Advertisement

‘ಸರಕಾರದಿಂದ ಮಂಗಳಮುಖಿಯರನ್ನು ಗುರುತಿಸುವ ಕಾರ್ಯ’: ಮಂಜಮ್ಮ ಜೋಗತಿ ಹರ್ಷ

09:50 AM Dec 24, 2019 | Hari Prasad |

ಉಡುಪಿ: ಮಂಗಳಮುಖಿಯರಿಗೆ ಇಂದಿನ ಸಮಾಜದಲ್ಲಿ ಎಲ್ಲರಂತೆ ಮುಕ್ತ ಆವಕಾಶ ಲಭ್ಯವಾಗಿದೆ. ದೇಶದಲ್ಲೇ ಪ್ರಪ್ರಥಮವಾಗಿ ಮಂಗಳಮುಖಿಯನ್ನು ಜಾನಪದ ಕೇಂದ್ರದ ಅಧ್ಯಕ್ಷರನ್ನಾಗಿ ಸರಕಾರ ಮಾಡಿರುವುದೆ ದೊಡ್ಡ ಉದಾಹರಣೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಸ್ವತಃ ಮಂಗಳಮುಖಿಯಾದ ಮಂಜಮ್ಮ ಜೋಗತಿ ಅವರು ತಿಳಿಸಿದರು.

Advertisement

ಉಡುಪಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಬೀಯಿಂಗ್‌ ಸೋಶಿಯಲ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಎಂ.ಜಿ.ಎಂ. ಕಾಲೇಜು ಇವುಗಳ ಆಶ್ರಯದಲ್ಲಿ ರವಿವಾರ ಎಂಜಿಎಂ ಕಾಲೇಜಿನ ಆರ್‌.ಆರ್‌.ಸಿ. ಧ್ವನ್ಯಾ ಲೋಕದಲ್ಲಿ ಹಮ್ಮಿಕೊಂಡ ‘ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲಾ ಕಾಲೇಜುಗಳಲ್ಲಿ ಜಾನಪದ ಶಿಬಿರ
ರಾಜ್ಯದ ಎಲ್ಲ ಶಾಲಾ ಕಾಲೇಜುಗಳ ಜಾನಪದ ಕೇಂದ್ರಗಳ ಸಹಯೋಗದಲ್ಲಿ ಆಸಕ್ತ ಯುವ ವಿದ್ಯಾರ್ಥಿಗಳಿಗೆ ಜಾನಪದ ಕಲೆಗಳ ತರಬೇತಿ ಕಾರ್ಯಕ್ರಮ ಸದ್ಯದಲ್ಲೇ ಅಕಾಡೆಮಿ ಮೂಲಕ ನಡೆಯಲಿದ್ದು, ಇದರಲ್ಲಿ ತರಬೇತಿ ಪಡೆದ ಯುವ ವಿದ್ಯಾರ್ಥಿಗಳನ್ನು ಬೆಂಗಳೂರಿನ ದೊಡ್ಡ ವೇದಿಕೆಯಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವ ಮತ್ತು ಕಲೆಯ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಜಾನಪದ ಕಲೆ, ಕಲೆಗಾರರನ್ನು ಗುರುತಿಸುವ ಕಾರ್ಯಕ್ರಮವನ್ನು ಸರಕಾರದ ವತಿಯಿಂದ ಸದ್ಯದಲ್ಲೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.

