Advertisement

ಪ್ರತಿಭಾವಂತ ಕ್ರಿಕೆಟ್‌ ಪಟುಗಳ ತವರು ಕರ್ನಾಟಕ: ಕೆ.ವೈ.ವೆಂಕಟೇಶ್

12:38 PM Feb 02, 2023 | Team Udayavani |

ಬೆಂಗಳೂರು: ಭಾರತೀಯ ಕ್ರಿಕೆಟ್‌ ರಂಗಕ್ಕೆ ಅಪ್ರತಿಮ ಕೊಡುಗೆ ನೀಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಕಲಿಗಳ ತವರು ಎಂದು ಪ್ಯಾರಾಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಕ್ರೀಡಾಪಟು, ಪದ್ಮಶ್ರೀ ಪುರಸ್ಕೃತ ಕೆ.ವೈ.ವೆಂಕಟೇಶ್ ಹೇಳಿದ್ದಾರೆ.

Advertisement

ಬೆಂಗಳೂರಿನ ಕಪಿಲ್ ಸ್ಪೋರ್ಟ್ ಮತ್ತು ಕಲ್ಚರಲ್ ಅಸೋಸಿಯೇಷನ್, ಬೆಂಗಳೂರು ಹೊರವಲಯದ ಬಿಐಸಿಸಿ ಇನ್ಫಿನಿಟಿ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ಆಯೋಜಿಸಿದ್ದ ‘ಪಿಪಿಎಲ್ ಕಿಯಾ ಕೆಪಿಎಲ್‘ ಮೊದಲ ಸೀಸನ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಭಾರತ ಕ್ರಿಕೆಟ್ ತಂಡಕ್ಕೆ ಹಲವಾರು ದಶಕಗಳಿಂದ ಘಟಾನುಘಟಿ ಕ್ರಿಕೆಟ್ ಪಟುಗಳನ್ನು ನೀಡಿದ ಹೆಮ್ಮೆ ನಮ್ಮ ರಾಜ್ಯಕ್ಕೆ ಸಲ್ಲುತ್ತದೆ. ಭಾರತ ಕ್ರಿಕೆಟ್ ತಂಡದಲ್ಲಿ ಆರೇಳು ಆಟಗಾರರು ಏಕಕಾಲದಲ್ಲಿ ಪ್ರತಿನಿಧಿಸುತ್ತಿದ್ದ ಕಾಲವೊಂದಿತ್ತು. ಆ ಕಾಲ ಮತ್ತೆ ಮರುಕಳಿಸಬೇಕು ಎಂದು ವೆಂಕಟೇಶ್ ಆಶಿಸಿದರು.

ರಾಜ್ಯದ ಗತವೈಭವ ಪುನರಾವರ್ತನೆ ಆಗಬೇಕಾದರೆ, ಶಾಲಾ ದಿನಗಳಲ್ಲೇ ಕ್ರಿಕೆಟ್ ತರಬೇತಿ ನೀಡಿ, ಆಟಗಾರರನ್ನು ಸಜ್ಜುಗೊಳಿಸುವ ಅನಿವಾರ್ಯತೆ ಇದೆ. ಕ್ರಿಕೆಟ್ ಆಟಗಾರರು ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿದ್ದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದ ಅವರು, ಈ ನಿಟ್ಟಿನಲ್ಲಿ ನವಪೀಳಿಗೆಯ ಕ್ರಿಕೆಟ್ ಆಸಕ್ತರು ಹೆಚ್ಚು ಹೆಚ್ಚು ತರಬೇತಿಗೆ ಆದ್ಯತೆ ನೀಡಿ, ಭಾರತೀಯ ಕ್ರಿಕೆಟ್‌ ರಂಗವನ್ನು ಬಲಿಷ್ಟವಾಗಲು ಕೊಡುಗೆ ನೀಡಿ, ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ವೆಂಕಟೇಶ್ ಕರೆ ನೀಡಿದರು.

16 ವರ್ಷದೊಳಗಿನ ಕ್ರಿಕೆಟ್‌ನಲ್ಲಿ ಮಿಸ್ಟಿಕ್ಸ್ ಇಲೆವೆನ್ ತಂಡ ಟ್ರೋಫಿ ಗೆದ್ದುಕೊಂಡಿತು. ಹಾಕ್ಸ್ ಇಲೆವೆನ್ ರನ್ನರ್ಸ್ ಟ್ರೋಫಿ ಪಡೆಯಿತು. 14 ವರ್ಷದೊಳಗಿನ ವಿಭಾಗದಲ್ಲಿ ಮಿಸ್ಟಿಕ್ಸ್ ಇಲೆವೆನ್ ತಂಡ ಟ್ರೋಫಿ ಪಡೆದುಕೊಂಡರೆ, ಡೇರ್ ಡೆವಿಲ್ ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು.

ಕಪಿಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ವಿಲಿಯಮ್, ಕ್ರೀಡಾ ಪ್ರೋತ್ಸಾಹಕ ಮನೋಜ್, ಕ್ರಿಕೆಟ್ ತರಬೇತುದಾರರು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next