Advertisement

ವಿದೇಶಿ ವಿದ್ಯಾರ್ಥಿಗಳಿಗೆ ಕರ್ನಾಟಕವೇ ಅಚ್ಚುಮೆಚ್ಚು

08:56 AM Sep 26, 2019 | sudhir |

ಹೊಸದಿಲ್ಲಿ: ಉನ್ನತ ವಿದ್ಯಾಭ್ಯಾಸ ಪಡೆಯಲು ವಿದೇಶಗಳಿಂದ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸುತ್ತಿರುವುದು ಗೊತ್ತೇ ಇದೆ. ಅದರಲ್ಲೂ ಹೆಮ್ಮೆಯ ಸಂಗತಿ ಎಂದರೆ ಈ ಶಿಕ್ಷಣಾರ್ಥಿಗಳಿಗೆ ಕರ್ನಾಟಕವೇ ಅಚ್ಚುಮೆಚ್ಚು ಅಂತೆ!

Advertisement

ಹೀಗೆಂದು ಕೇಂದ್ರ ಮಾನವ ಸಂಪದ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶವೇ ತಿಳಿಸಿದೆ. ಭಾರತದಲ್ಲಿ ಸದ್ಯ 37,275 ವಿದೇಶಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ ಅತೀ ಹೆಚ್ಚಿನ ವಿದ್ಯಾರ್ಥಿಗಳಿದ್ದು, ಇಲ್ಲಿ 10,023 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಅನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (5,003)ವಿದೆ.

ನೇಪಾಲದಿಂದ ಅತೀ ಹೆಚ್ಚು
ಉನ್ನತ ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಬರುವ ವಿದೇಶಿಯರ ಪೈಕಿ ಅತೀ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ನೇಪಾಲದವರು ಎಂದೂ ಈ ವರದಿ ತಿಳಿಸಿದೆ. ನೇಪಾಲ ಬಿಟ್ಟರೆ ಎರಡನೇ ಸ್ಥಾನದಲ್ಲಿ ಅಫ್ಘಾನಿಸ್ಥಾನವಿದೆ. ವಿದೇಶದಿಂದ ಬರುವ ವಿದ್ಯಾರ್ಥಿಗಳಲ್ಲಿ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ನೇಪಾಲ, ಅಫ್ಘಾನ್‌, ಬಾಂಗ್ಲಾದೇಶ, ಸೂಡಾನ್‌, ಭೂತಾನ್‌, ನೈಜೀರಿಯ ಸಹಿತ ಸುಮಾರು 164 ದೇಶಗಳಿಂದ ಭಾರತಕ್ಕೆ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಆಗಮಿಸುತ್ತಾರೆ ಎಂದಿದೆ ವರದಿ.

ಬಿ.ಟೆಕ್‌ಗೆ ಬೇಡಿಕೆ
ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಆಯ್ಕೆ ಮಾಡುವ ಕೋರ್ಸ್‌ಗಳಲ್ಲಿ ಬಿ.ಟೆಕ್‌ಗೆ ಹೆಚ್ಚಿನ ಬೇಡಿಕೆಯಿದೆ. 8,861 ವಿದ್ಯಾರ್ಥಿಗಳು ಈ ಕೋರ್ಸ್‌ ಮಾಡುತ್ತಿದ್ದು, ಶೇ.85ರಷ್ಟು ಯುವಕರು ಬಿ.ಟೆಕ್‌ ತಮ್ಮ ಆದ್ಯತೆಯ ಕೋರ್ಸ್‌ ಎಂದಿದ್ದಾರೆ. ಅನಂತರದ ಸ್ಥಾನವನ್ನು ಬಿಬಿಎ(3,354), ಬಿಎಸ್‌ಸಿ(3,320), ಬಿಎ(2226) ಪಡೆದುಕೊಂಡಿವೆ. ಪದವಿ ಕೋರ್ಸ್‌ಗಳಲ್ಲಿ ಬಿ.ಫಾರ್ಮಾ, ಬಿಸಿಎ, ಎಂಬಿಬಿಎಸ್‌, ನರ್ಸಿಂಗ್‌ ಹಾಗೂ ಬಿಡಿಎಸ್‌ಗೆ ಹೆಚ್ಚಿನ ಬೇಡಿಕೆ ಇದೆ ಎಂದು ಆಲ್‌ ಇಂಡಿಯಾ ಸರ್ವೇ ಆಫ್ ಹೈಯರ್‌ ಎಜುಕೇಷನ್‌ ವರದಿ ಹೇಳಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next