ಗುಂಡ್ಲುಪೇಟೆ: ನೆರೆ ರಾಜ್ಯ ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ನೀರಿನ ಹರಿವು ಹೆಚ್ಚಿದ ಪರಿಣಾಮ ಎಲ್ಲಾ ವಾಹನಗಳನ್ನೂ ಕರ್ನಾಟಕ ಗಡಿ ಪ್ರದೇಶವಾದ ಮದ್ದೂರು ಚೆಕ್ ಪೋಸ್ಟ್ ಸಮೀಪ ತಡೆ ಹಿಡಿಯಲಾಗಿದೆ. ಇದರಿಂದಾಗಿ ಕರ್ನಾಟಕ ಮತ್ತು ಕೇರಳ ಸಂಪರ್ಕ ತಾತ್ಕಾಲಿಕವಾಗಿ ಬಂದ್ ಆಗಿದೆ.
ಕೇರಳ ಗಡಿ ಭಾಗದಲ್ಲಿ ಹರಿಯುವ ಕಬಿನಿ ನೀರಿನ ರಭಸ ಹೆಚ್ಚಾದ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಇದರಿಂದಾಗಿ ನಿಂತಿರುವ ವಾಹನಗಳ ಮೇಲೆಯೇ ನೀರು ಹರಿಯುತ್ತಿದ್ದು, ಕಾರು, ಲಾರಿ ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅಪಾಯದಲ್ಲಿ ಸಿಲುಕ್ಕಿದ್ದವರನ್ನು ಪೊಲೀಸ್ ಸಿಬ್ಬಂದಿ ಬೋಟ್‌ನ ಮೂಲಕ ರಕ್ಷಿಸಿದರು.
ಸಂಚಾರ ಬಂದ್ ಗೊಳಿಸಿರುವ ಕಾರಣ ಕರ್ನಾಟಕದ ಗಡಿ ಮದ್ದೂರಿನಿಂದ ರಾಷ್ಟ್ರೀಯ ಹೆದ್ದಾರಿ 799ರ ಕಣ್ಣೇಗಾಲ ಗೇಟ್ ವರೆಗೂ ಸರಿಸುಮಾರು 4 ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ನೀರಿನ ಹರಿವು ಕಡಿಮೆಯಾಗುವವರೆಗೂ ಯಾವುದೇ ಕಾರಣಕ್ಕೂ ಸಂಚಾರ ಪ್ರಾರಂಭವಾಗುವುದಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.
ಕುಸಿದ ಮನೆಗಳು: ಕಳೆದ 4-5 ದಿನಗಳಿಂದ ಸತತವಾಗಿ ಬೀಳುತ್ತಿದ್ದ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ಹಳೆಯ ಮನೆಗಳು ಕುಸಿದು ಬೀಳುತ್ತಿವೆ.
ಕೆರೆಯಂತಾದ ರಸ್ತೆಗಳು: ತಾಲೂಕಿನ ಚನ್ನಮಲ್ಲೀಪುರ ಗ್ರಾಮದ ಗೌರಮ್ಮ, ದೇಶೀಪುರ ಗ್ರಾಮದಲ್ಲಿ ಬಿಳಿಗಿರಯ್ಯ ಎಂಬವರ ಮನೆ ಕುಸಿದು ಬಿದ್ದಿದೆ. ಬೇರಂಬಾಡಿ ಗ್ರಾಪಂ ವ್ಯಾಪ್ತಿಯ ಕಗ್ಗಳದಹುಂಡಿ ಗ್ರಾಮದಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡದ ಪರಿಣಾಮ ಮಳೆ ನೀರು ತಗ್ಗು ಪ್ರದೇಶದಲ್ಲಿ ಮಡುಗಟ್ಟಿ ನಿಂತು ಕೆರೆಯಂತಾಗಿದೆ. ಇದರಿಂದಾಗಿ ಸಮೀಪದ ಮನೆಗಳ ಗೋಡೆಗಳು ಈ ನೀರಿನಿಂದ ಕುಸಿಯುವ ಭೀತಿ ಎದುರಾಗಿದೆ.