ಮಂಗಳೂರು: ಕರ್ನಾಟಕ-ಕೇರಳದ ಗಡಿ ಭಾಗಗಳು ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ತಲೆಮರೆಸಿಕೊಳ್ಳುವ ಕ್ರಿಮಿನಲ್‌ಗಳ ಹೆಡೆ ಮುರಿ ಕಟ್ಟಲು ಉನ್ನತ ಮಟ್ಟದ “ಶಾಶ್ವತ ಸಮನ್ವಯ ವ್ಯವಸ್ಥೆ’ಯೊಂದನ್ನು ರೂಪಿಸಲು ಉಭಯ ರಾಜ್ಯಗಳ ಪೊಲೀಸರು ನಿರ್ಧರಿಸಿದ್ದಾರೆ. ಈ ಮೂಲಕ ಭವಿಷ್ಯ ದಲ್ಲಿ ಪರಿಣಾಮಕಾರಿ ಜಂಟಿ ಕಾರ್ಯಾ ಚರಣೆಗೆ ಸಿದ್ಧತೆ ನಡೆದಿದೆ.
ಡ್ರಗ್ಸ್ ಸಾಗಾಟ, ಗೂಂಡಾಗಿರಿ, ಗಲಭೆಗೆ ಸಂಚು, ದರೋಡೆ ಮೊದಲಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಮಂಗಳೂರು, ಕಾಸರಗೋಡು ಸಹಿತ ಕೇರಳ, ಕರ್ನಾಟಕ ರಾಜ್ಯಗಳ ಕೆಲವೆಡೆ ಅಡಗಿಕೊಳ್ಳುವವರನ್ನು ಪತ್ತೆಹಚ್ಚುವುದು ಎರಡೂ ರಾಜ್ಯಗಳ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಒಂದೆರಡು ವರ್ಷಗಳಲ್ಲಿ ಕೊರೊನಾ ಹಾಗೂ ಇತರ ಕೆಲವು ಸಂದರ್ಭ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಸಮನ್ವಯದ ಸಂವಹನಗಳು ನಡೆದಿದ್ದವು. ಇದನ್ನು ಹೊರತುಪಡಿಸಿದರೆ ನಿರಂತರ ಸಂಪರ್ಕ -ಸಮನ್ವಯಕ್ಕೆ ವ್ಯವಸ್ಥಿತ ವೇದಿಕೆ ಸೃಷ್ಟಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಉನ್ನತ ಮಟ್ಟದ ಸಮನ್ವಯ ವ್ಯವಸ್ಥೆ ಯನ್ನು ಶಾಶ್ವತ ನೆಲೆಯಲ್ಲಿ ರೂಪಿಸಲು ಮುಂದಾಗಿದ್ದಾರೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಶೇ. 20 ಮಂದಿಗೆ ಕೇರಳದಲ್ಲಿ ಆಶ್ರಯ! ಪೊಲೀಸರ ಪ್ರಕಾರ ಕರ್ನಾಟಕದಲ್ಲಿ, ಮುಖ್ಯವಾಗಿ ಕರಾವಳಿ ಭಾಗದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಆರೋಪಿಗಳ ಪೈಕಿ ಶೇ. 20ರಷ್ಟು ಮಂದಿ ಕೇರಳದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಉಳಿದಂತೆ ಸುಮಾರು ಶೇ. 30ರಷ್ಟು ಮಂದಿ ಬೆಂಗಳೂರು ಹಾಗೂ ಶೇ. 20ರಷ್ಟು ಮಂದಿ ಮುಂಬಯಿ ಯಲ್ಲಿ ತಲೆಮರೆಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಇತ್ತೀಚಿನ ವರ್ಷಗಳ ಪ್ರಕರಣಗಳ ಬಹುತೇಕ ಮಂದಿಯನ್ನು ಸೆರೆ ಹಿಡಿಯಲಾಗಿದ್ದರೂ ಹಳೆಯ ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಬಾಕಿ ಇದೆ. ಮುಂಬಯಿಲ್ಲಿ ಈಗಾಗಲೇ ಸಿಸಿಬಿ ಪೊಲೀಸರು ಉತ್ತಮ ಸಂಪರ್ಕ ಜಾಲವನ್ನು ಹಲವು ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದಾರೆ. ಇದೇ ರೀತಿಯ ಸಂಪರ್ಕ ಜಾಲ ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಬಲಗೊಳಿಸಬೇಕಾಗಿದೆ.
ರೌಡಿಗಳ ಪಟ್ಟಿ ಸಿದ್ಧ ಎರಡೂ ರಾಜ್ಯಗಳ ಪೊಲೀಸರು ತಮಗೆ ಅವಶ್ಯವಿರುವ ರೌಡಿಗಳು ಸೇರಿದಂತೆ ಕ್ರಿಮಿನಲ್‌ಗಳ ಪಟ್ಟಿ ಸಿದ್ಧಪಡಿಸಿಕೊಳ್ಳಲು, ಅದನ್ನು ವಿನಿಮಯಿಸಿಕೊಳ್ಳಲು ಸಮನ್ವಯ ವ್ಯವಸ್ಥೆ ನೆರವಾಗಲಿದೆ. ಇದು ಕೇವಲ ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗದೆ ಇನ್‌ಸ್ಪೆಕ್ಟರ್ ಹಂತದ ಅಧಿಕಾರಿಗಳು ಕೂಡ ಪರಸ್ಪರ ನೇರ ಸಂವಹನಕ್ಕೆ ವೇದಿಕೆ ಒದಗಿಸಲಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಮನ್ವಯ ಸಭೆ ಶೀಘ್ರ ನಡೆಯಲಿದೆ ಎಂದು ತಿಳಿದುಬಂದಿದೆ.
ಸಮನ್ವಯ ಬಲಗೊಳ್ಳಲು ಪೂರಕ: ಕರ್ನಾಟಕ ಮತ್ತು ಕೇರಳ ಪೊಲೀಸರಿಗೆ ಪರಸ್ಪರ ಬೇಕಾಗುವ ಕ್ರಿಮಿನಲ್‌ಗಳ ಬಂಧನಕ್ಕೆ ಉತ್ತಮ ಸಮನ್ವಯ ಅಗತ್ಯವಿದೆ. ಈಗಾಗಲೇ ಅಗತ್ಯ ಸಂದರ್ಭದಲ್ಲಿ ಪೊಲೀಸರು ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಉತ್ತಮಗೊಳಿಸಲು ಉನ್ನತ ಮಟ್ಟದ ವ್ಯವಸ್ಥೆ ಇದ್ದರೆ ಅನುಕೂಲವಾಗಬಹುದು. ಈ ನಿಟ್ಟಿನಲ್ಲಿ ಉಭಯ ರಾಜ್ಯಗಳ ಪೊಲೀಸರ ಉನ್ನತ ಮಟ್ಟದ ಸಭೆ ನಡೆಯಲಿದೆ. ಆದರೆ ಜಂಟಿ ಕಾರ್ಯಾಚರಣೆ ಬಗ್ಗೆಯಾಗಲಿ ಇತರ ಯಾವುದೇ ಯೋಜನೆಗಳ ಬಗ್ಗೆ ತೀರ್ಮಾನವಾಗಿಲ್ಲ. –
ಹರಿರಾಂ ಶಂಕರ್, ಡಿಸಿಪಿ, ಮಂಗಳೂರು
–ಸಂತೋಷ್ ಬೊಳ್ಳೆಟ್ಟು