ಆರ್‌.ಆರ್‌.ಸಿ. ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ಮಾತನಾಡಿ, ಹಿಂದಿನಿಂದಲೂ ಜಾನಪದ ಮತ್ತು ಶಾಸ್ತ್ರೀಯ ಕಲೆಗಳ ನಡುವೆ ಗೊಂದಲ ಇದೆ. ಜಾನಪದ ಕಲೆ ಬಾಯಿ ಮಾತಿನ ಮೂಲಕ ಒಬ್ಬರಿಂದ ಒಬ್ಬರಿಗೆ ತಲುಪುತ್ತ ಬಂದು ಕಾವ್ಯ, ನೃತ್ಯದ ಮೂಲಕ ಜನರ ಬದುಕಿನ ಚಿತ್ರಣ ನೀಡುತ್ತದೆ. ಆರಂಭದಿಂದಲೂ ಜಾನಪದರ ಬದುಕು ಕಷ್ಟದಿಂದಲೇ ಕೂಡಿದ್ದು ಅಂತಹ ಕಷ್ಟಗಳನ್ನು ಮೆಟ್ಟಿ ಸಾಧನೆ ಮಾಡಿದ ಮಂಜಮ್ಮ ಜೋಗತಿ ಇಂದು ಎಲ್ಲ ವರ್ಗಗಳ ಜನರಿಗೆ ಆದರ್ಶ ಎಂದರು.

ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪೊ›| ಎಂ.ಎಲ್. ಸಾಮಗ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವ ಅಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ| ಶಂಕರ್‌ ಉಪಸ್ಥಿತರಿದ್ದರು.

Advertisement

ಆರಂಭದಲ್ಲಿ ಅನಿರುದ್ದ ಆರ್‌. ಭಟ್‌ ಅವರಿಂದ ಜನಪದ ಗೀತೆ, ಭಾವನಾ ಕೆರೆಮಠ ಜಾನಪದ ನೃತ್ಯ ಪ್ರದರ್ಶನ ನಡೆಯಿತು. ಕೀಬೋರ್ಡ್‌ನಲ್ಲಿ ತರಂಗ್‌ ತಂತ್ರಿ ಅವರು ಸಹಕರಿಸಿದರು. ಕಾರ್ಯಕ್ರಮದ ಸಂಯೋಜಕ ಅವಿನಾಶ್‌ ಕಾಮತ್‌ ನಿರೂಪಿಸಿ, ರವಿರಾಜ್‌ ಎಚ್‌.ಪಿ ವಂದಿಸಿದರು.

ಮಂಗಳಮುಖಿ ಉತ್ಸವ: ಚಿಂತನೆ ದುಡ್ಡಿನ ಹಿಂದೆ ಬೀಳದೆ ಕರ್ತವ್ಯದಲ್ಲಿ ನಿಷ್ಠೆಯಿಂದ ತೊಡಗಿದಾಗ ನಿಜವಾದ ಏಳಿಗೆ ಸಾಧ್ಯ. ದೇವರು ನಾವು ಮಾಡುವ ಕರ್ತವ್ಯದಲ್ಲಿ ಇದ್ದಾನೆ. ಅಧಿಕಾರ ಹುದ್ದೆಗಳು ಶಾಶ್ವತವಲ್ಲ, ನಾವು ಸಾಗಿ ಬಂದ ದಾರಿಯನ್ನು ಯಾವತ್ತೂ ಮರೆಯಬಾರದು.

ತೃತೀಯ ಲಿಂಗಿಗಳನ್ನು ಸಮಾಜಮುಖಿಯಾಗಿಸುವ ನಿಟ್ಟಿನಲ್ಲಿ ಜಾನಪದ ಅಕಾಡೆಮಿ ವತಿಯಿಂದ ಹಲವು ಯೋಜನೆಗಳ ಚಿಂತನೆ ನಡೆದಿದೆ. ವಿವಿಧ ವೃತ್ತಿರಂಗ ಹಾಗೂ ರಾಜ್ಯದ ಎಲ್ಲ ಕಡೆಯ ಮಂಗಳಮುಖಿಯರನ್ನು ಒಟ್ಟು ಸೇರಿಸಿ ಬೆಂಗಳೂರಿನಲ್ಲಿ ಮಂಗಳಮುಖಿ ಉತ್ಸವ ನಡೆಸುವ ಬಗ್ಗೆ ಸರಕಾರದ ಜತೆ ಚರ್ಚಿಸಲಾಗಿದೆ. ಮಂಗಳಮುಖಿಯರಿಗೆ ಮಾಹಿತಿ ಕಾರ್ಯಾಗಾರಗಳ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮಂಜಮ್ಮ ಜೋಗತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next