ಚಿಕ್ಕಮಗಳೂರು: ಬೆಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ರಾಜ್ಯ ಸರ್ಕಾರ ಎನ್ಐಎ ಗೆ ವಹಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಆಗ್ರಹಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈಗ ಉತ್ತರದಲ್ಲಿ ಬಾಂಬ್ ಸದ್ದು ಕ್ಷೀಣವಾಗಿದೆ. ದಕ್ಷಿಣದ ಕೇರಳ, ಕರ್ನಾಟಕದಲ್ಲಿ ಬಾಂಬ್ ಸದ್ದು ಕೇಳಿಸುತ್ತಿದೆ. ಬ್ಯಾಂಡ್ ಬೆಂಗಳೂರಿಗೆ ಬಾಂಬ್ ಬೆದರಿಕೆ ಎದುರಾಗಿದೆ ಎಂದರು.
ಬೆಂಗಳೂರಿನಲ್ಲಿ ನಿನ್ನೆ ನಡೆದ ಬಾಂಬ್ ಬ್ಲಾಸ್ಟ್ ಪರೀಕ್ಷಾರ್ಥ ಸ್ಫೋಟ ಮಾಡಿರುವ ಸಂಶಯವಿದೆ. ಇದು ಸರಣಿ ಸ್ಪೋಟದ ಮುನ್ಸೂಚನೆ ಇರಬಹುದು ಎಂದರು.
ಸರ್ಕಾರ ಇಡೀ ಪ್ರಕರಣವನ್ನು ಎನ್ಐಎಗೆ ವಹಿಸಬೇಕು. ಭಯೋತ್ಪಾದಕರು ಕರ್ನಾಟಕ ಸ್ಲೀಪರ್ ಸೆಲ್ ಮಾಡಿಕೊಂಡಿದ್ದು ಹೊಸದಲ್ಲ. ಕರ್ನಾಟಕ ಟ್ರೈನಿಂಗ್ ಸೆಂಟರ್ ಆಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದರು.
ಸರ್ಕಾರ ಅಭದ್ರಗೊಳಿಸಲು ಒಬ್ಬ ಶಾಸಕನಿಗೆ 50 ಕೋಟಿ ನೀಡಲಾಗುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಆಪಾದನೆ ಮಾಡುತ್ತಿರುತ್ತಾರೆ. ಅದರಲ್ಲಿ ಹುರುಳಿಲ್ಲ. ಸಿದ್ದರಾಮಯ್ಯ ವೈಎಸ್ ಟಿ ಟ್ಯಾಕ್ಸ್, ಡಿ.ಕೆ.ಶಿವಕುಮಾರ್ ಕನಕಪುರ ರಿಪಬ್ಲಿಕ್ ಟ್ಯಾಕ್ಸ್ ಈ ಟ್ಯಾಕ್ಸ್ ನಲ್ಲಿ ಶಾಸಕರಿಗೂ ಪಾಲು ಕೊಟ್ಟು ಚೆನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.
ತಾನು ಕಳ್ಳ ಪರರ ನಂಬ ಗಾದೆ ಇವರಿಗೆ ಅನ್ವಯವಾಗುತ್ತದೆ. ಟ್ಯಾಕ್ಸ್ ಕಲೆಕ್ಟ್ ಮಾಡಿ ಯಾರ ಮೂಲಕ ಕೊಡುತ್ತಿದ್ದಾರೆ ಗೊತ್ತಿದೆ. ಇಂಟಲಿಜೆನ್ಸ್ ಎಡಿಜಿಪಿ ಅವರೇ ನೀವು ಭಯೋತ್ಪಾದಕ ಹಿಂದೆ ಹೋಗಿ ಸಿ.ಟಿ.ರವಿ ಹಿಂದೆ ಹೋದರೆ ನಿಮಗೆ ಏನು ಸಿಗಲ್ಲ. ಭಯೋತ್ಪಾದಕ ಹಿಂದೆ ಹೋಗಿದ್ರೆ ಬಾಂಬ್ ಬ್ಲಾಸ್ಟ್ ತಡೆಯಬಹುದಿತ್ತು. ಸಿ.ಎಂ. ಅಣತಿಯೋ ಯಾರದ್ದೋ ಗೊತ್ತಿಲ್ಲ ಅವರು ನಮ್ಮ ಹಿಂದೆ ಬಿದ್ದಿದ್ದಾರೆ ಎಂದು ಸರ್ಕಾರದ ವಿರುದ್ದ ಹರಿಹಾಯ್ದರು.