಾಲಿ ವಿಧಾನ ಪರಿಷತ್‌ ಸದಸ್ಯರಾಗಿರುವ ಜೆಡಿಎಸ್‌ ಸದಸ್ಯ ಸಿ.ಆರ್‌.ಮನೋಹರ್‌ ಪಕ್ಷ ತೊರೆಯುವ ಮನಸ್ಥಿತಿಯಲ್ಲಿದ್ದಾರೆ. ಇವರನ್ನು ಉಳಿಸಿಕೊಳ್ಳಲು ಜೆಡಿಎಸ್‌ ಪ್ರಯಾಸ ಪಡುತ್ತಿದೆ. ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನ ಪಡುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯವರನ್ನು ಬಿಜೆಪಿ ಮೂಲಕ ಗೆಲ್ಲಿಸಿಕೊಳ್ಳುವ ಇರಾದೆ ಅಲ್ಲಿನ ಉಸ್ತುವಾರಿ ಸಚಿವ ಡಾ.ಸುಧಾಕರ್‌ದ್ದಾಗಿದೆ.

ದ.ಕನ್ನಡ- ಉಡುಪಿ – 2 ಸ್ಥಾನ
ಪ್ರಸ್ತುತ ಸಚಿವ ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) ಮತ್ತು ಮೇಲ್ಮನೆ ಸಭಾಪತಿಯಾಗಿದ್ದ ಕೆ.ಪ್ರತಾಪಚಂದ್ರ ಶೆಟ್ಟಿ (ಕಾಂಗ್ರೆಸ್‌) ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರು ಮತ್ತೆ ಅಭ್ಯರ್ಥಿಯಾಗು ವುದು ಬಹುತೇಕ ಖಚಿತ. ಕಾಂಗ್ರೆಸ್‌ ಪಕ್ಷದಿಂದ ಅಭ್ಯರ್ಥಿ ಬದಲಾವಣೆ ಯಾಗಲೂಬಹುದು. ಶ್ರೀನಿವಾಸ ಪೂಜಾರಿ ಎರಡು ಬಾರಿ ಪೂರ್ಣ ಅವಧಿ, ಒಂದು ಬಾರಿ ಮಧ್ಯಾಂತರ ಚುನಾವಣೆಯಲ್ಲಿ ಗೆದ್ದವರು. ಪ್ರತಾಪಚಂದ್ರ ಶೆಟ್ಟಿ ಮೂರು ಅವಧಿಗೆ ಸದಸ್ಯರಾಗಿದ್ದರು. ಬಿಜೆಪಿಯಲ್ಲಿ ಎರಡೂ ಸ್ಥಾನಗಳಿಗೆ ಸ್ಪರ್ಧಿಸಬೇಕೆಂಬ ಒಂದು ವಾದವಿದೆ. ಇದರ ಬಗ್ಗೆ ಖಚಿತ ನಿರ್ಧಾರವಾಗಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಎರಡೂ ಜಿಲ್ಲೆಗಳಿಂದ 11 ಆಕಾಂಕ್ಷಿಗಳಿದ್ದಾರೆ.

ಚಿಕ್ಕಮಗಳೂರು 1 ಸ್ಥಾನ
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್‌ ಆಯ್ಕೆಯಾಗಿದ್ದು, ವಿಧಾನ ಪರಿಷತ್‌ ಉಪ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ್ದರು. 2015ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ವಿರುದ್ಧ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್‌ ವಿಜಯ ಪತಾಕೆ ಹಾರಿಸಿದ್ದರು. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯಲಿದೆ. ಜೆಡಿಎಸ್‌, ಕಾಂಗ್ರೆಸ್‌ ಅಭ್ಯರ್ಥಿ ಯನ್ನು ಬೆಂಬಲಿಸುವ ಸೂಚನೆ ಇದೆ. ಜಿಲ್ಲೆಯಲ್ಲಿ ಬಿಜೆಪಿ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ. ಬಿಜೆಪಿ ಅಧಿಕಾರದಲ್ಲಿರುವುದು ಪ್ಲಸ್‌ ಪಾಯಿಂಟ್‌. ಬಿಜೆಪಿಯಿಂದ ಎಂ.ಕೆ. ಪ್ರಾಣೇಶ್‌ ಅವರನ್ನೇ ಮತ್ತೆ ಕಣಕಿಳಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ನಲ್ಲಿ ಗಾಯತ್ರಿ ಶಾಂತೆಗೌಡ, ರೇಖಾ ಉದಯಪುರ ಹೆಸರು ಕೇಳಿ ಬರುತ್ತಿದೆ.

