ಬೆಂಗಳೂರು: ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಾರ್ವತ್ರಿಕ ಮೂಲ ಆದಾಯ (UBI) ಪರಿಕಲ್ಪನೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ ” ಇದು ಕರ್ನಾಟಕ ಅಭಿವೃದ್ಧಿ ಮಾದರಿ, ರಾಜ್ಯವು ಸಾಮಾಜಿಕ ಕಲ್ಯಾಣವನ್ನು ಕ್ರಾಂತಿಗೊಳಿಸಲು ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ” ಎಂದರು.
ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಮೊತ್ತ ಒದಗಿಸುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕ. ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷಗಳು ಹೇಳಿದ್ದವು. ಆದರೆ ಈಗಾಗಲೇ 3 ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಗೃಹ ಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಾರಂಭವಾಗಿದೆ. ಯುವನಿಧಿ ಯೋಜನೆಯು ಡಿಸೆಂಬರ್ ತಿಂಗಳಿನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದರು.
ರಾಜ್ಯ ಸರಕಾರವು 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದೆ ಎಂದು ಒತ್ತಿ ಹೇಳಿದ ಸಿಎಂ, ”ಸರಕಾರವು ಬಡವರ ಪರ. ಇಂಧನ ಬೆಲೆ ಏರಿಕೆ, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ತತ್ತರಿಸಿರುವ ಜನರ ಬದುಕನ್ನು ಸುಧಾರಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಬಳಲುತ್ತಿರುವ ಜನರ ಜೇಬು ತುಂಬಿಸುವ ಕೆಲಸ ಮಾಡಿದ್ದೇವೆ” ಎಂದರು.
”ಈ ವರ್ಷ ಐದು ಗ್ಯಾರಂಟಿಗಳಿಗೆ 30,000 ಕೋಟಿಗೂ ಹೆಚ್ಚು ಹಣ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ನಿಧಿ ಕ್ರೋಢೀಕರಣದ ಬಗ್ಗೆಯೂ ಬಜೆಟ್‌ನಲ್ಲಿ ವಿವರಿಸಲಾಗಿದೆ. ವಾರ್ಷಿಕವಾಗಿ ಈ ಕಾರ್ಯಕ್ರಮಗಳಿಗೆ ಒಟ್ಟು 52,068 ಕೋಟಿ ರೂ. ಈ ಗ್ಯಾರಂಟಿ ಯೋಜನೆಗಳಿಂದ 1.30 ಕೋಟಿ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಿಸುಮಾರು 4 ರಿಂದ 5 ಸಾವಿರ ರೂಪಾಯಿಗಳು ಸಿಗುತ್ತವೆ.ದೇಶದ ಇತಿಹಾಸದಲ್ಲಿ ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಜನರಿಗೆ ಇಷ್ಟು ದೊಡ್ಡ ಮೊತ್ತವನ್ನು ವಿತರಿಸುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ವರ್ಷ ನಾವು 5 ಗ್ಯಾರಂಟಿಗಳಿಗಾಗಿ 35,410 ಕೋಟಿಗಳನ್ನು ಮೀಸಲಿಟ್ಟಿದ್ದೇವೆ” ಎಂದು ಹೇಳಿದರು.
“2023-24 ನೇ ಸಾಲಿನಲ್ಲಿ ಅಧಿಕಾರಕ್ಕೆ ಬಂದ ನಂತರ, ನಮ್ಮ ಪಕ್ಷ ಈ ಹಣಕಾಸು ವರ್ಷಕ್ಕೆ ಸರ್ಕಾರದ ಬಜೆಟ್ ಅನ್ನು ಮಂಡಿಸಿದೆ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಸರಕಾರದ ನೀತಿ ನಿಲುವುಗಳು ಮತ್ತು ಪ್ರಣಾಳಿಕೆ ಭರವಸೆಗಳನ್ನು ಒಳಗೊಂಡಿರುವ ಬಜೆಟ್ ಅನ್ನು ಮಂಡಿಸುವುದು ನಮ್ಮ ಕರ್ತವ್ಯ” ಎಂದರು.