ಉತ್ತರ ಕನ್ನಡ 1 ಸ್ಥಾನ
ಹಾಲಿ ಸದಸ್ಯರಾಗಿರುವ ಕಾಂಗ್ರೆಸ್‌ನ ಘೋಕ್ಲೃಕರ್‌ ಶ್ರೀಕಾಂತ್‌ ಲಕ್ಷ್ಮಣ್‌ ವಿಧಾನಸಭಾ ಆಕಾಂಕ್ಷಿ ಎಂದು ಘೋಷಿಸಿಯಾಗಿದೆ. ಹೀಗಾಗಿ ಇಲ್ಲಿ ಕಾಂಗ್ರೆಸ್‌ನಿಂದ ನಿವೇದಿತಾ ಆಳ್ವ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಜತೆಗೆ, ಭೀಮಣ್ಣ ನಾಯ್ಕ ಅಥವಾ ರವೀಂದ್ರನಾಥ ನಾಯ್ಕ, ಹೊನ್ನಾವರ ಕಡತೋಕದ ಶಿವಾನಂದ ಹೆಗಡೆ, ಶಿರಸಿಯ ಭಾಗ್ವತ್‌, ಸಿ.ಎಫ್‌. ನಾಯ್ಕ, ಅವರ ಹೆಸರುಗಳೂ ಇವೆ. ಘೋಕ್ಲೃಕರ್‌ ಮತ್ತು ದೇಶಪಾಂಡೆ ಮಧ್ಯೆ ಸಂಧಾನಕ್ಕೆ ಯತ್ನಗಳು ಸಾಗಿವೆ. ಸಂಧಾನ ಯಶಸ್ಸು ಕಂಡರೆ ಘೋಕ್ಲೃಕರ್‌ ಮತ್ತೊಮ್ಮೆ ಅಭ್ಯರ್ಥಿಯಾಗಬಹುದು. ಬಿಜೆಪಿಯಲ್ಲಿ ಗಣಪತಿ ಉಳ್ವೆಕರ್‌, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದಾಪುರದ ಕೆ.ಜಿ. ನಾಯ್ಕ, ಭಾಸ್ಕರ್‌ ನಾರ್ವೇಕರ್‌ ಸೇರಿದಂತೆ ಅನೇಕ ಹಳಬರು, ಬಿಜೆಪಿಗಾಗಿ ದುಡಿದವರು ಟಿಕೆಟ್‌ ಕೇಳಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಬಿಜೆಪಿ ಭಟ್ಕಳ ಅಥವಾ ಸಿದ್ದಾಪುರ ಮೂಲದವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚಿದೆ.

ಧಾರವಾಡ-ಗದಗ-ಹಾವೇರಿ- 2 ಸ್ಥಾನ
ಪ್ರಸ್ತುತ ಒಂದು ಕ್ಷೇತ್ರ ಬಿಜೆಪಿ ಹಿಡಿತದಲ್ಲಿದ್ದರೆ, ಇನ್ನೊಂದು ಕ್ಷೇತ್ರ ಕಾಂಗ್ರೆಸ್‌ ತೆಕ್ಕೆಯಲ್ಲಿದೆ. ಅವಿಭಜಿತ ಧಾರವಾಡ ಜಿಲ್ಲೆಯ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಕಾಂಗ್ರೆಸ್‌ನಿಂದ ಶ್ರೀನಿವಾಸ ಮಾನೆ, ಬಿಜೆಪಿಯಿಂದ ಪ್ರದೀಪ ಶೆಟ್ಟರ ಆಯ್ಕೆಯಾಗಿದ್ದರು. ಈಗ ಮಾನೆಯವರು ಹಾನಗಲ್‌ನಿಂದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಬೇರೊಬ್ಬರು ಸ್ಥಾನ ಪಡೆಯಲಿದ್ದಾರೆ. ಬಿಜೆಪಿಯಿಂದ ಹಾಲಿ ಸದಸ್ಯ ಪ್ರದೀಪ ಶೆಟ್ಟರ ಟಿಕೆಟ್‌ ಬಯಸಿದ್ದಾರೆ. ಎರಡೂ ಸ್ಥಾನಗಳಿಗೆ ಕಣಕ್ಕಿಳಿಯಲು ಬಿಜೆಪಿ ಬಯಸಿದರೆ, ಆಗ ಬೇರೊಬ್ಬರಿಗೆ ಅವಕಾಶ ಸಿಗಲಿದೆ.  ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಡಾ|ಶರಣಪ್ಪ ಮತ್ತಿಕಟ್ಟಿ, ಮಹಮ್ಮದ್‌ ಯೂಸೂಫ್‌ ಸವಣೂರು, ಇಸ್ಮಾಯಿಲ್‌ ತಮಟಗಾರ, ಸದಾನಂದ ಡಂಗನವರ, ಆನಂದ ಗಡ್ಡದೇವರಮಠ, ಅಲ್ತಾಫ್‌ ಹಳ್ಳೂರು, ಯಾಸಿಫ್‌ ಪಠಾಣ, ಶಾಕೀರ ಸನದಿ, ಮೆಹಬೂಬ್‌ ಪಾಷಾ ಸೇರಿದಂತೆ ಅನೇಕ ಆಕಾಂಕ್ಷಿಗಳು ಇದ್ದಾರೆ.

ವಿಜಯಪುರ-ಬಾಗಲಕೋಟೆ – 2 ಸ್ಥಾನ
ದ್ವಿಸದಸ್ಯ ಕ್ಷೇತ್ರದಲ್ಲಿ ಸದ್ಯ ಮೇಲ್ಮನೆ ವಿಪಕ್ಷ ನಾಯಕರಾಗಿರುವ ಎಸ್‌.ಆರ್‌.ಪಾಟೀಲ ಹಾಗೂ ಸುನೀಲಗೌಡ ಪಾಟೀಲ ಸದಸ್ಯರಾಗಿದ್ದಾರೆ.  ಕಾಂಗ್ರೆಸ್‌ನಿಂದ ಹಾಲಿ ಸದಸ್ಯರಾದ ಎಸ್‌.ಆರ್‌.ಪಾಟೀಲ, ಸುನೀಲಗೌಡ ಪಾಟೀಲ ಮಾತ್ರವಲ್ಲ ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಬಿಜೆಪಿಯಲ್ಲೂ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ವಿಜಯಪುರ ಜಿಲ್ಲೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಗೂಳಪ್ಪ ಶೆಟಗಾರ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಕಾಶ ತಪಶೆಟ್ಟಿ, ಪಿ.ಎಚ್‌.ಪೂಜಾರ, ಎಸ್‌.ಪಿ.ಪಾಟೀಲ, ಅರವಿಂದ ಮಂಗಳೂರು, ಜಗದೀಶ ಗುಡಗುಂಟಿ, ಮಲ್ಲಿಕಾರ್ಜುನ ಚರಂತಿಮಠ ಇವರು ತಮ್ಮನ್ನು ಪರಿಗಣಿಸುವಂತೆ ಕೋರಿಕೆ ಸಲ್ಲಿಸಿದ್ದಾರೆ.

ಶಿವಮೊಗ್ಗ-ದಾವಣಗೆರೆ – ಒಂದು ಸ್ಥಾನ
ಪ್ರಸ್ತುತ ಕಾಂಗ್ರೆಸ್‌ ತೆಕ್ಕೆಯಲ್ಲಿರುವ ಇಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಸಿದ್ದರಾಮಯ್ಯ ಆಪ್ತರಾಗಿರುವ ಹಾಲಿ ಸದಸ್ಯ ಆರ್‌.ಪ್ರಸನ್ನಕುಮಾರ್‌ ಟಿಕೆಟ್‌ ಸಿಗುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್‌ ಸೇವಾದಳದ ಜಿಲ್ಲಾಧ್ಯಕ್ಷ ವೈ.ಎಚ್‌. ನಾಗರಾಜ್‌ ಅವರೂ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಇನ್ನು ಬಿಜೆಪಿಯಲ್ಲಿ ಏಳು ಮಂದಿ ಟಿಕೆಟ್‌ ಸಿಗುವ ನಿರೀಕ್ಷೆ ಹೊಂದಿದ್ದಾರೆ. ಸಚಿವ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್‌, ಡಿ.ಎಸ್‌. ಅರುಣ್‌, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್‌, ಗಿರೀಶ್‌ ಪಟೇಲ್‌, ಮೇಘರಾಜ್‌, ಭಾನುಪ್ರಕಾಶ್‌, ಸಿದ್ದರಾಮಣ್ಣ ಟಿಕೆಟ್‌ ರೇಸ್‌ನಲ್ಲಿರುವ ಪ್ರಮುಖರು. ಅತಿ ಹೆಚ್ಚು ಮಂದಿ ಆಕಾಂಕ್ಷಿಗಳಿ ರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಜೆಡಿಎಸ್‌ನಿಂದ ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿದ್ದರೂ ಜೆಡಿಎಸ್‌ನಿಂದ ಯಾರೂ ಕಣಕ್ಕಿಳಿಯುತ್ತಾರೆ ಎಂಬುದು ಈವರೆಗೂ ಬಹಿರಂಗಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next